20 ಅಡಿ.. 20 ಗಂಟೆಗಳ ಮಹಾತಪಸ್ಸು! – ಸಾತ್ವಿಕ್‌ ತಲೆಕೆಳಗಾಗಿ ಬಿದ್ದರೂ ಬದುಕಿದ್ದು ಹೇಗೆ?    

20 ಅಡಿ.. 20 ಗಂಟೆಗಳ ಮಹಾತಪಸ್ಸು! – ಸಾತ್ವಿಕ್‌ ತಲೆಕೆಳಗಾಗಿ ಬಿದ್ದರೂ ಬದುಕಿದ್ದು ಹೇಗೆ?    

ಕೋಟಿ ಕೋಟಿ ಕನ್ನಡಿಗರ ಪ್ರಾರ್ಥನೆ ಫಲಿಸಿದೆ. ನೂರಾರು ರಕ್ಷಣಾ ಸಿಬ್ಬಂದಿಯ ಅಹೋರಾತ್ರಿ ಕಾರ್ಯಾಚರಣೆ ಫಲ ನೀಡಿದೆ. ನೆರೆಹೊರೆಯ ಗ್ರಾಮಸ್ಥರ ಬೇಡಿಕೆ ಕೊನೆಗೂ ಈಡೇರಿದೆ. ಅನ್ನ, ನೀರು ಬಿಟ್ಟು ಕಾಯ್ತಿದ್ದ ಆ ತಂದೆತಾಯಿಯ ಕೂಗು ಕೊನೆಗೂ ಆ ದೇವರಿಗೆ ಮುಟ್ಟಿತ್ತು ಅನ್ಸುತ್ತೆ. ಭೂಮಿತಾಯಿಯ ಒಡಲಲ್ಲಿ ಪವಾಡವೇ ನಡೆದು ಹೋಗಿದೆ. ಬರೋಬ್ಬರಿ 20 ಗಂಟೆಗಳ ಜೀವನ್ಮರಣ ಹೋರಾಟ ನಡೆಸಿದ್ದ ಮುದ್ದು ಕಂದಮ್ಮ ಸಾವನ್ನೇ ಗೆದ್ದು ಬಂದಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್ನನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಬುಧವಾರ ತಡರಾತ್ರಿಯಿಂದಲೇ ಅಯ್ಯೋ ಏನಾಗುತ್ತೋ ಅಂತಾ ಉಸಿರು ಬಿಗಿ ಹಿಡಿದು ಕಾಯ್ತಿದ್ದ ಕರ್ನಾಟಕದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟಕ್ಕೂ ಸಾತ್ವಿಕ್ ಕೊಳಗೆ ಬಾವಿಗೆ ಬಿದ್ದಿದ್ದೇಗೆ..? ರಕ್ಷಣಾ ಕಾರ್ಯಾಚರಣೆ ವೇಳೆ ಎದುರಾಗಿದ್ದ ಸವಾಲೇನು..? ರೆಸ್ಕ್ಯೂ ಆಪರೇಷನ್​ನಲ್ಲಿ ತೊಡಗಿದ್ದ ಸಿಬ್ಬಂದಿಗೆ ಭಯ ಕಾಡಿದ್ದೇಕೆ..? ಅಲ್ಲಿ ನಿಜಕ್ಕೂ ಮನೆ ದೇವರ ಪವಾಡ ನಡೆಯಿತಾ..? ಮಗುವಿನ ರಕ್ಷಣೆ ಬಗೆಗಿನ ಅಚ್ಚರಿಯ ಅಂಶಗಳು ಇಲ್ಲಿವೆ..

ಇದನ್ನೂ ಓದಿ: ರಾತ್ರೋರಾತ್ರಿ ಹೆಚ್‌ಡಿಕೆಗೆ ಶಾಕ್‌ ಕೊಟ್ಟ ಡಿಕೆ ಬ್ರದರ್ಸ್‌ – ʻಕೈʼ ಹಿಡಿದ ಚನ್ನಪಟ್ಟಣದ 9 ಜೆಡಿಎಸ್‌ ಸದಸ್ಯರು  

