HDK, ನಿಖಿಲ್ ಇಬ್ಬರೂ ಸ್ಪರ್ಧಿಸಲ್ಲ! – ಸುಮಲತಾ ಪರ ಅಮಿತ್ ಶಾ ಬ್ಯಾಟಿಂಗ್!

HDK, ನಿಖಿಲ್ ಇಬ್ಬರೂ ಸ್ಪರ್ಧಿಸಲ್ಲ! – ಸುಮಲತಾ ಪರ ಅಮಿತ್ ಶಾ ಬ್ಯಾಟಿಂಗ್!

ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡು ತಿಂಗಳುಗಳೇ ಕಳೆದಿವೆ. ಆದ್ರೆ ಯಾವ ಕ್ಷೇತ್ರ ಯಾರಿಗೆ ಅನ್ನೋದು ಮಾತ್ರ ಫೈನಲ್ ಆಗಿಲ್ಲ. ಅದ್ರಲ್ಲೂ ಮಂಡ್ಯ ಕ್ಷೇತ್ರ ಜೆಡಿಎಸ್​ಗೋ ಅಥವಾ ಬಿಜೆಪಿಗೋ ಅನ್ನೋ ಬಗ್ಗೆಯೂ ಕ್ಲಾರಿಟಿ ಸಿಕ್ಕಿಲ್ಲ. ಕಳೆದ ಬಾರಿಯೇ ಸುಮಲತಾ ಅಂಬರೀಶ್ ಎಂಟ್ರಿಯಿಂದ ಮಂಡ್ಯ ಅಖಾಡ ರಣರಂಗವಾಗಿತ್ತು. ಈ ಬಾರಿಯೂ ಸುಮಲತಾ ನಾನು ಮತ್ತೊಮ್ಮೆ ಸಂಸದೆಯಾದ್ರೆ ಮಂಡ್ಯದಿಂದಲೇ ಅಂತಾ ಚಾಲೆಂಜ್ ಮಾಡಿದ್ದಾರೆ. ಮತ್ತೊಂದೆಡೆ ಜೆಡಿಎಸ್​ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ರೆ ಕುಮಾರಣ್ಣ ಅಥವಾ ನಿಖಿಲ್ ಸ್ಪರ್ಧೆ ಮಾಡ್ಬೋದು ಅನ್ನೋ ಚರ್ಚೆ ನಡೀತಿದೆ. ಈ ಎಲ್ಲಾ ಲೆಕ್ಕಾಚಾರಗಳು ಬುಡಮೇಲಾಗುವಂತಹ ಬೆಳವಣಿಗೆಗಳು ನಡೆದಿವೆ. ಚುನಾವಣೆಗೂ ಮುನ್ನವೇ ಜೆಡಿಎಸ್ ಸೋಲೊಪ್ಪಿಕೊಳ್ತಾ ಅನ್ನೋ ಅನುಮಾನ ದಟ್ಟವಾಗ್ತಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ? – ಸೋತ ಕ್ಷೇತ್ರದಲ್ಲಿಯೇ ರಣತಂತ್ರ ರೂಪಿಸುತ್ತಿರುವ ದಳಪತಿಗಳು..!

ಮಂಡ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್ ಸಿಗ್ತಿದೆ. ಇಷ್ಟು ದಿನ ಮೈತ್ರಿಯಲ್ಲಿ ಸಕ್ಕರೆನಾಡು ಜೆಡಿಎಸ್​ ಪಾಲಾಗುತ್ತೆ. ಖುದ್ದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರೆ ಎನ್ನಲಾಗ್ತಿತ್ತು. ಈಗಾಗ್ಲೇ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಮತ್ತೆ ಜನ್ರಿಗೆ ಹತ್ತಿರ ಆಗ್ತಿದ್ದಾರೆ. ಪ್ರಚಾರ ಶುರುವಿಟ್ಕೊಂಡಿದ್ದಾರೆ ಎಂದೇ ಬಿಂಬಿಸಲಾಗಿತ್ತು. ಮತ್ತೊಂದೆಡೆ ಹೆಚ್​ಡಿ ಕುಮಾರಸ್ವಾಮಿಯವ್ರೇ ಚುನಾವಣೆಗೆ ಸ್ಪರ್ಧಿಸ್ತಾರೆ. ಸುಮಲತಾ ಅಂಬರೀಶ್ ವಿರುದ್ಧ ಪುತ್ರನ ಸೋಲಿನ ಸೇಡು ತೀರಿಸಿಕೊಳ್ತಾರೆ ಎಂದು ಚರ್ಚೆಯಾಗ್ತಿತ್ತು. ಆದ್ರೆ ಈಗ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಬಿಟ್ಟುಕೊಟ್ಟಿತಾ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಬಿಜೆಪಿ ನಾಯಕರು ಕೂಡ ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿದ್ದಾರೆ.

