ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ರೆಡಿ – ಚುನಾವಣೆಗೆ ಬಿಜೆಪಿ ಬಿಡುತ್ತಾ ‘ರಾಮ’ಬಾಣ..?

ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ರೆಡಿ – ಚುನಾವಣೆಗೆ ಬಿಜೆಪಿ ಬಿಡುತ್ತಾ ‘ರಾಮ’ಬಾಣ..?

ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಲೆಕ್ಕಾಚಾರ. ಒಂದೊಂದು ಕ್ಷೇತ್ರದಲ್ಲಿ ಒಂದೊಂದು ತಂತ್ರ. ವಿಧಾನಸಭಾ ಚುನಾವಣೆಗೆ ಸಜ್ಜಾಗ್ತಿರೋ ಬಿಜೆಪಿ ನಡೆಯೇ ವಿಭಿನ್ನವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬೇರೂರಿರುವ ನೆಲದಲ್ಲೇ ‘ಕಮಲ’ ಅರಳಿಸೋಕೆ ನಾನಾ ಪ್ಲ್ಯಾನ್ ಮಾಡ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಇವತ್ತು ಅಮಿತ್ ಶಾ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡ್ತಿದ್ದಾರೆ. ಮತ್ತೊಂದೆಡೆ ದಕ್ಷಿಣದಲ್ಲೂ ಬಿಜೆಪಿ ಗಟ್ಟಿಗೊಳಿಸಲು ಸಕಲ ತಯಾರಿ ನಡೆದಿದೆ. ಅದ್ರಲ್ಲೂ ಜೆಡಿಎಸ್ ಹಾಗೂ ಕಾಂಗ್ರೆಸ್​ನ ಭದ್ರಕೋಟೆಯಾಗಿರುವ ರಾಮನಗರದಲ್ಲೇ ‘ರಾಮ’ಸ್ತ್ರ ಬಿಡಲು ಎಲ್ಲಾ ಸಿದ್ಧತೆಯೂ ಆಗಿದೆ.

ಇದನ್ನೂ ಓದಿ : ಕಾಂಗ್ರೆಸ್ ಭದ್ರಕೋಟೆ ಸಂಡೂರುನಲ್ಲಿ ಬಿಜೆಪಿ ರಣಕಹಳೆ – ಅಮಿತ್ ಶಾ ಎಂಟ್ರಿ.. ಹೇಗಿದೆ ‘ಕೇಸರಿ’ ನಗಾರಿ..?

ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅದ್ರಲ್ಲೂ ಬಿಜೆಪಿ ಹಳೇ ಮೈಸೂರು ಭಾಗದ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಹಾಗಾಗಿ ಬಜೆಟ್​ನಲ್ಲಿ ಈ ಭಾಗಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಈಗಾಗಲೇ ಬಿಜೆಪಿ ನಾಯಕರು, ಮೈಸೂರು ಭಾಗದಲ್ಲಿ ಹಿಂದುತ್ವ ಆಧಾರದ ಮೇಲೆಯೇ ಮತ ಕೇಳುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಮಾತುಗಳಿಗೆ ಪೂರಕ ಎಂಬಂತೆ ಬಜೆಟ್​ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 50 ಕೋಟಿ ಘೋಷಣೆ ಮಾಡಿದ್ದರು. ಇದೀಗ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೂ ರಾಮಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲು ಬಿಜೆಪಿ ತುದಿಗಾಲಿನಲ್ಲಿ ನಿಂತಿದೆ. ರಾಮಮಂದಿರದ ವಿಷಯವನ್ನಿಟ್ಟುಕೊಂಡು ಚುನಾವಣೆ ಪ್ರಚಾರ ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಂತೆ ಕಾಣುತ್ತಿದೆ.

ಬಜೆಟ್​ನಲ್ಲಿ ಅನುದಾನ ಘೋಷಣೆಯಾಗಿ ಇನ್ನೂ 10 ದಿನಗಳು ಸಹ ಕಳೆದಿಲ್ಲ. ಅದಾಗಲೇ ರಾಮಮಂದಿರ ನಿರ್ಮಾಣದ ನೀಲನಕ್ಷೆ ಸಿದ್ಧಪಡಿಸಲಾಗಿದೆಯಂತೆ. ಮಾರ್ಚ್ ಮೊದಲ ವಾರದಲ್ಲಿಯೇ ರಾಮಮಂದಿರ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಲು ಬಿಜೆಪಿ ಸಿದ್ಧವಾಗುತ್ತಿದೆ ಎನ್ನಲಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣವಾದ ರೀತಿಯಲ್ಲಿಯೇ ರಾಮಮಂದಿರದ ಕೆಲಸಗಳು ನಡೆಯಬೇಕು ಎಂದು ಸಚಿವ ಅಶ್ವತ್ಥ್ ನಾರಾಯಣ್ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

19 ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ಸಿದ್ಧವಾಗಿದೆ. ಹಣಕಾಸು ಇಲಾಖೆಗೆ 50 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ಅನುಮತಿ ಸಿಗಬೇಕಿದೆ. ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ದೇಣಿಗೆ ಹಾಗೂ ಅಗತ್ಯ ಸಾಮಾಗ್ರಿಗಳ ಸಂಗ್ರಹದ ಬಗ್ಗೆಯೂ ಚರ್ಚೆಗಳು ನಡೆದಿವೆ. ರಾಮದೇವರ ಬೆಟ್ಟದಲ್ಲಿ ಪ್ರಕೃತಿಗೆ ತೊಂದರೆಯಾಗದ ರೀತಿಯಲ್ಲಿ ಎಸ್ತೆಟಿಕ್ ಆರ್ಕಿಟೆಕ್ಟ್​ನ ಖ್ಯಾತ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ನೇತೃತ್ವದ ತಂಡದಿಂದ ಶಿಲಾನ್ಯಾಸ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇತಿಹಾಸ ತಜ್ಞರು, ದೇಗುಲ ವಾಸ್ತುಶಿಲ್ಪಿ ಪರಿಣಿತರು, ಪರಿಸರ ಮತ್ತು ವನ್ಯಜೀವಿ ತಜ್ಞರು ವಿನ್ಯಾಸದ ತಂಡದಲ್ಲಿದ್ದಾರೆ. ಮಾರ್ಚ್​​​ನಲ್ಲಿ ಶಂಕುಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರ್ಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಶಂಕುಸ್ಥಾಪನೆ ನೆರವೇರಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಶಂಕುಸ್ಥಾಪನೆ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

suddiyaana