ಕೊಳವೆಬಾವಿಗೆ ಮಗು ಬಿದ್ದಿದೆ ಎಂಬ ಸುದ್ದಿ ಇಡೀ ಕರುನಾಡೇ ಮರುಗುವಂತೆ ಮಾಡಿತ್ತು. ಸಾತ್ವಿಕ್ ಬದುಕಿ ಬರಲಿ ಎಂದು ಗ್ರಾಮದಲ್ಲಿ ಹಾಗೂ ಸುತ್ತಮುತ್ತ ಜನ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದರು. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರಿಂದ ವಿಶೇಷ ಪೂಜೆ ನಡೆದಿತ್ತು. ಬಾಲಕನ ತಂದೆ-ತಾಯಿಯಂತೂ ರಾತ್ರಿಯಿಡೀ ಕೊಳವೆಬಾವಿ ಪಕ್ಕದಲ್ಲೇ ಇದ್ದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಬುಧವಾರ ರಾತ್ರಿಯಿಂದಲೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಎನ್​ಡಿಆರ್​ಎಫ್ ಸಿಬ್ಬಂದಿ ರೆಸ್ಕ್ಯೂ ಆಪರೇಷನ್​ನಲ್ಲಿ ತೊಡಗಿದ್ದರು. ಹೆತ್ತವರ ಪುಣ್ಯವೋ, ಮಗುವಿನ ಅದೃಷ್ಟವೋ ಇಲ್ಲ ಜನರ ಪ್ರಾರ್ಥನೆಯೋ ಗೊತ್ತಿಲ್ಲ. ಕಂದಮ್ಮ ಬದುಕಿ ಬಂದಿದೆ. ಅಷ್ಟಕ್ಕೂ ಮಗು ಬಾವಿಗೆ ಬಿದ್ದಾಗಿಂತ ರಕ್ಷಣೆ ಮಾಡೋವರೆಗೂ ಏನೆಲ್ಲಾ ಆಯ್ತು ಅಂತಾ ಇಲ್ಲಿದೆ..

20 ಗಂಟೆಗಳ ಮಹಾತಪಸ್ಸು!