ಲೋಕಸಭಾ ಚುನಾವಣೆಗೆ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧಿಸ್ತಾರೆ, ಕೇಂದ್ರ ಮಂತ್ರಿಯಾಗುತ್ತಾರೆ ಎಂಬ ಚರ್ಚೆಗೆ ಹೆಚ್​ಡಿಕೆಯೇ ಫುಲ್ ಸ್ಟಾಪ್ ಇಟ್ಟಿದ್ದಾರೆ. ರಾಜ್ಯ ಬಿಟ್ಟು ಏಕೆ ಕಳಿಸ್ತೀರ, ರಾಜ್ಯದಲ್ಲೇ ಇರೋಣ ಅಂದ್ಕೊಂಡಿದ್ದೇನೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗುವುದನ್ನು ಯಾರೂ ತಪ್ಪಿಸಲು ಆಗಲ್ಲ. ಬಿಜೆಪಿ-ಜೆಡಿಎಸ್​ ಮೈತ್ರಿ ಸೀಟ್ ಹಂಚಿಕೆಯ ಬಗ್ಗೆ ಸಮಸ್ಯೆ ಇಲ್ಲ. ಹಾಸನ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಮಂಡ್ಯ ಜಿಲ್ಲೆಯಲ್ಲಿ ಪ್ರತಿದಿನ ಒಂದು ಧಾರಾವಾಹಿ ಇರಲೇಬೇಕು. ಪಾಪ ನಿಖಿಲ್​ ಅಮಾಯಕ. ನಿಖಿಲ್​ನನ್ನು ರಾಜಕೀಯವಾಗಿ ಮುಗಿಸಲು ಯಾವ ರೀತಿ ಮಾಡಿದರು. ಒಂದು ತಿಂಗಳಿನಿಂದ ಧಾರಾವಾಹಿ ನಡೆಯುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್​ಗೆ ಟಾಂಗ್​ ಕೊಟ್ಟಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಕೂಡ ಮಂಡ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವದಂತಿ, ಸುದ್ದಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ನಾನು ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಯು ಟರ್ನ್ ಹೊಡೆಯುವ ಗಿರಾಕಿ ಅಲ್ಲ. ಜೆಡಿಎಸ್ – ಬಿಜೆಪಿ ಮೈತ್ರಿಯನ್ನು ಬಲಪಡಿಸಬೇಕು, ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು ಎಂದಿದ್ದಾರೆ.

ಹೀಗೆ ತಂದೆ ಮಗ ಇಬ್ಬರೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲ್ಲ ಅಂತಿದ್ದಾರೆ. ಮತ್ತೊಂದೆಡೆ ಕರ್ನಾಟಕ ವಿಧಾನಸಭೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಅಷ್ಟೂ ಕ್ಷೇತ್ರಗಳನ್ನ ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದೆ. ಬಿಜೆಪಿ ಹೈಕಮಾಂಡ್ ಕೂಡ ಇದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ನಾನಾ ತಂತ್ರಗಾರಿಕೆ ಮಾಡ್ತಿದೆ.  ಅದ್ರಲ್ಲೂ ಮಂಡ್ಯ ಕ್ಷೇತ್ರದಲ್ಲಿ ಯಾರನ್ನ ಕಣಕ್ಕೆ ಇಳಿಸಬೇಕು ಅನ್ನೋ ಬಗ್ಗೆಯೂ ಹಿರಿಯ ನಾಯಕರ ಮಟ್ಟದಲ್ಲಿ ಚರ್ಚೆ ನಡೆದಿದೆ. ಭಾನುವಾರ ಅಮಿತ್ ಶಾ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲೂ ಮಂಡ್ಯ ಕ್ಷೇತ್ರದ ವಿಚಾರ ಸದ್ದು ಮಾಡಿದೆ.

ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಕೆಲ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಅಮಿತ್ ಶಾ ಜೊತೆಗಿನ ಸಭೆಯಲ್ಲಿ ಹಾಲಿ ಸಂಸದೆ ಸುಮಲತಾ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಸಲಹೆಗಳೂ ಕೇಳಿಬಂದಿವೆ. ಸುಮಲತಾ ಅಂಬರೀಶ್ ಅವರಿಗೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಇದೆ. ಅವರಿಗೆ ಮೈತ್ರಿ ಟಿಕೆಟ್ ನೀಡಿದ್ರೆ ಗೆಲುವು ಸುಲಭ. ಹಾಗಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಇದೆಲ್ಲವನ್ನು ಸಮಾಧಾನವಾಗಿಯೇ ಕೇಳಿಸಿಕೊಂಡಿರುವ ಅಮಿತ್ ಶಾ, ನೀವು ಹೋದಲ್ಲಿ ಬಂದಲ್ಲೆಲ್ಲಾ ನಿಮ್ಮ ಅಭಿಪ್ರಾಯ ಹೇಳಬೇಡಿ. ನಿಮ್ಮ ಮಾತಿನಿಂದ ಮೈತ್ರಿ ಧರ್ಮಕ್ಕೆ ಚೂರು ಧಕ್ಕೆಯಾದರೂ ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದ್ಕಡೆ ಜೆಡಿಎಸ್ ಭದ್ರಕೋಟೆ, ನಮಗೇ ಕ್ಷೇತ್ರ ಬೇಕು ಅಂತಾ ದಳಪತಿಗಳು ಹೇಳ್ತಿದ್ದಾರೆ. ಮತ್ತೊಂದ್ಕಡೆ ಬಿಜೆಪಿ ನಾಯಕರು ಹಾಲಿ ಸಂಸದೆ ಸುಮಲತಾಗೆ ಸಪೋರ್ಟ್ ಮಾಡೋಣ. ಬಿಜೆಪಿಯಿಂದ ಕಣಕ್ಕಿಳಿದ್ರೆ ಗೆಲ್ತಾರೆ ಅಂತಿದ್ದಾರೆ. ಆದ್ರೆ ಕುಮಾರಣ್ಣ ಮತ್ತು ನಿಖಿಲ್ ಕುಮಾರ್ ಸ್ಪರ್ಧೆ ಮಾಡಲ್ಲ ಅನ್ನೋ ಮೂಲಕ ಟ್ವಿಸ್ಟ್ ಕೊಡ್ತಿದ್ದಾರೆ. ಹಾಗೇನಾದ್ರೂ ಟಿಕೆಟ್ ಜೆಡಿಎಸ್ ಪಾಲಾದ್ರೆ ಯಾರು ಸ್ಪರ್ಧಿಸ್ತಾರೆ ಅನ್ನೋ ಚಿಂತೆ ಒಂದ್ಕಡೆಯಾದ್ರೆ  ಮತ್ತೊಂದೆಡೆ ಎಲ್ಲವನ್ನೂ ಬಿಟ್ಟು ಸುಮಲತಾ ಅಂಬರೀಶ್​ಗೆ ಟಿಕೆಟ್ ಕೊಡ್ತಾರಾ ಅನ್ನೋ ಪ್ರಶ್ನೆಯೂ ಎದುರಾಗಿದೆ.

Sulekha