‘ರೈತ ಸಂಘ ಬೆಂಬಲಿಸಿದ್ದರಿಂದಲೇ ಬಿಜೆಪಿಗೆ ಸೋಲು’ – ಸಂಸದೆ ಸುಮಲತಾ ವಿರುದ್ಧ ಇಂದ್ರೇಶ್ ಕಿಡಿ!

‘ರೈತ ಸಂಘ ಬೆಂಬಲಿಸಿದ್ದರಿಂದಲೇ ಬಿಜೆಪಿಗೆ ಸೋಲು’ – ಸಂಸದೆ ಸುಮಲತಾ ವಿರುದ್ಧ ಇಂದ್ರೇಶ್ ಕಿಡಿ!

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ದೇಶಾದ್ಯಂತ ಸದ್ದು ಮಾಡಿದ್ರು. ನಂತರದ ದಿನಗಳಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗದಿದ್ರೂ ಬಿಜೆಪಿ ಹಾಗೂ ಮೋದಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೀಗ ಮಂಡ್ಯ ಜಿಲ್ಲೆಯ ಮೇಲುಕೋಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಸುಮಲತಾ ವಿರುದ್ಧವೇ ಗುಡುಗಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಅವರ (Sumalatha Ambareesh) ಅನೈತಿಕ ಬೆಂಬಲದಿಂದ ಮೇಲುಕೋಟೆ (Melukote) ಕ್ಷೇತ್ರದಲ್ಲಿ ಬಿಜೆಪಿಗೆ (BJP) ಕಡಿಮೆ ಮತ ಬಂದಿದೆ. ಮೇಲುಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಸುಮಲತಾ ಅವರ ಹೇಳಿಕೆಗೆ ನನ್ನ ಧಿಕ್ಕಾರ ಎಂದು ಮೇಲುಕೋಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಇಂದ್ರೇಶ್ (Dr. Indresh) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಮಂಡ್ಯ (Mandya) ಜಿಲ್ಲೆಯಲ್ಲಿ ಹೊಸ ಅಧ್ಯಾಯ ಬರೆಯಬೇಕೆಂದು ಹೊರಟಿತ್ತು. ಆದರೆ ಬಿಜೆಪಿಗೆ ಮಂಡ್ಯದಲ್ಲಿ ತೀವ್ರ ಆಘಾತವಾಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಇಂದ್ರೇಶ್ 6,470 ಮತಗಳನ್ನು ಪಡೆದುಕೊಳ್ಳುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಇಂದ್ರೇಶ್, ಗುಪ್ತಚರ ಮಾಹಿತಿ ಪ್ರಕಾರ 38 ಸಾವಿರ ಮತಗಳನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಲಾಗುತ್ತಿತ್ತು. ಆದರೆ ಸುಮಲತಾ ಅಂಬರೀಶ್ ಅವರು ರೈತ ಸಂಘಕ್ಕೆ ನೀಡಿದ ಅನೈತಿಕ ಬೆಂಬಲದಿಂದ ನಾನು ಕಡಿಮೆ ಮತಗಳನ್ನು ಗಳಿಸಲು ಸಾಧ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ವಿಧಾನಸಭೆ ಸ್ಪೀಕರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಯು.ಟಿ ಖಾದರ್

ಸುಮಲತಾ ಅವರು ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಚುನಾವಣೆಗೆ 6 ದಿನಗಳು ಇರುವ ಮುಂಚೆ ದರ್ಶನ್ ಪುಟ್ಟಣ್ಣಯ್ಯ (Darshan Puttanna) ಚುನಾವಣೆಯಲ್ಲಿ ಗೆದ್ದರೆ ಖುಷಿ. ಮೇಲುಕೋಟೆಯಲ್ಲಿ ಗೆಲ್ಲುವ ಅಭ್ಯರ್ಥಿ ಯಾರು ಎಂದು ನೋಡಬೇಕು. ನಮ್ಮ ಗುರಿ ಜೆಡಿಎಸ್ (JDS) ಸೋಲಿಸುವುದರ ಮೂಲಕ ರೈತ ಸಂಘದ ಪರ ಎಂದು ಸುಮಲತಾ ಮಾತನಾಡಿದ್ದರು. ಇದೇ ಕಾರಣಕ್ಕೆ ಬಿಜೆಪಿ ಇಷ್ಟೊಂದು ಕಡಿಮೆ ಮತ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಮಂಡ್ಯದಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲದಿದ್ದಕ್ಕೆ ಹಲವರು ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದಲೇ ಸೋಲಾಯಿತು ಎಂದು ವರದಿ ಮಾಡುತ್ತಿದ್ದಾರೆ. ಇದಕ್ಕೆ ಖಾರವಾಗೇ ಪ್ರತಿಕ್ರಿಯೆ ನೀಡಿರುವ ಸಂಸದೆ ಸುಮಲತಾ ಟ್ವೀಟ್ ನಲ್ಲೇ ತಿರುಗೇಟು ಕೊಟ್ಟಿದ್ದಾರೆ. ಪಕ್ಷವು ಘೋಷಣೆ ಮಾಡಿದ ಜಿಲ್ಲೆಯ ಎಲ್ಲ ಅಭ್ಯರ್ಥಿಗಳು ಫಸ್ಟ್ ಟೈಮ್ ಚುನಾವಣೆ ಎದುರಿಸಿದವರು. ಆದರೂ ಎದುರಾಳಿಗಳ ವಿರುದ್ಧ ಸಮರ್ಥವಾಗಿ ಹೋರಾಟ ಮಾಡಿದ್ದಾರೆ. ಅಲ್ಲದೇ ಪ್ರಚಾರಕ್ಕೆ ನಮಗಿದ್ದದ್ದು ಎರಡ್ಮೂರು ವಾರಗಳಷ್ಟೇ ಸಮಯ. ಆದರೂ ಹೊಸ ಪಡೆಯನ್ನು ಕಟ್ಟಿಕೊಂಡು ಹೋರಾಟ ಮಾಡಿದ್ದೇವೆ. ಪರಿಣಾಮ ಮೊದಲ ಬಾರಿಗೆ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಮತ್ತು ಮಳವಳ್ಳಿಯಲ್ಲಿ ಬಿಜೆಪಿಗೆ ಮತಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರ್ಪಾಡು ಮಾಡಿಕೊಳ್ಳೋದಾಗಿ ಸಮಜಾಯಿಸಿ ನೀಡಿದ್ದಾರೆ.

suddiyaana