ಮೋದಿಯನ್ನು ತಡೆಯುತ್ತಾ ಕಾಂಗ್ರೆಸ್? | ನೇಹಾ ಮನೆಗೆ ಸಿಎಂ? | ಇಂದಿನ ಪ್ರಮುಖ ಸುದ್ದಿಗಳು

ಮೋದಿಯನ್ನು ತಡೆಯುತ್ತಾ ಕಾಂಗ್ರೆಸ್? | ನೇಹಾ ಮನೆಗೆ ಸಿಎಂ? | ಇಂದಿನ ಪ್ರಮುಖ ಸುದ್ದಿಗಳು

ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.  ಕೇಂದ್ರ ಸಚಿವ, ಹಾಲಿ ಸಂಸದ ಪ್ರಹ್ಲಾದ್‌ ಜೋಶಿ ವಿರುದ್ಧ ತೊಡೆತಟ್ಟಿದ್ದ ದಿಂಗಾಲೇಶ್ವರ ಸ್ವಾಮೀಜಿ ಈಗ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠದ ಹಿರಿಯ ಪೀಠಾಧಿಪತಿ ಶಿವಯೋಗಿ ಸಿದ್ಧರಾಮ ಮಹಾಸ್ವಾಮಿಗಳು ದಿಂಗಾಲೇಶ್ವರ ಸ್ವಾಮೀಜಿಗೆ ಚುನಾವಣಾ ಕಣದಿಂದ ಹಿಂದೆ ಸರಿಯಿರಿ ಎಂದು ಸೂಚನೆ ನೀಡಿದ್ದರು. ಭಕ್ತರು ಕೂಡಾ ಒತ್ತಡ ಹಾಕಿದ್ದರು. ಹೀಗಾಗಿ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಇದರಿಂದ ಪ್ರಹ್ಲಾದ್‌ ಜೋಶಿಗೆ ರಿಲೀಫ್‌ ಸಿಕ್ಕಂತಾಗಿದೆ.

ಬಿಜೆಪಿ ಪ್ರಚಾರಕ್ಕೆ ನೇಹಾ ಪ್ರಕರಣವೇ ಬೂಸ್ಟ್!

ಕರ್ನಾಟಕ ಲೋಕಸಭಾ ಚುನಾವಣಾ ಅಖಾಡಕ್ಕೆ ಕೇಸರಿ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಡಲಿದ್ದಾರೆ.  ಎರಡನೇ ಹಂತದ ಕ್ಷೇತ್ರಗಳತ್ತ ಅಮಿತ್ ಶಾ ಫೋಕಸ್ ಮಾಡಿದ್ದು, ಕಾಂಗ್ರೆಸ್‍ಗೆ ಠಕ್ಕರ್ ಕೊಡಲು ತಂತ್ರಗಾರಿಕೆ ಹೂಡಿದ್ದಾರೆ. 2ನೇ ಹಂತದ ಪ್ರಚಾರಕ್ಕೆ ನೇಹಾ ಹಿರೇಮಠ್ ಪ್ರಕರಣವೇ ಬಿಜೆಪಿಗೆ ಬೂಸ್ಟ್. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದಲೇ ಚಾಣಕ್ಯ ಕ್ಯಾಂಪೇನ್ ಸ್ಟಾರ್ಟ್ ಮಾಡಲಿದ್ದಾರೆ. ಉತ್ತರ ಕರ್ನಾಟಕ ಕ್ಷೇತ್ರಗಳ ರಿಪೋರ್ಟ್ ತರಿಸಿಕೊಂಡಿರುವ ಅಮಿತ್ ಶಾ, ಪ್ರಚಾರದ ತಂತ್ರ ರೂಪಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ v/s ಬಿಜೆಪಿ ಚೊಂಬು ವಾರ್‌

ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಚೊಂಬು ಸಮರ ಶುರುವಾಗಿದೆ. ಸೋಶಿಯಲ್‌ ಮೀಡಿಯಾ, ಜಾಹಿರಾತುಗಳ ಮೂಲಕ ಚೊಂಬು ವಾರ್‌ ನಡೆಸುತ್ತಿದೆ. ಮೂರು ದಿನಗಳ ಹಿಂದೆ ಕಾಂಗ್ರೆಸ್‌ ನೀಡಿದ ಖಾಲಿ ಚೊಂಬು ಜಾಹೀರಾತಿಗೆ ಬಿಜೆಪಿ ತಿರುಗೇಟು ನೀಡಿದೆ. ಕೈ  ಪಡೆ ವಿರುದ್ಧ ಕಮಲ ಪಾಳಯ ನವ  ಅಸ್ತ್ರ ಪ್ರಯೋಗಿಸಿದೆ. ದಲಿತರ ಕಲ್ಯಾಣಕ್ಕಾಗಿಯೇ ಮೀಸಲಾಗಿದ್ದ ಹಣ ಅನ್ಯರ ಪಾಲಾಗಬೇಕಾ? ಆಟೋದಲ್ಲಿ ಹೋದ ಪ್ರಯಾಣಿಕರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾ? ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರನ್ನು ಓಲೈಸುವವರು ಬೇಕಾ? ಕನ್ನಡಿಗರ ಪಾಲಿನ ಕಾವೇರಿ ನೀರು ಬೇರೆ ರಾಜ್ಯಕ್ಕೆ ಸೇರಬೇಕಾ ಎಂದು ಬಿಜೆಪಿ ಪ್ರಶ್ನೆಗಳನ್ನು ಕೇಳಿದ್ದು, ಕಾಂಗ್ರೆಸ್‌ ಅಂದ್ರೇ ಡೇಂಜರ್‌ ಅಂತಾ ಹೇಳಿದೆ.

ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಅಜೆಂಡಾ ರೆಡಿ!

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಸ್ವತಃ ಡಿ.ಕೆ.ಶಿವಕುಮಾರ್‌ ಸಂಚು ಮಾಡುತ್ತಿದ್ದಾರೆ ಅಂತಾ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಎಲೆಕ್ಷನ್‌ ಬಳಿಕ ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಅಜೆಂಡಾ ರೆಡಿ ಆಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಶಿವಾನಂದ ಪಾಟೀಲ್ ಇಬ್ಬರೂ ಸೇರಿ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ ಎಂದು ಯತ್ನಾಳ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳುತ್ತಾರೆ – ಯತೀಂದ್ರ ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ, ಎಲ್ಲ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳುತ್ತಾರೆ ಅಂತಾ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ, ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಮಹಿಳೆಯರು ತಮ್ಮ ಗಂಡಂದಿರು, ಮಕ್ಕಳನ್ನು ಸಹ ಕಳೆದುಕೊಳ್ಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮುಗಲಭೆ, ದೊಂಬಿ ಮಾಡುತ್ತಾರೆ. ಗಲಾಟೆ ಮಾಡಿ ಮಕ್ಕಳನ್ನು ಸಾಯುವಂತೆ ಮಾಡುತ್ತಾರೆ ಅಂತಾ ಹೇಳಿದ್ದಾರೆ. ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಚುನಾವಣೆಗೂ ಮುನ್ನವೇ ಬಿಜೆಪೆ ಅಭ್ಯರ್ಥಿ ಗೆಲುವು!

ಸೂರತ್​ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಗುಜರಾತ್‌ನ 26 ಸ್ಥಾನಗಳ ಪೈಕಿ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ಸೂರತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಹೀಗಾಗಿ ಸೂರತ್ ಕ್ಷೇತ್ರದಲ್ಲಿ ಬಿಜೆಪಿಗೆ ಅಧಿಕೃತ ಎದುರಾಳಿಯೇ ಇಲ್ಲದಂತಾಗಿತ್ತು..  ಇದೇ ವೇಳೆ ಚುನಾವಣೆಯಲ್ಲಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದ 7 ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದರು. ಹೀಗಾಗಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಗೆಲುವು ಸಾಧಿಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಪ್ರಧಾನಿ ಮೋದಿಯವರನ್ನು ಚುನಾವಣೆಯಲ್ಲಿ ಪ್ರಚಾರದಿಂದ ತಡೆಯುವಂತೆ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.. ಕಾಂಗ್ರೆಸ್‌ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ ಎಂದು ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ವೇಳೆ ಆರೋಪ ಮಾಡಿದ್ದರು. ಇದನ್ನೇ ಮುಂದಿಟ್ಟುಕೊಂಡಿರುವ ಕಾಂಗ್ರೆಸ್‌ ನಾಯಕರು, ಮೋದಿ ಕೋಮು ದ್ವೇಷ ಹುಟ್ಟಿಸುವ ವಿಚಾರಗಳನ್ನು ಪ್ರಚಾರ ಸಭೆಗಳಲ್ಲಿ ಮಾತಾಡುತ್ತಿದ್ದಾರೆ.. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು ಪ್ರಧಾನಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.. ಅಲ್ಲದೆ ಮೋದಿಯವರನ್ನು ಚುನಾವಣಾ ಪ್ರಚಾರದಲ್ಲಿ ತೊಡಗದಂತೆ ತಡೆಯಬೇಕು ಎನ್ನುವ ಒತ್ತಾಯವನ್ನು ಕಾಂಗ್ರೆಸ್‌ ಮಾಡಿದೆ.

