ಬೊಮ್ಮನ್ ಹಾಗೂ ಬೆಳ್ಳಿ ದಂಪತಿಗೆ ರಾಷ್ಟ್ರಪತಿಗಳಿಂದ ಸನ್ಮಾನ – ದ್ರೌಪದಿ ಮುರ್ಮು ಅವರಿಂದ ಶ್ಲಾಘನೆ
‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದ ಮೇಲೆ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಗೂ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತ್ತು. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಶ್ಲಾಘನೆ ಪಡೆದುಕೊಂಡಿದ್ದ ಬೊಮ್ಮನ್ ಬೆಳ್ಳಿ ದಂಪತಿ ಇದೀಗ ರಾಷ್ಟ್ರಪತಿಯವರಿಂದಲೂ ಸನ್ಮಾನ ಮಾಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೊಮ್ಮನ್ ಮತ್ತು ಬೆಳ್ಳಿಗೆ ಮರೆಯಲಾರದ ಉಡುಗೊರೆ – ಧೋನಿಯಿಂದ ಜೆರ್ಸಿ ಗಿಫ್ಟ್
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೊಮ್ಮನ್ ಮತ್ತು ಬೆಳ್ಳಿ ದಂಪತಿಗೆ ಸನ್ಮಾನ ಮಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಈ ಸನ್ಮಾನ ನಡೆದಿದೆ. ಈ ಫೋಟೋಗಳನ್ನು ಸ್ವತಃ ದ್ರೌಪದಿ ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ‘ಆಸ್ಕರ್ ಪ್ರಶಸ್ತಿ ಪಡೆದ ದಿ ಎಲಿಫೆಮಂಟ್ ವಿಸ್ಪರರ್ಸ್‌ನಲ್ಲಿ ಮುಖ್ಯವಾಗಿ ಕಾಣಿಸಿಕೊಂಡ ಬೊಮ್ಮನ್ ಹಾಗೂ ಬೆಳ್ಳಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸನ್ಮಾನಿಸಿದರು. ಆನೆ ಮರಿಗಳನ್ನು ನೋಡಿಕೊಳ್ಳಲು ಜೀವನ ಮುಡಿಪಿಟ್ಟ ಅವರನ್ನು ಶ್ಲಾಘಿಸಲಾಯಿತು’ ಎಂದು ರಾಷ್ಟ್ರಪತಿ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ. ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ಬೊಮ್ಮನ್ ಹಾಗೂ ಬೆಳ್ಳಿ ಇದ್ದಾರೆ. ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಿದ್ದರು. ಈ ವೇಳೆ ಅವರು ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಜೊತೆ ಮಾತುಕತೆ ನಡೆಸಿದ್ದರು. ಈ ಫೋಟೋ ವೈರಲ್ ಆಗಿತ್ತು. ಇದಲ್ಲದೆ, ಬೊಮ್ಮನ್ ಮತ್ತು ಬೆಳ್ಳಿ ದಂಪತಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸನ್ಮಾನಿಸಿದ್ದರು. ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಕಾರ್ತಿಕಿ ಗೋನ್ಸಾಲ್ವಿಸ್ ಅವರು ನಿರ್ದೇಶನ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಅವರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು ವಿಶೇಷ.