ಬಾಲಿವುಡ್ ನಟ ರಣವೀರ್ ಸಿಂಗ್ ಬ್ಯಾನ್ – ಚಿತ್ರರಂಗದಿಂದ ನಿಷೇಧ ಹೇರಿದ್ದು ಯಾಕೆ?

ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಚಿತ್ರರಂಗದಿಂದ ನಿಷೇಧಕ್ಕೊಳಗಾಗಿದ್ದಾರೆ. ಡಾನ್ 3 ಸಿನಿಮಾದ ವಿವಾದ ಮತ್ತೊಂದು ತಿರುವು ಪಡೆದಿದ್ದು, ಈಗ ರಣವೀರ್ ಸಿಂಗ್ ಅವರನ್ನು ಬ್ಯಾನ್ ಮಾಡಲಾಗಿದೆ. ಇದರಿಂದಾಗಿ ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ವೃತ್ತಿ ಬದುಕು ಸಂಕಷ್ಟದಲ್ಲಿದೆ.
ಇದನ್ನೂ ಓದಿ:ಕಾಫಿ, ಟೀ ಬದಲು ಈ ಡಿಂಕ್ಸ್ ಸೇವಿಸೋದು ಬೆಸ್ಟ್! – ಒಂದು ಪಾನೀಯ.. ಎಷ್ಟೊಂದು ಲಾಭ!
ಬಾಲಿವುಡ್ ಡೈರೆಕ್ಟರ್ ಫರ್ಹಾನ್ ಅಖ್ತರ್ ನಿರ್ದೇಶನದ ಡಾನ್ 3 ಸಿನಿಮಾದಿಂದ ರಣವೀರ್ ಸಿಂಗ್ ದಿಢೀರ್ ಹೊರನಡೆದಿದ್ದರು. ನಟನ ನಡವಳಿಕೆಯಿಂದ ಬೇಸತ್ತ ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖ್ತರ್ ಸಿನಿಮಾ ನೌಕರರ ಒಕ್ಕೂಟದ ಮೆಟ್ಟಿಲೇರಿದ್ದರು . ರಣವೀರ್ ಸಿಂಗ್ ವಿರುದ್ಧ ಅವರು ಅಧಿಕೃತ ದೂರು ದಾಖಲಿಸಿದ್ದರು , ಈ ಕುರಿತು ಒಕ್ಕೂಟವು ಪತ್ರಿಕಾಗೋಷ್ಠಿ ನಡೆಸಿ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಿದೆ. ಸಿನಿಮಾ ನೌಕರರ ಒಕ್ಕೂಟವು ನಟನ ವಿರುದ್ಧ ಅಸಹಕಾರ ತೋರಲು ನಿರ್ಧರಿಸಿದೆ. ಈ ಮೂಲಕ ಚಿತ್ರರಂಗದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಯಾರೂ ಸಹಕರಿಸದಂತೆ ಮತ್ತು ಕೆಲಸ ಮಾಡದಂತೆ ಸೂಚಿಸಿ, ಪರೋಕ್ಷವಾಗಿ ಬ್ಯಾನ್ ಮಾಡಲಾಗಿದೆ.
ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಒಡೆತನದ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ‘ಡಾನ್ 3’ ಸಿನಿಮಾ ಸಿದ್ಧವಾಗುತ್ತಿತ್ತು. ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಈ ಚಿತ್ರದಿಂದ ಹೊರನಡೆದರು. ಈ ದಿಢೀರ್ ನಿರ್ಧಾರದಿಂದ ನಿರ್ಮಾಣ ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಮತ್ತು ಪ್ರಮುಖ ಯೋಜನೆಗಳಿಗಾಗಿ ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿತ್ತು. FWICE ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಚಿತ್ರೀಕರಣಕ್ಕೆ ಕೆಲವೇ ದಿನಗಳಿರುವಾಗ ನಟರು ಈ ರೀತಿ ಸಿನಿಮಾದಿಂದ ಹೊರನಡೆಯುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಸರಿಯಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. FWICE ಅಧ್ಯಕ್ಷ ಬಿ.ಎನ್ ತಿವಾರಿ, ಮುಖ್ಯ ಸಲಹೆಗಾರ ಅಶೋಕ್ ಪಂಡಿತ್, ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ಮತ್ತು ಖಜಾಂಚಿ ಗಂಗೇಶ್ವರಲಾಲ್ ಶ್ರೀವಾಸ್ತವ್ ಅವರನ್ನೊಳಗೊಂಡ ಉನ್ನತ ಮಟ್ಟದ ಆಂತರಿಕ ಸಭೆಯ ನಂತರ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ ಈ ವಿವಾದವು ನಿರ್ಮಾಪಕರ ಸಂಘದ ಮೆಟ್ಟಿಲೇರಿತ್ತು. ಅಲ್ಲಿ ಹಿರಿಯ ನಿರ್ಮಾಪಕರು ರಣವೀರ್ ಸಿಂಗ್ ಹಾಗೂ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಡುವೆ ರಾಜಿ ಸಂಧಾನ ಮಾಡಲು ಪ್ರಯತ್ನಿಸಿದ್ದರು. ಆದರೆ, ನಷ್ಟ ಪರಿಹಾರ ಹಾಗೂ ಸೆಟಲ್ಮೆಂಟ್ ಕುರಿತ ಮಾತುಕತೆಗಳು ಸಫಲವಾಗದ ಕಾರಣ ಈಗ ಫೆಡರೇಶನ್ ಕಠಿಣ ಕ್ರಮಕ್ಕೆ ಮುಂದಾಗಿದೆ.
ರಣವೀರ್ ಸಿಂಗ್ ಅವರು ಈ ವಿವಾದದ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಆದರೆ ಉದ್ಯಮ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಚಿತ್ರಕಥೆ ಮತ್ತು ಕ್ರಿಯೇಟಿವ್ ಡೈರೆಕ್ಷನ್‌ನಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ರಣವೀರ್ ಸಿಂಗ್ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಡಾನ್ 3 ಚಿತ್ರದ ಕಥೆ ಮತ್ತು ಪಾತ್ರ ವಿನ್ಯಾಸ ರಣವೀರ್ ಅವರ ನಿರೀಕ್ಷೆಗೆ ಸರಿಯಾಗಿರಲಿಲ್ಲ ಎಂಬ ಕಾರಣವೂ ಇದಕ್ಕೆ ಕಾರಣ ಎಂದು ಬಾಲಿವುಡ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ನೋಡಿರಿ

