ನಾಲ್ಕು ವರ್ಷದ ಬಾಲಕನನ್ನ ಅಟ್ಟಾಡಿಸಿ ಕೊಂದ ಬೀದಿ ನಾಯಿಗಳು – ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ!
ಮನುಷ್ಯರ ಮೇಲೆ ಬೀದಿನಾಯಿಗಳ ದಾಳಿ ಪ್ರಮಾಣ ಇತ್ತೀಚೆಗೆ ವಿಪರೀತ ಆಗಿದೆ. ಅದ್ರಲ್ಲೂ ಈಗ ಹೈದರಾಬಾದ್ನಲ್ಲಿ ನಡೆದಿರೋ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ಮಾಡಿದ ಬೀದಿನಾಯಿಗಳ ಗುಂಪು ಕೊಂದು ಹಾಕಿದೆ.
4 ವರ್ಷದ ಬಾಲಕ ಪ್ರದೀಪ್ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಪ್ರದೀಪ್ ತನ್ನ ತಂದೆ ಬಳಿಗೆ ಹೋಗಲು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೂರು ನಾಯಿಗಳು ಓಡಿ ಬಂದು ಅವನ ಮೇಲೆ ದಾಳಿ ಮಾಡಿವೆ. ಹೈದರಾಬಾದ್ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಯಿಗಳ ಭೀಕರ ದಾಳಿಗೆ ಬಾಲಕನ ಹೊಟ್ಟೆಗೆ ತೀವ್ರತರ ಗಾಯಗಳಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಕೊನೆಯುಸಿರೆಳೆದಿದೆ.
ಇದನ್ನೂ ಓದಿ : ಇಬ್ಬರನ್ನು ಬಲಿ ಪಡೆದ ಮೇಲೆ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ – ಕಡಬಕ್ಕೆ ಬಂದಿಳಿದ ಅಭಿಮನ್ಯು ಮತ್ತು ತಂಡ
ಕಳೆದ ಶನಿವಾರ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಬೀದಿನಾಯಿಗಳು ಕಚ್ಚಿ ಏಳು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಡೆದಿತ್ತು. ಕನ್ಹಾ ಎಂಬ ಬಾಲಕ ಬಿಲಾಸ್‌ಪುರ ಗ್ರಾಮದ ತನ್ನ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ಆತನ ಮೇಲೆ ದಾಳಿ ನಡೆಸಿದ್ದವು ಎಂದು ಅಲ್ಲಿನ ಗ್ರಾಮಾಂತರ ಎಸ್ಪಿ ಸೂರಜ್ ರೈ ತಿಳಿಸಿದ್ದಾರೆ. ಬೀದಿನಾಯಿಗಳು ಕನ್ಹಾಗೆ ಕಚ್ಚುತ್ತಲೇ ಇದ್ದವು ಮತ್ತು ಗ್ರಾಮಸ್ಥರು ಆತನನ್ನು ರಕ್ಷಿಸುವಷ್ಟರಲ್ಲಿ ಬಾಲಕನಿಗೆ ತೀವ್ರ ರಕ್ತಸ್ರಾವವಾಗಿತ್ತು ಎಂದು ಬಾಲಕನ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಗ್ರಾಮಸ್ಥರು ನಾಯಿಗಳನ್ನು ಓಡಿಸಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ವೈದ್ಯರು ಮಗು ಸತ್ತಿರುವುದಾಗಿ ತಿಳಿಸಿದ್ದರು.
ಕಳೆದ ಜನವರಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದ ಮೂರನೇ ಮಹಡಿಯಿಂದ ಜಿಗಿದ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಗಾಯಗೊಂಡು ಸಾವನ್ನಪ್ಪಿದರು. 23 ವರ್ಷದ ಯುವಕ ಆರ್ಡರ್ ನೀಡಲು ಬಂಜಾರಾ ಹಿಲ್ಸ್‌ನ ರಸ್ತೆ ಸಂಖ್ಯೆ 6 ರಲ್ಲಿರುವ ಲುಂಬಿನಿ ರಾಕ್ ಕ್ಯಾಸಲ್ ಅಪಾರ್ಟ್‌ಮೆಂಟ್‌ಗೆ ಬಂದು ಬಾಗಿಲು ಬಡಿದಾಗ, ಆ ಗ್ರಾಹಕನ ಮನೆಯ ಸಾಕು ನಾಯಿ ಅವನನ್ನು ಹಿಂಬಾಲಿಸಿದೆ ಎಂದು ವರದಿಯಾಗಿದೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದಾಗ ಡೆಲಿವರಿ ಬಾಯ್ ತಲೆಗೆ ತೀವ್ರ ಪೆಟ್ಟಾಗಿತ್ತು. ನಂತರ ಗ್ರಾಹಕರು ಅವರನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (NIMS) ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೂ ಆತ ಬದುಕುಳಿಯಲಿಲ್ಲ.
#hyderabad dog bite pic.twitter.com/mJkKOnaof3
— Sai vineeth(Journalist🇮🇳) (@SmRtysai) February 21, 2023