 ಸಿಐಡಿ ತನಿಖೆ ನೇಹಾ ಪ್ರಕರಣ – ಸಿಎಂ ಸಿದ್ಧರಾಮಯ್ಯ

ನೇಹಾ ಹಿರೇಮಠ್‌ ಪ್ರಕರಣವನ್ನು ಖಂಡಿಸಿ ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು.. ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಂಘಟನೆಗಳು ಕೂಡ ಹಂತಕನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತಿಭಟನೆ ಮೂಲಕ ಆಗ್ರಹಿಸಿದ್ದರು.. ಇದೇ ವೇಳೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ನಿರ್ಧರಿಸಿದೆ.. ಜೊತೆಗೆ ಸಿಎಂ ಸಿದ್ದರಾಮಯ್ಯ ತಾವು ಧಾರವಾಡಕ್ಕೆ ಹೋಗುವ ದಿನ ನೇಹಾಳ ಮನೆಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ. ಇಡೀ ಪ್ರಕರಣ ಈಗ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕಾಂಗ್ರೆಸ್‌ ವಿರುದ್ಧ ಬಿಜೆಪಿ ಇದನ್ನು ದೊಡ್ಡ ಅಸ್ತ್ರ ಮಾಡಿಕೊಂಡಿದೆ..

 ಬರ ಪರಿಹಾರ ಬಿಡುಗಡೆ ಮಾಡಲು ಒಪ್ಪಿದ ಕೇಂದ್ರ ಸರ್ಕಾರ

ಕರ್ನಾಟಕಕ್ಕೆ ಬರಪರಿಹಾರ ನೀಡುವ ಬಗ್ಗೆ ಒಂದು ವಾರದೊಳಗೆ ತೀರ್ಮಾನ ಕೈಗೊಂಡು ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಕೇಂದ್ರ ಸರ್ಕಾರ ಬರ ಪರಿಹಾರ ಹಣ ನೀಡುತ್ತಿಲ್ಲವೆಂದು ಕರ್ನಾಟಕ ಸರ್ಕಾರ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿತ್ತು.. ವಿಚಾರಣೆ ನಡೆಸಿದ್ದ ಸುಪ್ರಿಂ ಕೋರ್ಟ್‌ ಆದಷ್ಟು ಬೇಗನೆ ತೀರ್ಮಾನ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿ 15 ದಿನಗಳ ಕಾಲಾವಕಾಶ ಕೊಟ್ಟಿತ್ತು. ಈಗ ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್‌ಗೆ ಶೀಘ್ರ ಬರಪರಿಹಾರ ಬಿಡುಗಡೆಯ ವಾಗ್ದಾನ ನೀಡುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಇದು ತಮ್ಮ ಸರ್ಕಾರದ ಪ್ರಯತ್ನದ ಫಲ ಎಂದಿದ್ದಾರೆ.. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿದ್ದರಾಮಯ್ಯ, ಸುಪ್ರಿಂ ಕೋರ್ಟ್‌ಗೆ ಧನ್ಯವಾದ ಸಮರ್ಪಿಸಿದ್ದಲ್ಲದೆ, ತಮ್ಮ ಸರ್ಕಾರ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಅನಿವಾರ್ಯವಾಗಿ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿದೆ ಎಂದಿದ್ದಾರೆ..

ಅಕ್ರಮ ಹಣ ಸಾಗಾಟ – 2 ಕೋಟಿ ರೂಪಾಯಿ ಬಿಜೆಪಿದ್ದಾ?  

ಬೆಂಗಳೂರಿನ ಕಾಟನ್‌ ಪೇಟೆಯಲ್ಲಿ ಭಾನುವಾರ ಸಂಜೆ ಸೀಜ್‌ ಮಾಡಿಕೊಂಡಿರುವ 2 ಕೋಟಿ ರುಪಾಯಿ ನಗದು ಬಿಜೆಪಿಗೆ ಸೇರಿದ್ದು ಎಂಬ ಆರೋಪ ಕೇಳಿಬಂದಿದೆ. ಹಣ ಸಾಗಿಸುತ್ತಿದ್ದ ವೆಂಕಟೇಶ್‌ ಪ್ರಸಾದ್‌ ಹಾಗೂ ಗಂಗಾಧರ್‌ ಅವರನ್ನು ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇದು ಬಿಜೆಪಿಗೆ ಸೇರಿದ ಹಣ ಎಂದು ಆರೋಪಿಗಳು ಹೇಳಿದ್ದು, ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದು ಸಾಗಿಸುತ್ತಿದ್ದರು.. ಮೈಸೂರು-ಕೊಡಗು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೂತ್‌ ಕಾರ್ಯಕರ್ತರಿಗೆ ನೀಡಲು ಹಣ ಸಾಗಿಸಲಾಗುತ್ತಿತ್ತು ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

Shwetha M

Leave a Reply

Your email address will not be published. Required fields are marked *