ಯದುವೀರ ಒಡೆಯರ್‌ಗೆ ಬಿಜೆಪಿ ಟಿಕೆಟ್ – ಸೋಶಿಯಲ್ ಮೀಡಿಯಾದಲ್ಲಿ ರೊಚ್ಚಿಗೆದ್ದ ಪ್ರತಾಪ್ ಸಿಂಹ ಬೆಂಬಲಿಗರು

ಯದುವೀರ ಒಡೆಯರ್‌ಗೆ ಬಿಜೆಪಿ ಟಿಕೆಟ್  – ಸೋಶಿಯಲ್ ಮೀಡಿಯಾದಲ್ಲಿ ರೊಚ್ಚಿಗೆದ್ದ ಪ್ರತಾಪ್ ಸಿಂಹ ಬೆಂಬಲಿಗರು

ಮೈಸೂರು ಕೊಡಗು ಹಾಲಿ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಮಿಸ್ ಆಗಿದ್ದು, ಮೈಸೂರು ಬಿಜೆಪಿಯಲ್ಲಿ ಕೋಲಾಹಲ ಉಂಟಾಗಿದೆ. ಪ್ರತಾಪ್ ಸಿಂಹಗೇ ಮತ್ತೆ ಬಿಜೆಪಿ ಟಿಕೆಟ್ ನೀಡುವಂತೆ ಕಾರ್ಯಕರ್ತರು, ಬೆಂಬಲಿಗರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ದೇಶಕ್ಕೆ ಮೋದಿ, ಮೈಸೂರಿಗೆ ಪ್ರತಾಪ್ ಸಿಂಹ ಎಂದು ಘೋಷಣೆ ಕೂಗಿದ ಅಭಿಮಾನಿಗಳು ಪ್ರತಾಪ್ ಅವರು ಪೋಸ್ಟರ್ ಅಭಿಯಾನ ನಡೆಸಿದ್ದಾರೆ. ಪ್ರತಾಪ್ ಸಿಂಹ ಅವರು ಅತ್ಯುತ್ತಮ ಕೆಲಸಗಾರರಾಗಿದ್ದು ರಾಜ್ಯದಲ್ಲಿ ನಂಬರ್ ಒನ್ ಸಂಸದರಾಗಿದ್ದಾರೆ. ಕಳೆದ 70 ವರ್ಷಗಳಲ್ಲಿ ಯಾರೂ ಮಾಡದಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೇ ಟಿಕೆಟ್ ನೀಡುವಂತೆ ಒತ್ತಾಯಿಸಿದ್ರು. ಹಾಗೇ ಪೋಸ್ಟರ್​ಗಳ ಮೂಲಕ ಬಿಜೆಪಿಗೆ ಹಲವು ಪ್ರಶ್ನೆಗಳಲ್ಲೂ ಕೇಳಿದ್ದಾರೆ.

ಇದನ್ನೂ ಓದಿ:ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುತ್ತಾ? – ಸಿಂಹ ಮಾಡಿರುವ ಮೂರು ತಪ್ಪುಗಳು ಇದಕ್ಕೆ ಕಾರಣನಾ..!

