ಬಾಯ್ಕಾಟ್ ಮಾಲ್ಡೀವ್ಸ್! – ಬಾಲಿವುಡ್, ಕ್ರಿಕೆಟ್ ತಾರೆಯರ ಅಭಿಯಾನ- ಪ್ರಧಾನಿ ಮೋದಿ ಪರ ಸೆಲೆಬ್ರಿಟಿಗಳ ಬ್ಯಾಟಿಂಗ್

ಬಾಯ್ಕಾಟ್ ಮಾಲ್ಡೀವ್ಸ್! –  ಬಾಲಿವುಡ್, ಕ್ರಿಕೆಟ್ ತಾರೆಯರ ಅಭಿಯಾನ- ಪ್ರಧಾನಿ ಮೋದಿ ಪರ ಸೆಲೆಬ್ರಿಟಿಗಳ ಬ್ಯಾಟಿಂಗ್

ಮಾಲ್ಡೀವ್ಸ್ ಅಂದರೆ ಭಾರತೀಯರ ಪಾಲಿಗೆ ಒಂದು ಅದ್ಭುತ ಹಾಗೂ ಅಚ್ಚುಮೆಚ್ಚಿನ ಪ್ರವಾಸಿ ತಾಣ. ದಶಕಗಳಿಂದಲೂ ಕೂಡ ಎರಡೂ ದೇಶಗಳ ನಡುವೆ ಉತ್ತಮ ಸಂಬಂಧವಿತ್ತು. ಆದ್ರೀಗ ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡಿಂಗ್ ಶುರುವಾಗಿದೆ. ಅದಕ್ಕೆಲ್ಲಾ ಕಾರಣ ಅಲ್ಲಿನ ನೂತನ ಅಧ್ಯಕ್ಷ. 2023ರ ನವೆಂಬರ್ ನಲ್ಲಿ ಮಾಲ್ಡೀವ್ಸ್ ಗೆ ಮೊಹಮ್ಮದ್ ಮುಯಿಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚೀನಾ ದೇಶದ ಪರ ಒಲವು ಇರುವ ಮುಯಿಜು ಭಾರತದ ವಿರುದ್ಧ ಕಿಡಿ ಕಾರ್ತಿದ್ದಾರೆ. ಇದರ ನಡುವೆ ಅಲ್ಲಿನ ಸರ್ಕಾರದ ಪ್ರತಿನಿಧಿಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನಾಲಗೆ ಹರಿಬಿಟ್ಟಿದ್ದಾರೆ. ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಮಾಲ್ಡೀವ್ಸ್ ಸರ್ಕಾರದ ಪ್ರತಿನಿಧಿಗಳ ಇದೇ ನಡೆ  ಕೋಟ್ಯಂತರ ಭಾರತೀಯದ ಆಕ್ರೋಶಕ್ಕೆ ಕಾರಣವಾಗಿದೆ. ಮಾಲ್ಡೀವ್ಸ್ ವರ್ಸಸ್ ಲಕ್ಷ ದ್ವೀಪ ಸಮರ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಕೂಡ ಆಗ್ತಿದೆ.

ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ ದಿನ ಅಯೋಧ್ಯೆಯಲ್ಲಿ ಬಿಗಿ ಭದ್ರತೆ – ಹೈಟೆಕ್‌ ಸೆಕ್ಯೂರಿಟಿ ಹೇಗಿರಲಿದೆ ಗೊತ್ತಾ?

ಭಾರತದ ಬಗ್ಗೆ ಹಾಗೂ ಪ್ರಧಾನಿ ಮೋದಿ ಬಗ್ಗೆ ಮಾಲ್ಡೀವ್ಸ್‌ ಸರ್ಕಾರದ ಪ್ರತಿನಿಧಿಗಳು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಂತೆ ಭಾರತೀಯರು ಕೆರಳಿ ಕೆಂಡವಾಗಿದ್ದಾರೆ. ಇದೇ ಸಿಟ್ಟಲ್ಲಿ ಸಾಕಷ್ಟು ಭಾರತೀಯರು ಮಾಲ್ಡೀವ್ಸ್‌ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಲಕ್ಷ ದ್ವೀಪ ಅಥವಾ ಬೇರೆ ದೇಶಗಳ ಪ್ರವಾಸವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರಂತೂ ತಾವು ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿದ ಮಾಹಿತಿಯನ್ನ ಸ್ಕ್ರೀನ್ ಶಾಟ್ ತೆಗೆದು ಸೋಶಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡ್ತಿದ್ದಾರೆ. ಬಾಯ್ಕಾಟ್ ಮಾಲ್ಡೀವ್ಸ್‌ ಅಭಿಯಾನಕ್ಕೆ ತಮ್ಮ ಬೆಂಬಲ ಪ್ರಕಟಿಸಿದ್ದಾರೆ. ಹಾಗೇ ಬಾಲಿವುಡ್ ಸ್ಟಾರ್ಸ್, ಕ್ರಿಕೆಟ್ ಸ್ಟಾರ್ಸ್ ಕೂಡಾ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ನಮ್ಮ ದೇಶದ ದ್ವೀಪಗಳ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಅಂತಾ ಸಿಡಿದೆದ್ದಿರುವ ಬಾಲಿವುಡ್ ನಟರು ಲಕ್ಷ ದ್ವೀಪವನ್ನು ಅಭಿವೃದ್ದಿ ಮಾಡೋಣ ಅನ್ನೋ ಘೋಷಣೆ ಹೊರಡಿಸಿದ್ದಾರೆ. ಇತ್ತ ಕ್ರಿಕೆಟ್ ತಾರೆ ಸಚಿನ್ ತೆಂಡೊಲ್ಕರ್, ಮಹಾರಾಷ್ಟ್ರದ ಕಡಲ ತೀರದಲ್ಲಿ ಕ್ರಿಕೆಟ್ ಆಡುವ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ ವಿಚಾರದಲ್ಲಿ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ.

