ಬಿಜೆಪಿ ‘ಶ್ವೇತ ಪತ್ರ’ ದ ವಿರುದ್ಧ ‘ಕರಾಳ ಪತ್ರʼ ಪೋಸ್ಟರ್‌ ರಿಲೀಸ್‌ ಮಾಡಿದ ಕಾಂಗ್ರೆಸ್!

ಬಿಜೆಪಿ ‘ಶ್ವೇತ ಪತ್ರ’ ದ ವಿರುದ್ಧ ‘ಕರಾಳ ಪತ್ರʼ ಪೋಸ್ಟರ್‌ ರಿಲೀಸ್‌ ಮಾಡಿದ ಕಾಂಗ್ರೆಸ್!

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌, ಬಿಜೆಪಿ ಜಿದ್ದಾಜಿದ್ದಿ ಜೋರಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ದೋಷಾರೋಪಗಳನ್ನು ಮಾಡುತ್ತಲೇ ಇದೆ. ಇದೀಗ ಕೇಂದ್ರ ಸರ್ಕಾರ ಶ್ವೇತ ಪತ್ರ ಬಿಡುಗಡೆ ಮಾಡುವ ಮೊದಲೇ ಕಾಂಗ್ರೆಸ್‌ ಕರಾಳ ಪತ್ರದ ಪೋಸ್ಟರ್‌ ರಿಲೀಸ್‌ ಮಾಡಿದೆ.

ಹೌದು,  ಬಿಜೆಪಿ ನೇತೃತ್ವದ ಕೇಂದ್ರದ ‘ಶ್ವೇತ ಪತ್ರ’ಕ್ಕೆ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಸರ್ಕಾರದ ಮೇಲೆ ‘ಕರಾಳ ಪತ್ರ’ದ ಪೋಸ್ಟರ್‌ ಅನ್ನು ಕಾಂಗ್ರೆಸ್ ರಿಲೀಸ್‌ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ.

ಇದನ್ನೂ ಓದಿ: ಗರ್ಭಕಂಠದ ಕ್ಯಾನ್ಸರ್ ಜಾಗೃತಿಗೆ ಪೂನಂ ಪಾಂಡೆ ರಾಯಭಾರಿಯಾಗ್ತಾರಾ? – ಆರೋಗ್ಯ ಸಚಿವಾಲಯ ಹೇಳಿದ್ದೇನು?