ಲಚ್ಯಾಣ ಗ್ರಾಮದ ಜಮೀನಿನಲ್ಲಿ ಶಂಕರಪ್ಪ ಮುಜಗೊಂಡ ಎಂಬವರು ಮಂಗಳವಾರ ಕೊಳವೆ ಬಾವಿ ಕೊರೆಯಿಸಿದ್ದರು. ಸುಮಾರು 500 ಅಡಿ ಆಳ ಕೊರೆಸಲಾಗಿತ್ತು. ಆದರೆ, ನೀರು ಬಾರದ ಕಾರಣ ಮುಚ್ಚದೆ ಹಾಗೆಯೇ ಬಿಟ್ಟಿದ್ದರು. ಶಂಕರಪ್ಪ ಮುಜಗೊಂಡ ಅವರ ಮೊಮ್ಮಗ ಸಾತ್ವಿಕ್ ಬುಧವಾರ ಸಂಜೆ ಆಟವಾಡುವಾಗ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದಾನೆ.  ಸಂಜೆ 5.30ರ ಸುಮಾರಿಗೆ ಆತ ಕೊಳವೆಬಾವಿಗೆ ಬಿದ್ದಿದ್ದ. ಸಂಜೆ 6 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ಸತತವಾಗಿ ಕಾರ್ಯಾಚರಣೆ ನಡೆಸಿದ್ದರು.  ಸುಮಾರು 20 ಅಡಿ ಆಳದಲ್ಲಿ ಸಿಲುಕಿದ್ದು, ಆ್ಯಕ್ಸಿಜನ್​​ ವ್ಯವಸ್ಥೆ ಮಾಡಲಾಗಿತ್ತು. ಕೊಳವೆ ಬಾವಿ ಪಕ್ಕದಲ್ಲಿ ಎರಡು ಜೆಸಿಬಿಗಳನ್ನು ಬಳಿಸಿ ಎರಡು ಗುಂಡಿಯನ್ನು ತೆಗೆದು ಮಗು ಇರುವ ಸ್ಥಳದ ಸಮೀಪಕ್ಕೆ ತಲುಪಲಾಯ್ತು. ಪೈಪ್ ಮೂಲಕ ಮಗುವಿಗೆ ಆಮ್ಲಜನಕ ಒದಿಗಿಸಲಾಗುತ್ತಿತ್ತು. ಕ್ಯಾಮೆರಾದಲ್ಲಿ ಬಾಲಕ ಸಾತ್ವಿಕ್‍ನ ಕಾಲು ಅಲುಗಾಡುತ್ತಿರುವ ದೃಶ್ಯ ಕಂಡುಬಂದ ಹಿನ್ನೆಲೆಯಲ್ಲಿ ಪೋಷಕರು, ನೆರೆದಿದ್ದ ಸಾವಿರಾರು ಜನ ಮಗು ಬದುಕಿದೆ, ಇನ್ನೇನು ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗುತ್ತದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ರಕ್ಷಣಾ ಕಾರ್ಯಾಚರಣೆಗೆ ಗಟ್ಟಿ ಕಲ್ಲು ಅಡ್ಡಿಯಾಗಿತ್ತು. ಸ್ಟೋನ್ ಬ್ರೇಕರ್ ಬಳಸಿ ಬಂಡೆ ಒಡೆದು ಮಗುವಿನ ಬಳಿ ತಲುಪಿದ ರಕ್ಷಣಾ ಪಡೆ ಪೈಪ್‍ನಲ್ಲಿ ಸಿಲುಕಿದ್ದ ಮಗುವನ್ನು ಹೊರತೆಗೆಯುವಲ್ಲಿ ಕೊನೆಗೂ ಯಶಸ್ವಿಯಾಗಿತ್ತು. ಸತತ 20 ಗಂಟೆ ಕೊಳವೆ ಬಾವಿಯಲ್ಲೇ ಇದ್ದ ಮಗುವನ್ನ ಹೊರತೆಗೆದು ಮೇಲಕ್ಕೆ ಕರುತರುವಾಗ ಸುತ್ತಮುತ್ತ ನಿಂತಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಮಗುವನ್ನೇನೋ ಸೇಫ್ ಆಗಿ ಮೇಲಕ್ಕೆ ಕರೆತರಲಾಗಿತ್ತು. ಆದ್ರೆ ಅಸಲಿ ಚಾಲೆಂಜ್ ಶುರುವಾಗಿದ್ದೇ ಅಲ್ಲಿಂದ. ಯಾಕಂದ್ರೆ ಮಗು ಬದುಕಿದೆ ನಿಜ. ಆದ್ರೆ ಆರೋಗ್ಯ ಸ್ಥಿತಿ ಹೇಗಿದ್ಯೋ ಗೊತ್ತಿರಲಿಲ್ಲ. ಬರೋಬ್ಬರಿ 20 ಗಂಟೆಗಳ ಕಾಲ ಕೊಳವೆಬಾವಿಯಲ್ಲಿ ಮಗು ತಲೆಕೆಳಗಾಗಿ ಬಿದ್ದಿತ್ತು. ಗಾಳಿ, ಬೆಳಕಿಲ್ಲದ ಜಾಗದಲ್ಲಿ ಕಂದಮ್ಮ ಅದೆಷ್ಟು ನರಳಿತ್ತೋ ಏನೋ.. ಹೀಗಾಗಿ ಮಗುವನ್ನ ಮೇಲಕ್ಕೆ ತಂದ ಕ್ಷಣಾರ್ಧದಲ್ಲೇ ಮಿಂಚಿನ ಓಟ ಶುರುವಾಗಿತ್ತು.

ಸಾವು ಗೆದ್ದ ಸಾತ್ವಿಕ್! 

ಕೊಳವೆ ಬಾವಿಯಲ್ಲಿದ್ದ ಸಾತ್ವಿಕ್​ನನ್ನು ಒಂದ್ಕಡೆ ಸಿಬ್ಬಂದಿ ರಕ್ಷಣೆ ಮಾಡ್ತಿದ್ರೆ ಮತ್ತೊಂದ್ಕಡೆ ವೈದ್ಯಕೀಯ ಸಿಬ್ಬಂದಿ ಸರ್ವ ಸನ್ನದ್ಧರಾಗಿ ನಿಂತಿದ್ರು. ಌಂಬುಲೆನ್ಸ್ ಜೊತೆಯಲ್ಲೇ ಕಾಯುತ್ತಿದ್ರು. ಸಾತ್ವಿಕ್ ಕೈಗೆ ಸಿಗುತ್ತಿದ್ದಂತೆ ಆಂಬುಲೆನ್ಸ್​​ಗೆ ಶಿಫ್ಟ್ ಮಾಡಿ ಪ್ರಥಮ ಚಿಕಿತ್ಸೆ ನೀಡಿದ್ರು. ಬಳಿಕ ಅಲ್ಲಿಂದ ಸೀದಾ ಇಂಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ತಾಯಿ ಮಡಿಲಲ್ಲೇ ಮಲಗಿಸಿ ಚಿಕಿತ್ಸೆ ನೀಡಿದ್ರು. ಪರಿಶೀಲನೆ ನಡೆಸಿದ ವೈದ್ಯರು ಕಂದನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಕೊಳವೆ ಬಾವಿಗೆ ಬಿದ್ದಿರೋ ಕಾರಣ ಸ್ವಲ್ಪ ತರಚಿದ ಗಾಯ ಆಗಿದೆ ಅಷ್ಟೇ ಅಂದ್ರು. ಬಳಿಕ ಸ್ಕ್ಯಾನಿಂಗ್ ಸೇರಿದಂತೆ ಹೆಚ್ಚಿನ ಪರಿಶೀಲನೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯ್ತು.

