ಹೇಳಿದ್ದಷ್ಟು ವಧುದಕ್ಷಿಣೆ ಕೊಟ್ಟಿಲ್ಲ ಎಂದು ಸಿಟ್ಟಿಗೆದ್ದ ಮದುಮಗಳು – ಕೊನೇ ಕ್ಷಣದಲ್ಲಿ ಮದುವೆಯೇ ಕ್ಯಾನ್ಸಲ್

ಹೇಳಿದ್ದಷ್ಟು ವಧುದಕ್ಷಿಣೆ ಕೊಟ್ಟಿಲ್ಲ ಎಂದು ಸಿಟ್ಟಿಗೆದ್ದ ಮದುಮಗಳು – ಕೊನೇ ಕ್ಷಣದಲ್ಲಿ ಮದುವೆಯೇ ಕ್ಯಾನ್ಸಲ್

ವರದಕ್ಷಿಣೆಯಿಂದಾಗ ಅದೆಷ್ಟೋ ಮದುವೆಗಳು ಮುರಿದು ಬಿದ್ದಿರುವುದನ್ನು ಕೇಳಿದ್ದೇವೆ. ವರದಕ್ಷಿಣೆ ಕಿರುಕುಳದಿಂದ ಅದೆಷ್ಟೋ ಹೆಣ್ಣುಮಕ್ಕಳ ಜೀವನ ನರಕವಾಗಿರುವುದನ್ನೂ ಕೇಳಿದ್ದೇವೆ. ವರದಕ್ಷಿಣೆ ವಿಚಾರವಾಗಿ ಮದುವೆ ದಿನ ಗಂಡಿನ ಕಡೆಯವರು ಕಿರಿಕ್ ಮಾಡೋದು ಕೂಡಾ ಕೇಳಿದ್ದೇವೆ. ಆದರೆ, ವಧುದಕ್ಷಿಣೆ ನೀಡಿದ್ದು ಸಾಕಾಗಿಲ್ಲ ಅಂತಾ ಇಲ್ಲೊಬ್ಬಳು ಮದುಮಗಳು ಕಡೇ ಕ್ಷಣದಲ್ಲಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ತೆಲಂಗಾಣದ ಹೈದರಾಬಾದ್ ನಗರದ ಹೊರವಲಯದಲ್ಲಿ ಆಯೋಜಿಸಿದ್ದ ಮದುವೆಯನ್ನು ಮದುಮಗಳು ಕೊನೆಯ ಕ್ಷಣದಲ್ಲಿ ರದ್ದುಪಡಿಸಿದ್ದಾಳೆ. ಇದಕ್ಕೆ ಕಾರಣ ಗಂಡಿನ ಮನೆಯವರು ತಾವು ಕೇಳಿದಷ್ಟು ವಧುದಕ್ಷಿಣೆ ನೀಡದೆ ಇರುವುದು.

ಇದನ್ನೂ ಓದಿ:  ಮದುವೆಯಾದ ಮಾರನೇ ದಿನವೇ ಮದುಮಗ ಮಾಯ – ಟ್ರಾಫಿಕ್ ಜಾಮ್ ನಲ್ಲೇ ಪತ್ನಿ ಬಿಟ್ಟು ಪರಾರಿ..!

ವರನ ಮನೆಯವರು 2 ಲಕ್ಷ ರೂಪಾಯಿಗೂ ಹೆಚ್ಚು ಹಣ ನೀಡಬೇಕು ಎಂದು ವಧು ಷರತ್ತು ಹಾಕಿದ್ದಳು. ಆದರೆ ಗಂಡಿನ ಕಡೆಯವರು ಅಷ್ಟು ಹಣ ನೀಡಿಲ್ಲ ಎಂದು ಕೋಪಗೊಂಡ ಆಕೆ, ಕೊನೆಯ ಕ್ಷಣದಲ್ಲಿ ಮದುವೆ ಬೇಡ ಎಂದಿದ್ದಾಳೆ. ಘಾಟ್ಕೇಸರದಲ್ಲಿ ಗುರುವಾರ ಮದುವೆ ನಿಗದಿಯಾಗಿತ್ತು. ಭದ್ರಾದ್ರಿ ಕೋಥಗುಡೆಂ ಜಿಲ್ಲೆಯ ಅಸ್ವರೋಪೇಟೆಯ ವಧು ಮದುವೆಯಾಗಲು ಹಾಲ್ ಹತ್ತಿರವೇ ಇದ್ದ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಳು. ಆದರೆ ಆಕೆ ಮದುವೆ ಮಂಟಪಕ್ಕೆ ಬರಲು ನಿರಾಕರಿಸಿದ್ದಾಳೆ. ತಾಳಿಕಟ್ಟುವ ಮುಹೂರ್ತಕ್ಕಾಗಿ ಕಾಯುತ್ತಿದ್ದ ಆಹ್ವಾನಿತರು, ಬಂದು ಬಳಗದವರು ವಧುವಿನ ದಿಢೀರ್ ನಿರ್ಧಾರದಿಂದ ಕಂಗಾಲಾಗಿದ್ದಾರೆ. ಮದುವೆ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಭಾಂಗಣಕ್ಕೆ ವಧು ಬಾರದಿದ್ದರಿಂದ, ಆಕೆ ಹಾಗೂ ಆಕೆಯ ಕುಟುಂಬ ಉಳಿದುಕೊಂಡಿದ್ದ ಹೋಟೆಲ್‌ಗೆ ವರನ ಮನೆಯವರು ಹೋಗಿ ವಿಚಾರಿಸಿದ್ದಾರೆ. ಆಗ, ನೀವು ಕೊಟ್ಟಿರುವ ವಧುದಕ್ಷಿಣೆ ಸಾಲದು, ಇನ್ನೂ ಹೆಚ್ಚು ಹಣ ನೀಡಬೇಕೆಂದು ಮದುಮಗಳು ಬೇಡಿಕೆಯಿಟ್ಟಿದ್ದಾಳೆ. ವಧುವಿನ ಡಿಮ್ಯಾಂಡ್ ಕೇಳಿ ಈಗ ವರನ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಲ್ಲಿಗೆ ವಧುವಿನ ಮನೆಯವರನ್ನೂ ಕರೆಯಿಸಲಾಗಿದೆ. ಇಬ್ಬರ ನಡುವೆ ಸಂಧಾನ ಮಾತುಕತೆ ನಡೆದಿದೆ. ಕೊನೆಗೆ ತಮ್ಮೊಳಗೆ ವಿವಾದ ಬಗೆಹರಿಸಿಕೊಂಡ ಎರಡೂ ಕುಟುಂಬಗಳು ಮದುವೆ ರದ್ದುಗೊಳಿಸುವುದೇ ಸರಿ ಎಂಬ ತೀರ್ಮಾನ ಕೈಗೊಂಡಿದೆ.

suddiyaana