ಎರಡನೇ ದಿನದಾಟದಲ್ಲಿ ಬೊಂಬಾಟ್ ಬ್ಯಾಟಿಂಗ್ – ರೋಹಿತ್-ಗಿಲ್ ಸೆಂಚುರಿ ಧಮಾಕ

ಎರಡನೇ ದಿನದಾಟದಲ್ಲಿ ಬೊಂಬಾಟ್ ಬ್ಯಾಟಿಂಗ್ – ರೋಹಿತ್-ಗಿಲ್ ಸೆಂಚುರಿ ಧಮಾಕ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಮೊದಲ ದಿನದ ಆಟದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿದೆ. ಎರಡನೇ ದಿನವನ್ನು ಭಾರತ ಭರ್ಜರಿ ಆಗಿ ಆರಂಭಿಸಿದೆ. ಅದರಲ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ ಸೆಂಚುರಿ ಬಾರಿಸಿದ್ದು, ಗಿಲ್ ಕೂಡಾ ಶತಕ ಗಳಿಸಿ ಅಭಿಮಾನಿಗಳ ದಿಲ್ ಗೆದ್ದಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ ಆಂಗ್ಲರ ಮೇಲೆ ಟೀಮ್ ಇಂಡಿಯಾ ಸವಾರಿ – ಇಂಗ್ಲೆಂಡ್ ಟೀಮ್ ಬೆಂಡೆತ್ತಿದ ಭಾರತದ ಬೌಲರ್ಸ್

ಎರಡನೇ ದಿನದಾಟ ಆರಂಭಿಸಿದ ಭಾರತ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದೆ. ರೋಹಿತ್ ಶರ್ಮಾ 154 ಎಸೆತಗಳಲ್ಲಿ 13 ಫೋರ್, 3 ಸಿಕ್ಸರ್‌ನೊಂದಿಗೆ ಶತಕ ಪೂರೈಸಿದರು. ಗಿಲ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ 137 ಎಸೆತಗಳಲ್ಲಿ 10 ಫೋರ್, 5 ಸಿಕ್ಸರ್‌ನೊಂದಿಗೆ 100 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕ ಸಿಡಿಸಿದ್ದಲ್ಲದೇ, ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಸೆಂಚುರಿ ಪೂರೈಸಿದ್ದಾರೆ. ಹಾಗೆಯೆ ಶುಭ್ಮನ್ ಗಿಲ್ ಅವರದ್ದು ಕೂಡಾ ಇದು 4ನೇ ಶತಕ.

ಇಂಗ್ಲೆಂಡ್ ಅನ್ನು 218 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಶುರುಮಾಡಿದ್ದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತ್ತು. ಎರಡನೇ ದಿನದಾಟ ಆರಂಭಿಸಿದ ಭಾರತ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದೆ. 250 ರನ್‌ಗಳ ಗಡಿ ದಾಟುವ ಮೂಲಕ ಭಾರತ ಉತ್ತಮ ಮುನ್ನಡೆ ಸಾಧಿಸುತ್ತಿದೆ. ಯಶಸ್ವಿ ಜೈಸ್ವಾಲ್ ಮೊದಲ ದಿನ 57 ರನ್ ಗಳಿಸಿ ಔಟ್ ಆಗಿದ್ದರು. ಗುರುವಾರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಕುಲ್ದೀಪ್ ಯಾದವ್ ಮತ್ತು ಆರ್ ಅಶ್ವಿನ್ ಸ್ಪಿನ್ ಜೋಡಿಯ ಮುಂದೆ ಮಂಡಿಯೂರಿತು. ಹೀಗಾಗಿ ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ 218 ರನ್‌ಗಳಿಗೆ ಕೊನೆಗೊಂಡಿತು. ಇಂಗ್ಲೆಂಡ್ ತನ್ನ ಕೊನೆಯ 7 ವಿಕೆಟ್‌ಗಳನ್ನು ಕೇವಲ 43 ರನ್‌ಗಳಿಗೆ ಕಳೆದುಕೊಂಡಿತು. ಕುಲ್ದೀಪ್ ಯಾದವ್ 5 ವಿಕೆಟ್ ಪಡೆದ ಸಾಧನೆ ಮಾಡಿದರೆ, ಅಶ್ವಿನ್ ಕೂಡ 4 ವಿಕೆಟ್ ಕಬಳಿಸಿದರು.

Sulekha