ಮನೆ ಮೇಲೆ ಕಲ್ಲು ತೂರಾಟದಿಂದ ನೋವಾಗಿದೆ – ಬಂಜಾರ ಸಮುದಾಯದ ಬಗ್ಗೆ ಬಿಎಸ್ ವೈ ಹೇಳಿದ್ದೇನು?

ಮನೆ ಮೇಲೆ ಕಲ್ಲು ತೂರಾಟದಿಂದ ನೋವಾಗಿದೆ – ಬಂಜಾರ ಸಮುದಾಯದ ಬಗ್ಗೆ ಬಿಎಸ್ ವೈ ಹೇಳಿದ್ದೇನು?

ಒಳಮೀಸಲಾತಿ ವಿಚಾರವಾಗಿ ಶಿಕಾರಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸುದ್ದಿಗೋಷ್ಟಿ ನಡೆಸಿದ್ದಾರೆ.

ಕಲ್ಲು ತೂರಾಟ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಎಸ್ ವೈ, ಏಕಾಏಕಿ ಕಲ್ಲು ತೂರಾಟದಿಂದ ನನಗೆ ನೋವಾಗಿದೆ. ತಾಂಡಾ ಅಭಿವೃದ್ಧಿ ನಿಗಮವನ್ನು ನಾನು ಮಾಡಿದ್ದೇನೆ. ತಪ್ಪು ಗ್ರಹಿಕೆಯಿಂದ ಇಂತಹ ಘಟನೆ ನಡೆದಿದೆ ಅಂತಾ ಭಾವಿಸಿದ್ದೇನೆ. ಬಂಜಾರ ಸಮುದಾಯದ (Banjara community) ಹಿರಿಯರನ್ನು ಕರೆದು ಮಾತನಾಡುತ್ತೇನೆ. ನಾನು ಮತ್ತು ವಿಜಯೇಂದ್ರ ಇಬ್ಬರೂ ಬಂಜಾರ ಸಮುದಾಯದ ಸಮಸ್ಯೆಗಳ ಚರ್ಚೆಗೆ ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಸಮಾಜಘಾತುಕ ಶಕ್ತಿಗಳ ಮಾತು ಕೇಳಬೇಡಿ. ನಿಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. 4 ಬಾರಿ ಸಿಎಂ ಆಗಲು ಬಂಜಾರ ಸಮುದಾಯದವರು ಸಹಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಅಹಿತಕರ ಘಟನೆಗೆ ಅವಕಾಶ ನಿಡಬೇಡಿ. ಬಂಜಾರ ಸಮುದಾಯದವರು ಶಾಂತ ರೀತಿಯಿಂದ ವರ್ತಿಸಬೇಕು. ನಾಳೆ ಅಥವಾ ನಾಡಿದ್ದು ಶಿವಮೊಗ್ಗಕ್ಕೆ ಹೋಗಿ ಘಟನೆಗೆ ಕಾರಣ ಏನೂ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಿಎಸ್ ವೈ ಮನೆಗೆ ಕಲ್ಲೇಟು.. ಪೊಲೀಸರಿಂದ ಲಾಠಿ ಚಾರ್ಜ್ – ಒಳಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಕೊತಕೊತ!

ಗಲಾಟೆ ಹಿಂದೆ ಯಾರದ್ದಾದರೂ ಪಿತೂರಿ ಇದೆಯೇ ಎಂಬ ಪ್ರಶ್ನೆಯನ್ನ ತಳ್ಳಿಹಾಕಿರುವ ಬಿಎಸ್​ವೈ, ಯಾರ ಮೇಲೂ ಸದ್ಯಕ್ಕೆ ದೂರುವುದು ಸರಿ ಅನ್ನಿಸುವುದಿಲ್ಲ. ನನ್ನನ್ನು ಟಾರ್ಗೆಟ್​​ ಮಾಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಡಿಸಿ, ಎಸ್​​ಪಿ ಜೊತೆಗೆ ಕರೆ ಮಾಡಿ ಮಾತನಾಡಿದ್ದೇನೆ. ಯಾರನ್ನೂ ಬಂಧಿಸದಂತೆ ಕಠಿಣ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದೇನೆ. ಬಿಜೆಪಿಯವರೇ ಮಾಡಿಸಿದ್ದಾರೆಂದು ಸುರ್ಜೇವಾಲಾ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಲ್ಲು ತೂರಾಟದಲ್ಲಿ ಯಾರದ್ದೂ ಕೈವಾಡವಿಲ್ಲವೆಂದು ಭಾವಿಸಿದ್ದೇನೆ ಎಂದರು.

ಸಿಎಂ ಬಸವರಾಯ ಬೊಮ್ಮಾಯಿ, ಸಚಿವ ಅಶ್ವತ್ಥ್ ನಾರಾಯಣ್ ಸೇರಿದಂತೆ ಬಿಜೆಪಿಯ ಕೆಲ ನಾಯಕರು ಈ ಗಲಾಟೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

suddiyaana