ಪೋಸ್ಟರ್‌ ರಿಲೀಸ್‌ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಎಲ್ಲಿ ಬಿಜೆಪಿ ಸರ್ಕಾರ ಇಲ್ಲವೋ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ. ನೆಹರು ಕಾಲದಲ್ಲಿ ನಿರ್ಮಾಣವಾದ ಸಂಸ್ಥೆಯಿಂದ ಜನರಿಗೆ ಉದ್ಯೋಗ ಸಿಗುತ್ತಿದೆ. ಮೋದಿ ಸರ್ಕಾರದಲ್ಲಿ ಸ್ಥಾಪನೆಯಾದ ಸಂಸ್ಥೆಗಳು ಅಥವಾ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಲೆ ಏರಿಕೆ ಅತಿದೊಡ್ಡ ಸಮಸ್ಯೆಯಾಗಿದೆ. ಅಗತ್ಯ ವಸ್ತುಗಳ ಮೇಲೆ ಬೆಲೆ ನಿಯಂತ್ರಣ ಮಾಡಬೇಕು ಎಂಬ ಕಾನೂನು ಇದೆ. ಆದರೆ ಸರ್ಕಾರದ ಕೆಲವು ಜನರು ಉದ್ದೇಶ ಪೂರ್ವಕವಾಗಿ ಬೆಲೆ ಏರಿಸುತ್ತಿದ್ದಾರೆ. ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ ಎಂದು ಹೇಳಿ ಕೃಷಿ ಕಾಯ್ದೆ ತಂದರು. ಒಂದು ವರ್ಷ ರೈತರ ಪ್ರತಿಭಟನೆಯ ನಂತರ ಮೂರು ಕಾನೂನು ವಾಪಸ್ ಪಡೆದರು. ಕೃಷಿ ಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಹಾಕಲಾಗಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡಬೇಕಿತ್ತು ನೀಡಿಲ್ಲ. ನೆಹರು, ಇಂದಿರಾ ಗಾಂಧಿ ಕಾಲಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಹೇಳಬೇಕು. ಅದನ್ನು ಬಿಟ್ಟು ಬರೀ ಹೋಲಿಕೆ ಮಾಡುತ್ತಿದ್ದೀರಿ ಎಂದು ಕೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಇದು ಎಲ್ಲಾ ಸರ್ಕಾರದಲ್ಲೂ ಆಗುತ್ತದೆ. ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಲಾಗುತ್ತಿದೆ. ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಚುನಾವಣೆ ಬಾಂಡ್‌ಗಳ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಇಡಿ, ಸಿಬಿಐ ಬಿಟ್ಟು ಹೆದರಿಸಲಾಗುತ್ತಿದೆ, ಒತ್ತಡ ಹೇರಲಾಗುತ್ತಿದೆ.  ಮೊದಲು ಯಾಕೆ ಇಷ್ಟು ಪ್ರಮಾಣದ ಹಣ ಬರುತ್ತಿರಲಿಲ್ಲ? ಈಗ ಯಾಕೆ ಹಣ ಹೆಚ್ಚು ಬಿಜೆಪಿಗೆ ಬರುತ್ತಿದೆ? ಕೋಟ್ಯಂತರ ರೂ. ಹಣ ನೀಡಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ನನ್ನ ವಿರುದ್ಧವೂ ದೂರು ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ನನಗೂ ಅವಹೇಳನ ಮಾಡುವುದು, ಬೆದರಿಸುವ ಪ್ರಯತ್ನ ನಡೆಯುತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನಾನು ನನ್ನ ಅಪ್ಪ ಇಬ್ಬರೇ ಬದುಕಿದ್ದು, ಇಲ್ಲಿಯವರೆಗೂ ಬಂದಿದ್ದೇನೆ, ಏನೇ ಆದರೂ ಹೆದರುವುದಿಲ್ಲ. ದಲಿತನಾಗಿ ಇಲ್ಲಿಯವರೆಗೂ ಬಂದಿದ್ದೇನೆ, ನನ್ನ ಗೌರವದಿಂದ ಕಾಣುತ್ತಾರೆ. ರಾಹುಲ್ ಗಾಂಧಿ, ಸೋನಿಯಗಾಂಧಿ, ಪ್ರಿಯಾಂಕಾ ಗಾಂಧಿ ಎಲ್ಲರನ್ನು ಅವಹೇಳನ ಮಾಡುತ್ತಾರೆ. ಪ್ರಧಾನಮಂತ್ರಿ ಹುದ್ದೆಗೆ ಒಂದು ಗೌರವವಿದೆ. ನಮ್ಮ ಸಾಧನೆಗಳನ್ನು ಹೇಳಬೇಕು, ವಿರೋಧ ಪಕ್ಷದ ನಾಯಕರನ್ನು ಅವಹೇಳನ ಮಾಡಬಾರದು ಎಂದಿದ್ದಾರೆ.

ತೆರಿಗೆ ಅನ್ಯಾಯದ ಇವರದೇ ಪಕ್ಷದವರು ಮಾತನಾಡಿದರೆ ಅದು ದೇಶ ಒಡೆಯುವ ಮಾತಲ್ಲ. ಇದೇ ಮಾತು ಬೇರೆ ನಾಯಕರು ಹೇಳಿದರೆ ದೇಶ ಒಡೆಯುವ ಮಾತು. ಮುಖ್ಯಮಂತ್ರಿಯಾಗಿದ್ದಾಗ ದೇಶ ಒಡೆದವರು ಯಾರು? ದೇಶ ಒಡೆಯುವ ಭಾಷಣ ಮಾಡುವುದು ಯಾರು? ರಾಜ್ಯಪಾಲರನ್ನು ಸರ್ವಾಧಿಕಾರಿಯಂತೆ ವರ್ತಿಸಲು ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಫೈಲ್‌ಗಳನ್ನು ಕ್ಲಿಯರ್ ಮಾಡದೇ ಕಿರುಕುಳ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಉಚಿತ ರೇಷನ್ ನೀಡುವುದಾಗಿ ಹೇಳುತ್ತಾರೆ. ಆದರೆ ಆ ಕಾನೂನು ಮಾಡಿದ್ದು ಕಾಂಗ್ರೆಸ್ ಎಂದು ಹೇಳಿದ್ದಾರೆ.

Shwetha M