ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ – ಮಗನ ಶವಕ್ಕೆ ಮುತ್ತಿಟ್ಟು ಕಣ್ಣೀರಿಟ್ಟ ತಾಯಿ..!

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ – ಮಗನ ಶವಕ್ಕೆ ಮುತ್ತಿಟ್ಟು ಕಣ್ಣೀರಿಟ್ಟ ತಾಯಿ..!

ಎದೆಯೆತ್ತರಕ್ಕೆ ಬೆಳೆದ ಮಗ ಮನೆಗೆ ಆಧಾರಸ್ತಂಭವಾಗಿದ್ದ. ಅಮ್ಮನ ಪ್ರಪಂಚವೇ ಮಗನಾಗಿದ್ದ. ಆದರೆ, ವಿಧಿ ಬರಹದ ಮುಂದೆ ತಾಯಿಗೆ ಪುತ್ರಶೋಕ ನಿಶ್ಚಯವಾಗಿತ್ತು. ಕೆಲಸಕ್ಕೆ ಹೊರಟಿದ್ದ ಮಗ ಬೈಕ್‌ನಿಂದ ಆಯತಪ್ಪಿ ಬಿದ್ದಿದ್ದ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗ ಬದುಕಿ ಬರುತ್ತಾನೆ ಎಂದು ತಾಯಿ ಹೃದಯ ದೇವರಿಗೆ ಹೊತ್ತ ಹರಕೆ ಅದೆಷ್ಟೋ.. ಆದರೆ, ವೈದ್ಯರು ತಾಯಿಯ ಬಳಿ ಬಂದು ನಿಮ್ಮ ಮಗ ಬದುಕುವುದಿಲ್ಲ.  ಮೆದಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸುತ್ತಾರೆ. ತನ್ನ ಕರುಳಿನ ಕುಡಿ ಬದುಕುವುದಿಲ್ಲ ಅಂತಾ ಗೊತ್ತಾದಮೇಲೆ ಆ ತಾಯಿ ಮಗನ ಅಂಗಾಂಗ ದಾನಕ್ಕೆ ಮುಂದಾಗುತ್ತಾರೆ. ಕೊನೆಗೂ ಆ ಮಗ ಸಾವಿನಲ್ಲೂ ಸಾರ್ಥಕತೆ ಮರೆಯುತ್ತಾನೆ.

ಇದನ್ನೂ ಓದಿ: ತನ್ನದೇ ಮ್ಯಾನೇಜರ್ ನಿಂದ ಮೋಸ ಹೋದ ರಶ್ಮಿಕಾ ಮಂದಣ್ಣ – ವ್ಯವಹಾರ ನೋಡಿಕೊಳ್ಳುತ್ತಿದ್ದವನಿಂದ ₹80 ಲಕ್ಷ ದೋಖಾ

ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ನಿವಾಸಿ 32 ವರ್ಷದ ಗಿರೀಶ್ ಅಲಿಯಾಸ್ ಸಾಧು ಮಹಾರಾಜ್ ಮೃತ ಯುವಕ. ಶುಕ್ರವಾರ ರಾತ್ರಿ ಮಂಡ್ಯ-ಚಿಕ್ಕಮಂಡ್ಯ ನಡುವಿನ ರಸ್ತೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಗಳ ಕಚೇರಿ ಎದುರು ಬೈಕ್‌ನಿಂದ ಆಯತಪ್ಪಿ ಬಿದ್ದಿದ್ದನು. ತೀವ್ರ ಗಾಯಗೊಂಡಿದ್ದ ಈತನನ್ನು ಬೆಂಗಳೂರಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಮೆದಳು ನಿಷ್ಕ್ರಿಯಗೊಂಡಿರುವುದಾಗಿ ಪೋಷಕರಿಗೆ ತಿಳಿಸಿದ್ದಾರೆ. ಈ ಸುದ್ದಿಯನ್ನು ಕೇಳುತ್ತಿದ್ದಂತೆ ತಾಯಿಗೆ ಆಘಾತವಾದರೂ ಕೂಡಾ ಅಂಥಾ ಸಮಯದಲ್ಲೂ ದಿಟ್ಟ ನಿರ್ಧಾರ ಕೈಕೊಂಡಿದ್ದಾರೆ. ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಮಗನ ಶವಕ್ಕೆ ಮುತ್ತಿಟ್ಟು ಕಣ್ಣೀರಿಟ್ಟಿದ್ದಾರೆ. ಸಾವಿನ ನಂತರವೂ ಮತ್ತೊಬ್ಬರ ಬದುಕಿಗೆ ಬೆಳಗಾದ ಗಿರೀಶ್ ಮತ್ತವನ ಕುಟುಂಬದ ತ್ಯಾಗ, ಮಾನವೀಯತೆಗೆ ಗ್ರಾಮಸ್ಥರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲೂ ಗಿರೀಶನ ಪಾರ್ಥಿವ ಶರೀರವನ್ನು ಹೊರಗೆ ತರುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಮತ್ತು ಸಾರ್ವಜನಿಕರು ಚಪ್ಪಾಳೆ ತಟ್ಟುತ್ತಾ ಗಿರೀಶ್ ಸಾವಿನ ಸಾರ್ಥಕತೆಯನ್ನು ಕೊಂಡಾಡಿದ್ದಾರೆ. ಸಾವಿನ ನಂತರವೂ ಬೇರೆಯವ ಮೂಲಕ ಬದುಕಿರುವ ಗಿರೀಶನ ಬಗ್ಗೆ ಹೆಮ್ಮೆ ಪಡುತ್ತಿರುವ ಸ್ನೇಹಿತರ, ಗಿರೀಶನ ಫೋಟೋ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಶ್ರದ್ದಾಂಜಲಿ ಸೂಚಿಸುತ್ತಿದ್ದಾರೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

suddiyaana