ಕಲೆಕ್ಷನ್‌ ಕೊಡಿ..  ನಿಗಮ ಮಂಡಳಿ ಅಧಿಕಾರ ಪಡಿ! – ಕಾಂಗ್ರೆಸ್‌ ವಿರುದ್ಧ  ರೇಟ್‌ ಕಾರ್ಡ್ ಬಿಡುಗಡೆ‌ ಮಾಡಿದ ಬಿಜೆಪಿ!

ಕಲೆಕ್ಷನ್‌ ಕೊಡಿ..  ನಿಗಮ ಮಂಡಳಿ ಅಧಿಕಾರ ಪಡಿ! – ಕಾಂಗ್ರೆಸ್‌ ವಿರುದ್ಧ  ರೇಟ್‌ ಕಾರ್ಡ್ ಬಿಡುಗಡೆ‌ ಮಾಡಿದ ಬಿಜೆಪಿ!

ಬೆಂಗಳೂರು: ಕಾಂಗ್ರೆಸ್‌ ಹಾಗೂ ಬಿಜೆಪಿ ಪೋಸ್ಟರ್‌ ವಾರ್‌ ಮುಂದುವರಿದಿದೆ. ಇದೀಗ ನಿಗಮ ಮಂಡಳಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿರುವ ಬಿಜೆಪಿ ಇದರಲ್ಲೂ ಕಲೆಕ್ಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದೆ. ಅಷ್ಟೇ ಅಲ್ಲದೇ ಈ ಕುರಿತ ಪೋಸ್ಟರ್‌ ವೊಂದನ್ನು ಸಿದ್ಧಪಡಿಸಿದ್ದು, ಇದರಲ್ಲಿ 14 ಮಂಡಳಿಗಳಿಗೆ ಕಾಂಗ್ರೆಸ್ ಸರ್ಕಾರ ಇಂತಿಷ್ಟು ರೇಟ್‌ ನಿಗದಿಪಡಿಸಿದೆ ಎಂದು ಆರೋಪಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, “ಈಗಾಗಲೇ ವರ್ಗಾವಣೆಯನ್ನು ಫೋನ್‌ ಕರೆಯಲ್ಲೇ ನಿಭಾಯಿಸುವ ವ್ಯವಸ್ಥಿತ ದಂಧೆಯನ್ನಾಗಿ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರ ಸರ್ಕಾರ ನಿಗಮ ಮಂಡಳಿ ಹರಾಜಿಗೆ ಇಷ್ಟು ದಿನ ಕಾಯತ್ತಿತ್ತು. ಈ ಹಿಂದೆ ವ್ಯವಹಾರ ಸರಿಯಾಗಿ ಕುದುರದ ಕಾರಣ ಮುಂದೂಡಲಾಗಿದ್ದ ನಿಗಮ ಮಂಡಳಿ ಹುದ್ದೆಗಳ ಹರಾಜು ಪ್ರಕ್ರಿಯೆ ಬಗ್ಗೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ದೆಹಲಿಯಿಂದ ಬಂದು ಸಮಾಲೋಚನೆಗಳನ್ನು ನಡೆಸಿದ್ದಾರೆ. ಪರಿಣಾಮವಾಗಿ ನಿಗಮ ಮಂಡಳಿ ಹುದ್ದೆಗೆ ಕೊಡಬೇಕಾದ ಕಲೆಕ್ಷನ್‌ ಪ್ರಮಾಣ ಮತ್ತೆ ಚರ್ಚೆಗೆ ಬಂದಿದೆ. ” ಎಂದು ಆರೋಪಿಸಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಕಾರಣವೇನು ಗೊತ್ತಾ?

ಇನ್ನು ಕಾಂಗ್ರೆಸ್ ಸರ್ಕಾರ ಬಿಡಿಎಗೆ ಅತಿ ಹೆಚ್ಚು 50 ಕೋಟಿ ರೂಪಾಯಿ, ಬಿಡಬ್ಲ್ಯೂಎಸ್ ಎಸ್ ಬಿ 45 ಕೋಟಿ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ 28 ಕೋಟಿ ರೂಪಾಯಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ 25 ಕೋಟಿ ರೂಪಾಯಿ, ಕೆಆರ್ಐಡಿಎಲ್ 20 ಕೋಟಿ ರೂಪಾಯಿ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ 19 ಕೋಟಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳು 16 ಕೋಟಿ ರೂಪಾಯಿ, ಕಿಯೋನಿಕ್ಸ್ 15 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.

ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 13 ಕೋಟಿ ರೂಪಾಯಿ, ಕರ್ನಾಟಕ ಉಗ್ರಾಣ ನಿಗಮ 12 ಕೋಟಿ ರೂಪಾಯಿ, ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್ 11 ಕೋಟಿ ರೂಪಾಯಿ, ಕರ್ನಾಟಕ ಗೃಹ ಮಂಡಳಿ 10 ಕೋಟಿ ರೂಪಾಯಿ ಮತ್ತು ಕರ್ನಾಟಕ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಗೆ ರೂ 5 ಕೋಟಿ ರೂ ನಿಗದಿಪಡಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್ ನಲ್ಲಿ ಭಾರೀ ಪೈಪೋಟಿ

ಇನ್ನು ನಿಗಮ ಮಂಡಳಿ ನೇಮಕಾತಿ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ತಮಗೇ ಇಂತಿಂಥ ನಿಗಮ ಮಂಡಳಿ ನೀಡಬೇಕೆಂದು ಶಾಸಕರ ಕಡೆಯಿಂದ ಒತ್ತಡ ಹೆಚ್ಚಾಗಿದೆ. ಇದರೊಂದಿಗೆ ತಮ್ಮ ಆಪ್ತರಿಗೆ ನಿಗಮ ಮಂಡಳಿ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಪೈಟೋಟಿಗೆ ಬಿದ್ದಿದ್ದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಹ ಬೆಂಗಳೂರಿಗೆ ಆಗಮಿಸಿ ಸಭೆಯನ್ನೂ ನಡೆಸಿದ್ದಾರೆ ಎಂದು ಹೇಳಲಾಗಿದೆ.

Shwetha M