ಮಾಲ್ಡೀವ್ಸ್​ನಂತೆಯೇ ಲಕ್ಷ ದ್ವೀಪ ಕೂಡ ವಿಶ್ವ ಮಟ್ಟದ ಅತ್ಯುತ್ತಮ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಹೊಂದಿದೆ. ಆದರೆ, ಹಲವು ಕಾರಣಗಳಿಂದಾಗಿ ಲಕ್ಷ ದ್ವೀಪ ಇನ್ನೂ ಎಲೆ ಮರೆ ಕಾಯಿಯಂತೆ ಉಳಿದು ಹೋಗಿದೆ. ಇದಕ್ಕೆ ಪ್ರಮುಖ ಕಾರಣ ಭದ್ರತೆ. ಅರಬ್ಬಿ ಸಮುದ್ರದಲ್ಲಿ ಹರಡಿಕೊಂಡಿರುವ 36 ದ್ವೀಪಗಳ ಸಮೂಹವಾದ ಲಕ್ಷ ದ್ವೀಪದಲ್ಲಿ ಬರೋಬ್ಬರಿ 17 ದ್ವೀಪಗಳಿಗೆ ಯಾರಿಗೂ ಪ್ರವೇಶ ಇಲ್ಲ. ಸ್ಥಳೀಯರೂ ಹೋಗುವಂತಿಲ್ಲ. ಭಯೋತ್ಪಾದಕರ ಹಾವಳಿ, ಕಳ್ಳ ಸಾಗಣೆದಾರ ಕಾಟ ಸೇರಿದಂತೆ ಹಲವು ಭದ್ರತಾ ಕಾರಣಗಳಿಂದಾಗಿ ಈ ದ್ವೀಪಗಳನ್ನು ನಿರ್ಬಂಧಿಸಲಾಗಿದೆ. ದೇಶ ವಿರೋಧಿ, ಸಮಾಜ ವಿರೋಧಿ ಕೃತ್ಯಗಳಿಗೆ ಲಕ್ಷ ದ್ವೀಪಗಳು ಆಶ್ರಯ ತಾಣ ಆಗಬಾರದು ಅನ್ನೋ ಕಾರಣಕ್ಕೆ ಮೊದಲಿನಿಂದಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೀಗಾಗಿ, ಪ್ರವಾಸೋದ್ಯಮ ಸೇರಿದಂತೆ ಹೆಚ್ಚಿನ ಮೂಲ ಸೌಕರ್ಯ ಅಭಿವೃದ್ಧಿ ಆಗಿಲ್ಲ. ಜೊತೆಗೆ ವೆಚ್ಚವೂ ದುಬಾರಿ.

ಲಕ್ಷ ದ್ವೀಪಕ್ಕೆ ದುಬಾರಿ ಟ್ರಿಪ್!   

