ವಿಮಾನದಲ್ಲಿ ತೆರಳುವಾಗ ಬಾಂಬ್ ಎಂದ ಪ್ರಯಾಣಿಕ – ತಪಾಸಣೆ ವೇಳೆ ಬ್ಯಾಗ್ ನಲ್ಲಿ ಸಿಕ್ಕಿದ್ದು ತೆಂಗಿನಕಾಯಿ!
ನವದೆಹಲಿ: ಕೆಲವೊಂದು ಬಾರಿ ನಾವು ಯಾವುದಾದರೊಂದು ವಿಚಾರದ ಬಗ್ಗೆ ಮಾತನಾಡುತ್ತಿದ್ದರೆ, ನಮ್ಮ ಪಕ್ಕದಲ್ಲಿದ್ದವರು ಅದನ್ನು ಬೇರೆ ರೀತಿಯಾಗಿ ಅರ್ಥೈಸಿಕೊಳ್ಳುತ್ತಾರೆ. ಇದರಿಂದಾಗಿ ದೊಡ್ಡ ಅವಾಂತರಗಳಾಗುವುದನ್ನು ನಾವು ಕೇಳಿರುತ್ತೇವೆ. ಇದೀಗ ಇಲ್ಲೊಬ್ಬ ವ್ಯಕ್ತಿ ವಿಮಾನದಲ್ಲಿ ಪ್ರಯಾಣಿಸುವ ಮುನ್ನ ಆತ ತನ್ನ ತಾಯಿ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಬಾಂಬ್ ಎಂಬ ಪದವನ್ನು ಬಳಸಿ ಪೇಚಿಗೆ ಸಿಲುಕಿದ್ದಾನೆ.
ಇದನ್ನೂ ಓದಿ: ಮದುವೆ ಆಲ್ಬಂನಲ್ಲಿ ತಾಳಿ ಕಟ್ಟುವ ವಿಡಿಯೋ ಮಿಸ್! – ಬೆಂಗಳೂರಿನ ಫೋಟೋಗ್ರಾಫರ್ ಗೆ ಬಿತ್ತು ಭಾರಿ ದಂಡ
ರಾಷ್ಟ್ರ ರಾಜಧಾನಿಯಲ್ಲಿರುವ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವ್ಯಕ್ತಿಯೊಬ್ಬ ದುಬೈಗೆ ಪ್ರಯಾಣಿಸಲು ಮುಂದಾಗಿದ್ದಾನೆ. ಈ ವೇಳೆ ತನ್ನ ತಾಯಿ ಜೊತೆ ಫೋನ್ ಸಂಭಾಷಣೆಯಲ್ಲಿ ತೊಡಗಿದ್ದಾನೆ. ಆಗ ಬಾಂಬ್ ಎಂಬ ಪದವನ್ನು ಪ್ರಸ್ತಾಪಿಸಿದ್ದಾನೆ. ಇದನ್ನು ಪಕ್ಕದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ರೆಕಾರ್ಡ್ ಮಾಡಿ ಅಧಿಕಾರಿಗಳಿಗೆ ನೀಡಿದ್ದಾರೆ.
ಮಹಿಳೆಯ ದೂರನ್ನು ಆಧರಿಸಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ, ಇಬ್ಬರನ್ನೂ ವಿಮಾನದಿಂದ ಕೆಳಗೆ ಇಳಿಯುವಂತೆ ತಿಳಿಸಿದ್ದಾರೆ. ನಂತರ ವಿಮಾನವನ್ನು ಸಂಪೂರ್ಣ ತಪಾಸಣೆ ನಡೆಸಲಾಗಿದೆ. ಬಳಿಕ ಅಧಿಕಾರಿಗಳು ಆತನ ಬ್ಯಾಗ್ ಅನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್ ನಲ್ಲಿ ತೆಂಗಿನಕಾಯಿ, ಗುಟ್ಕಾ ಪ್ಯಾಕೆಟ್, ತಂಬಾಕು ಪತ್ತೆಯಾಗಿದೆ. ಆದರೆ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಪಾಸಣೆ ಬಳಿಕ ಮಹಿಳೆಗೆ ವಿಮಾನ ಹತ್ತಲು ಅವಕಾಶ ನೀಡಲಾಗಿದೆ. ಈ ಘಟನೆಯಿಂದ ಎರಡು ತಾಸು ವಿಳಂಬವಾಗಿ ವಿಮಾನ ಹೊರಟಿದೆ ಎಂದು ಹೇಳಲಾಗಿದೆ. ಬಾಂಬ್ ಎಂಬ ಪದವನ್ನು ಉಪಯೋಗಿಸಿದ ಪ್ರಯಾಣಿಕರನ್ನು ಐಜಿಐ ಪೊಲೀಸರಿಗೆ ಹಸ್ತಾಂತರಿಸಲಾಯಿತು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವ್ಯಕ್ತಿಯೊಬ್ಬರನ್ನು ಪೊಲೀಸ್ ಬಂಧನ ಮಾಡಿದ್ದಾರೆ. ಫೋನ್ ಸಂಭಾಷಣೆಯ ಸಮಯದಲ್ಲಿ ಸಹ ಪ್ರಯಾಣಿಕರೊಬ್ಬರು ʼಬಾಂಬ್ʼ ಎಂಬ ಪದವನ್ನು ಪ್ರಸ್ತಾಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.