ಜಮೀನು ವಿವಾದವಾಗಿ ಎರಡು ಗುಂಪುಗಳ ನಡುವೆ ಕಿತ್ತಾಟ – 6 ಜನರನ್ನ ಭೀಕರವಾಗಿ ಕೊಂದ ಹಂತಕರು 

ಜಮೀನು ವಿವಾದವಾಗಿ ಎರಡು ಗುಂಪುಗಳ ನಡುವೆ ಕಿತ್ತಾಟ – 6 ಜನರನ್ನ ಭೀಕರವಾಗಿ ಕೊಂದ ಹಂತಕರು 

ಹಳ್ಳಿಗಳೇ ಇರಲಿ ಸಿಟಿಗಳೇ ಆಗಲಿ ಜಮೀನು ವಿಚಾರ ಬಂದರೆ ಎಂಥವರೂ ಕೂಡ ಉಗ್ರರೂಪ ತಾಳಿ ಬಿಡ್ತಾರೆ. ರಕ್ತ ಸಂಬಂಧವೇ ಇರಲಿ, ಅದೆಂಥಾ ಪರಿಚಯಸ್ಥರೇ ಆಗಲಿ ಜೀವ ತೆಗೆಯೋ ಮಟ್ಟಕ್ಕೂ ಹೇಸೋದಿಲ್ಲ. ಸದ್ಯ ಇಂಥದ್ದೇ ಒಂದು ಭೀಭತ್ಸ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. ಜಮೀನು ವಿವಾದಕ್ಕೆ 6 ಜನರನ್ನ ದಾರುಣವಾಗಿ ಹತ್ಯೆ ಮಾಡಲಾಗಿದೆ.

ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಇಂಥಾದ್ದೊಂದು ಭಯಾನಕ ಘಟನೆ ನಡೆದಿದೆ. ರುದ್ರಾಪುರ ಸಮೀಪದ ಫತೇಪುರ್ ಗ್ರಾಮದಲ್ಲಿ ಹಳೆ ದ್ವೇಷದಿಂದ ಆರು ಮಂದಿಯನ್ನು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರೇ ಮೃತದೇಹಗಳನ್ನ ನೋಡಿ ಗಾಬರಿಯಾಗಿದ್ದಾರೆ. ಘಟನೆಯಿಂದ ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. ಘಟನಾ ಸ್ಥಳದಲ್ಲಿ ಕಿರುಚಾಟದಿಂದ ಇಡೀ ಗ್ರಾಮವೇ ಭಯಭೀತಗೊಂಡಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆರು ಜನರ ಹತ್ಯೆಯ ಸುದ್ದಿ ಪೊಲೀಸ್ ಇಲಾಖೆಯಲ್ಲಿಯೂ ಸಂಚಲನ ಮೂಡಿಸಿದೆ.

ಇದನ್ನೂ ಓದಿ : ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಕುಕಿ ಸಮುದಾಯದ ನಾಲ್ವರು ಅರೆಸ್ಟ್

ಅಷ್ಟಕ್ಕೂ ಏನಿದು ಜಮೀನು ವಿವಾದ ಅಂದ್ರೆ ಅದಕ್ಕೆ ದೊಡ್ಡ ಕಥೆಯೇ ಇದೆ. ದೇವರಿಯಾ ಜಿಲ್ಲೆಯ ರುದ್ರಪುರ ಕೊಟ್ವಾಲಿ ಪ್ರದೇಶದ ಫತೇಪುರ್ ಗ್ರಾಮದಲ್ಲಿ ಜಮೀನು ವಿವಾದದಲ್ಲಿ ಒಂದೇ ಕುಟುಂಬದ ಆರು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತರಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರೂ ಸೇರಿದ್ದಾರೆ. ಪೊಲೀಸರ ಪ್ರಕಾರ, ಗ್ರಾಮದ ವ್ಯಕ್ತಿಯೊಬ್ಬನೊಂದಿಗೆ ಜಮೀನು ವಿವಾದ ಬಹಳ ದಿನಗಳಿಂದ ನಡೆಯುತ್ತಿತ್ತು. ಪೋಲೀಸರ ಪ್ರಕಾರ, ಫತೇಪುರದ ಲೇಧಾ ತೋಲಾ ನಿವಾಸಿ ಜನಾರ್ದನ್ ದುಬೆ ಅವರ ಮಗ ಸತ್ಯ ಪ್ರಕಾಶ್ ದುಬೆ ಪ್ರೇಮಚಂದ್ ಯಾದವ್ ಅವರೊಂದಿಗೆ ಬಹಳ ದಿನಗಳಿಂದ ಜಮೀನಿನ ವಿವಾದವನ್ನು ಹೊಂದಿದ್ದರು. ವಿವಾದಿತ ಭೂಮಿಯನ್ನು ನೋಡಲು ಪ್ರೇಮಚಂದ್ ಯಾದವ್ ಸೋಮವಾರ ಬೆಳಗ್ಗೆ 7:00 ಗಂಟೆ ಸುಮಾರಿಗೆ ಜಮೀನಿನ ಬಳಿ ತಲುಪಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸತ್ಯಪ್ರಕಾಶ್ ದುಬೆ ಅವರು ತಮ್ಮ ಮಕ್ಕಳೊಂದಿಗೆ ಅಲ್ಲಿಗೆ ತಲುಪಿದ್ದಾರೆ. ಈ ವೇಳೆ ಉಭಯ ಗುಂಪಿನ ನಡುವೆ ವಾಗ್ವಾದ ಆರಂಭವಾಗಿದೆ. ಈ ವೇಳೆ ಸತ್ಯ ಪ್ರಕಾಶ್ ದುಬೆ  ಗುಂಪಿನವರು ಸೇರಿ ಪ್ರೇಮಚಂದ್ ಯಾದವ್ ಅವರನ್ನು ಇಟ್ಟಿಗೆಯಿಂದ ಹೊಡೆದು ಕೊಂದಿದ್ದಾರೆ. ನಂತರ ಮನೆಗೆ ಹೋಗಿದ್ದಾರೆ. ಪ್ರೇಮಚಂದ್ ಯಾದವ್ ಅವರ ಕುಟುಂಬ ಸದಸ್ಯರಿಗೆ ಕೊಲೆಯ ಸುದ್ದಿ ತಿಳಿದ ತಕ್ಷಣ, ಅವರೂ ಕೂಡ ಸತ್ಯ ಪ್ರಕಾಶ್ ದುಬೆ ಅವರ ಮನೆಗೆ ಹೋಗಿ ಬಾಗಿಲು ಒಡೆದು ಒಳ ಹೋಗಿದ್ದಾರೆ. ಈ ವೇಳೆ ಸತ್ಯ ಪ್ರಕಾಶ್ ದುಬೆ, ಅವರ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.  ಘಟನೆ ಬಳಿಕ ಇಡೀ ಗ್ರಾಮ ಉದ್ವಿಘ್ನ ಸ್ಥಿತಿಯಲ್ಲಿದ್ದು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

Shantha Kumari