ಲಕ್ಷ ದ್ವೀಪದಲ್ಲಿ ಇರೋದು ಒಂದೇ ವಿಮಾನ ನಿಲ್ದಾಣ. ಪ್ರವಾಸೋದ್ಯಮ ವೆಚ್ಚ ಕೂಡಾ ಹೆಚ್ಚು. ಒಂದೆರಡು ದಿನಗಳ ಪ್ರವಾಸಕ್ಕೂ ಒಬ್ಬರಿಗೆ 50 ರಿಂದ 60 ಸಾವಿರ ರೂಪಾಯಿ ಬೇಕಾಗುತ್ತದೆ. ಎರಡರಿಂದ ಮೂರು ದಿನಗಳಲ್ಲೇ ಎಲ್ಲಾ ಪ್ರವಾಸಿ ತಾಣಗಳನ್ನ ನೋಡಿ ಮುಗಿಸಬಹುದು. ಆದರೆ, ಲಕ್ಷ ದ್ವೀಪದಿಂದ ಕೇವಲ 900 ಕಿಲೋ ಮೀಟರ್ ದೂರದಲ್ಲಿ ಇರುವ ಮಾಲ್ಡೀವ್ಸ್‌ನಲ್ಲಿ 300ಕ್ಕೂ ಹೆಚ್ಚು ದ್ವೀಪಗಳನ್ನ ಸುತ್ತಬಹುದು. ಲಕ್ಷ ದ್ವೀಪಕ್ಕೆ ಹೋಲಿಸಿದರೆ ಸಾಕಷ್ಟು ಸಂಖ್ಯೆಯ ಖಾಸಗಿ ರೆಸಾರ್ಟ್‌ಗಳು ಮಾಲ್ಡೀವ್ಸ್‌ನಲ್ಲಿವೆ. ಇನ್ನು ಪ್ರವಾಸಿಗರು ಲಕ್ಷ ದ್ವೀಪದಲ್ಲಿ ಖರ್ಚು ಮಾಡಿದಷ್ಟೇ ಹಣವನ್ನ ಮಾಲ್ಡೀವ್ಸ್‌ನಲ್ಲೂ ಖರ್ಚು ಮಾಡಬೇಕು. ಆದರೆ, ಮಾಲ್ಡೀವ್ಸ್‌ನಲ್ಲಿ ಆಯ್ಕೆಗಳು ಹೆಚ್ಚಾಗಿವೆ, ಸೌಲಭ್ಯಗಳು ಸಾಕಷ್ಟಿವೆ. ವಿಮಾನ ಸಂಪರ್ಕ ಕೂಡಾ ಹೆಚ್ಚಾಗಿದೆ. ವಿಮಾನ ಪ್ರಯಾಣದ ವೆಚ್ಚ ಕೂಡಾ ಲಕ್ಷ ದ್ವೀಪಕ್ಕಿಂತಾ ಮಾಲ್ಡೀವ್ಸ್‌ನಲ್ಲಿ ಕಡಿಮೆ ಇದೆ.

ಮಾಲ್ಡೀವ್ಸ್‌ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಭಾರತ ಕೈ ಹಿಡಿದಿದೆ. ಮಿಲಿಟರಿ ನೆರವು ಮಾತ್ರವಲ್ಲ, ಕುಡಿಯುವ ನೀರಿನಿಂದ ಹಿಡಿದು ಹಲವು ಮೂಲ ಸೌಕರ್ಯಗಳನ್ನೂ ಮಾಲ್ಡೀವ್ಸ್‌ ದೇಶಕ್ಕೆ ಭಾರತ ನೀಡಿದೆ. ತುರ್ತು ವೈದ್ಯಕೀಯ ನೆರವು ಸೇರಿದಂತೆ ಹಲವು ಕಾರಣಗಳಿಗಾಗಿ ಭಾರತ ಸೇನೆಯ ಹೆಲಿಕಾಪ್ಟರ್‌ಗಳು ಹಾಗೂ ಡಾರ್ನಿಯರ್ ಯುದ್ಧ ವಿಮಾನ ಕೂಡಾ ಮಾಲ್ಡೀವ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದ್ರೆ ಚೀನಾದಿಂದ ಭಾರೀ ಪ್ರಮಾಣದಲ್ಲಿ ಸಾಲ ಪಡೆದಿರುವ ಮಾಲ್ಡೀವ್ಸ್‌ ಅವ್ರ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ, ಆಂತರಿಕ ಭದ್ರತೆ ನೆಪವೊಡ್ಡಿ ಮಾಲ್ಡೀವ್ಸ್‌ ರಾಜಧಾನಿ ಮಾಲೆ ಸೇರಿದಂತೆ ಹಲವೆಡೆ ಇದ್ದ ಭಾರತೀಯ ಸೇನೆಯ  ಸಿಬ್ಬಂದಿಯನ್ನು ವಾಪಸ್ ಹೋಗುವಂತೆ ತಾಕೀತು ಮಾಡಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷರ ಈ ವರ್ತನೆ ಇದೀಗ ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡಿಂಗ್ ವರೆಗೂ ಬಂದು ನಿಂತಿದೆ. ಲಕ್ಷ ದ್ವೀಪಕ್ಕೆ ಪ್ರವಾಸ ಹೋಗುವಂತೆ ಅಭಿಯಾನ ಶುರುವಾಗಿದೆ. ಹೀಗಾಗಿ ಭಾರತ ಸರ್ಕಾರ ಲಕ್ಷ ದ್ವೀಪದತ್ತ ಗಮನ ಹರಿಸಬೇಕಿದೆ. ಲಕ್ಷ ದ್ವೀಪಗಳಲ್ಲಿ ಮೂಲ ಸೌಕರ್ಯ ಹೆಚ್ಚಾದಷ್ಟೂ ಪ್ರವಾಸಿಗರು ತಾನೇ ತಾನಾಗಿ ಹರಿದು ಬರುತ್ತಾರೆ. ಭಾರತೀಯರಿಂದಲೇ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿರುವ ಮಾಲ್ಡೀವ್ಸ್ ಸರ್ಕಾರದ ಕೊಬ್ಬೂ ಕರಗುತ್ತದೆ.

Sulekha