ಅದ್ಧೂರಿ, ಆಡಂಬರ ಬಿಟ್ಟು ಸರಳ ವಿವಾಹವಾದ ಹೆಚ್ಚುವರಿ ಜಿಲ್ಲಾಧಿಕಾರಿ – ಮಂತ್ರಮಾಂಗಲ್ಯ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಮದುಮಕ್ಕಳು

ಅದ್ಧೂರಿ, ಆಡಂಬರ ಬಿಟ್ಟು ಸರಳ ವಿವಾಹವಾದ ಹೆಚ್ಚುವರಿ ಜಿಲ್ಲಾಧಿಕಾರಿ – ಮಂತ್ರಮಾಂಗಲ್ಯ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಮದುಮಕ್ಕಳು

ಮದುವೆ ಅಂದಾಕ್ಷಣನೇ ಅದ್ಧೂರಿ, ಆಡಂಬರ ಕಣ್ಣ ಮುಂದೆ ಬರುತ್ತೆ. ಇನ್ನೂ ಕೆಲವರು ಕೈಯಲ್ಲಿ ಹಣ ಇಲ್ಲದಿದ್ರೂ ಸಾಲ ಸೋಲ ಮಾಡಿ ಗ್ರ್ಯಾಂಡ್ ಆಗಿ ಸಪ್ತಪದಿ ತುಳಿಯುತ್ತಾರೆ. ಕಲ್ಯಾಣಮಂಟಪಗಳಿಗೆ ಲಕ್ಷಾಂತರ ರೂಪಾಯಿ ನೀಡುತ್ತಾರೆ. ಆದರೆ ಅಪರ ಜಿಲ್ಲಾಧಿಕಾರಿಯೊಬ್ಬರು ಸರಳ ವಿವಾಹವಾಗುವ ಮೂಲಕ ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ.

ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹಾಗೂ ಎಲ್ಎಲ್ ಬಿ ಓದುತ್ತಿರುವ ಎಂ.ಆರ್. ಹರೀಶ್ ಕುಮಾರ್ ಅವರು ಕುವೆಂಪು ಅವರ ಮಂತ್ರ ಮಾಂಗಲ್ಯ ಮೂಲಕ ಮೈಸೂರಿನ ಖಾಸಗಿ ರೆಸಾರ್ಟ್‌ನಲ್ಲಿ ಮದುವೆಯಾಗಿದ್ದಾರೆ.  ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಭಾವಚಿತ್ರಗಳಿಗೆ ಪುಷ್ಪಾರ್ಪಣೆ ನೆರವೇರಿಸಿದ ಗೀತಾ ಹುಡೇದ್ ಹಾಗು ಹರೀಶ್ ಕುಮಾರ್ ನಂತರ ಹಾರ ಬದಲಾಯಿಸಿಕೊಂಡರು. ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ಮಂತ್ರ ಮಾಂಗಲ್ಯದ ಪ್ರತಿಜ್ಞಾವಿಧಿಯನ್ನು ಮದುಮಕ್ಕಳಿಗೆ ಬೋಧಿಸಿದರು.

ಇದನ್ನೂ ಓದಿ : ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಗ್ಗಪ್ಪ, ಸುಶ್ಮಿತಾ ಮದುವೆ – ಪ್ರೀತಿಸಿ ಒಂದಾದ ರಿಯಾಲಿಟಿ ಶೋ ಜೋಡಿ

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೊಂಚಗೇರಿ ಗ್ರಾಮದ ಗೀತಾ ಹುಡೇದ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿಯ ಹರೀಶ್ ಕುಮಾರ್ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕೆಂಗಲ್ ಗ್ರಾಮದಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಈ ಇಬ್ಬರ ಪರಿಚಯ ಸ್ನೇಹವಾಗಿ, ಪ್ರೇಮಿಗಳಾಗಿ ಇದೀಗ ಮದುವೆಯಾಗುವ ಮೂಲಕ ಒಂದಾದರು. ಗೀತಾ ಅವರ ಚಿಕ್ಕಪ್ಪ, ನಿವೃತ್ತ ಸೈನಿಕ ಚೆನ್ನಬಸಪ್ಪ ಹುಡೇದ ಹಾಗೂ ಅವರ ಚಿಕ್ಕಮ್ಮ ಲಕ್ಷ್ಮಿ ಅಲ್ಲದೆ ಹರೀಶ್ ಕುಮಾರ್ ಅವರ ತಂದೆ ಜಿ.ರುದ್ರಪ್ಪ ಹಾಗೂ ತಾಯಿ ಪಾರ್ವತಮ್ಮ ವೇದಿಕೆ ಮೇಲಿದ್ದು ಮದುಮಕ್ಕಳನ್ನು ಆಶೀರ್ವದಿಸಿದರು.

ಮಂತ್ರ ಮಾಂಗಲ್ಯ ಎಂಬುದು ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ಧತಿಯಾಗಿದೆ. ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದ ವಿಶ್ವಮಾನವ ವಿವಾಹ ಪದ್ಧತಿ ಎಂದರು ತಪ್ಪಾಗಲಾರದು. ವರದಕ್ಷಿಣೆ, ಗೊಡ್ಡು ಸಂಪ್ರದಾಯಗಳು, ಅರ್ಥವಿಲ್ಲದ ಆಚರಣೆಗಳು, ಮತ್ತು ಆಡಂಬರವನ್ನು ಒಳಗೊಂಡ ಮದುವೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನಗಂಡ ಕುವೆಂಪುರವರು 1960ರ ದಶಕದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ ಮದುವೆ.

 

Shantha Kumari