ಸದ್ಯ ಮಗು ಬದುಕಿ ಬಂದ ಖುಷಿ ವಿಜಯಪುರ ಮಾತ್ರವಲ್ದೇ ರಾಜ್ಯಾದ್ಯಂತ ಜನರಿಗೆ ಖುಷಿ ನೀಡಿದೆ. ಇಂಡಿ ತಾಲೂಕಿನ ಜನ ತಾವೇ ಬದುಕಿ ಬಂದಷ್ಟು ಖುಷಿಯಲ್ಲಿದ್ದಾರೆ. ಆದ್ರೆ ನಾವಿಲ್ಲಿ ರಕ್ಷಣಾ ಸಿಬ್ಬಂದಿಯ ಬಗ್ಗೆ ಹೇಳಲೇಬೇಕು. ಕಂದನ ಅಳುವಿನ ಶಬ್ದ ಕೇಳಿಯೇ ಸಿಬ್ಬಂದಿ ಪುಳಕಗೊಂಡಿದ್ದರು. ಹೇಗಾದ್ರೂ ಮಾಡಿ ಅವನಿಗೆ ಮರುಜನ್ಮ ನೀಡಬೇಕೆಂದು ತಮ್ಮ ಕಾರ್ಯಾಚರಣೆಗೆ ವೇಗ ನೀಡಿದ್ರು. ಕೊನೆಗೂ ಪುಟ್ಟ ಕಂದ ಕೈಗೆ ಸಿಕ್ಕಾಗಿ  ಸಿಬ್ಬಂದಿಯ ಖುಷಿ ಇದ್ಯಲ್ಲ. ಬಹುಶಃ ಅವ್ರಿಗೆ ಕೋಟಿ ಕೊಟ್ರೂ ಅಷ್ಟೊಂದು ಖುಷಿ ಆಗಲ್ಲ. ಆ ಕಂದನನ್ನ ರಕ್ಷಿಸಿ ಕೈಯಲ್ಲಿ ಹಿಡಿದಾಗ ಅದ್ರಲ್ಲೂ ಆ ಮಗು ಬದುಕಿದೆ ಅಂತಾ ಗೊತ್ತಾದಾಗ ತಮ್ಮ ಆಯಾಸ, ಹಸಿವು, ದಣಿವು ಎಲ್ಲವನ್ನೂ ಮರೆತಿದ್ರು. ಸಾರ್ಥಕತೆಯ ಭಾವದಿಂದ ತೆರಳಿ ವೈದ್ಯರ ಕೈಗೆ ಮಗುವನ್ನ ಒಪ್ಪಿಸಿದ್ರು. ಅದೇನೆ ಇರ್ಲಿ ಇವತ್ತೇನೇ ಸಾತ್ವಿಕ್ ಸಾವನ್ನ ಗೆದ್ದು ಬಂದಿದ್ದಾನೆ. ಹಾಗಂತ ಪ್ರತೀ ಬಾರಿಯೂ ಹೀಗೇ ಆಗುತ್ತೆ ಅಂತಾ ಹೇಳೋಕೆ ಆಗಲ್ಲ. ಹೀಗಾಗಿ ಉಪಯೋಗವಿಲ್ಲದ ಕೊಳವೆಬಾವಿಗಳನ್ನ ಮುಚ್ಚಿಬಿಡಿ. ಹಾಗೇ ಪೋಷಕರು ಕೂಡ ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.

Shwetha M