ಹಾಲಿ ಸಂಸದ ಪ್ರತಾಪ್ ಸಿಂಹ ಪರ ಘೋಷಣೆ ಕೂಗಿದ ಬೆಂಬಲಿಗರು ವಿವಿಧ ಪೋಸ್ಟರ್ ಗಳನ್ನು ಪ್ರದರ್ಶಿಸಿದ್ದಾರೆ. ಬಡವರ ಮನೆ ಮಕ್ಕಳು ಬಳೆಯಬಾರದೇ? ರಾಜಕೀಯದಲ್ಲಿ ಒಳ್ಳೆಯವರಿಗೆ ಬೆಲೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಿದ್ದಕ್ಕಾಗಿ ಟಿಕೆಟ್ ಇಲ್ವಾ? ಅಥವಾ ಬೆಂಗಳೂರು- ಮೈಸೂರು ಎಕ್ಸೆ ಪ್ರೆಸ್ ಹೈವೇ ಮಾಡಿದ್ದಕ್ಕಾಗಿ ಟಿಕೆಟ್ ಇಲ್ವಾ?.. ಕಾಂಗ್ರೆಸ್ ಗೆ ಠಕ್ಕರ್ ಕೊಟ್ಟಿದ್ದಾಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಲು ಮೀನಾಮೇಷವೇ? ಎಂದು ಕಿಡಿ ಕಾರಿದ್ದಾರೆ. ಹಾಗೂ ಅಭಿವೃದ್ಧಿಯಲ್ಲಿ ನಂಬರ್ 1 ಸಂಸದ ಪ್ರತಾಪ್ ಸಿಂಹ. ಅವರಿಗೆ ಟಿಕೆಟ್ ಕೊಡದಿದ್ದರೆ ಯುವಕರಿಗೆ ಯಾವ ಸಂದೇಶ ಕೊಡಲು ಹೊರಟಿದ್ದೀರಿ? ಎಂಬ ಬರಹಗಳನ್ನ ಹಿಡಿದು ಬೆಂಬಲಿಗರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಾಗೇ ಒಕ್ಕಲಿಗ ಎನ್ನುವ ಕಾರಣಕ್ಕೆ ಪ್ರತಾಪ್ ಸಿಂಹಗೆ ಟಿಕೆಟ್ ಕೊಡುವುದಿಲ್ಲವೇ? ರಾಜಕೀಯದಲ್ಲಿ ಒಳ್ಳೆಯರಿಗೆ ಬೆಲೆ ಇಲ್ಲವೇ? ಹಿಂದೂಗಳ ಪರ ಮಾತನಾಡಿದ್ದಕ್ಕೆ ಪ್ರತಾಪ್ ಸಿಂಹಗೆ ಟಿಕೆಟ್ ಇಲ್ಲವೇ ಎಂದು ಪ್ರಶ್ನಿಸುವ ಮೂಲಕ ಪೊಸ್ಟರ್ ಅಭಿಯಾನ ನಡೆಸಿದ್ದಾರೆ.  ಹತ್ತು ವರ್ಷಗಳಲ್ಲಿ 12 ಟ್ರೈನ್ ತಂದಿದ್ದಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಲು ಹಿಂದೇಟು ಹಾಕಲಾಗುತ್ತಿದ್ದೀರಾ? ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

ಅಷ್ಟಕ್ಕೂ ಇಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ನಿರಾಕರಿಸಿರೋದಕ್ಕೆ ಬಿಜೆಪಿ ಬಳಿ ಹಲವು ಕಾರಣಗಳಿವೆ. ಅದ್ರಲ್ಲೂ ಲೋಕಸಭೆ ಮೇಲೆ ನಡೆದ ದಾಳಿ ವೇಳೆ ಆರೋಪಿಗಳಿಗೆ ಟಿಕೆಟ್ ನೀಡಿದ್ದೇ ಪ್ರತಾಪ್ ಸಿಂಹ ಕಚೇರಿಯಿಂದ. ಇದು ಪ್ರತಾಪ್​ಗೆ ದೊಡ್ಡ ಹೊಡೆತ ಕೊಟ್ಟಿದೆ. ಅಲ್ಲದೆ ಬಿಜೆಪಿ ಈ ಬಾರಿ ಮೈಸೂರು ರಾಜಮನೆತನದ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮಣೆ ಹಾಕಿದೆ. ಆದ್ರೆ ಒಡೆಯರ್ ರಾಜಕೀಯಕ್ಕೆ ಬರೋದಕ್ಕೆ ಜನರಿಂದ ವಿರೋಧ ಕೂಡ ವ್ಯಕ್ತವಾಗುತ್ತಿದೆ.

ಯದುವೀರ್ ಒಡೆಯರ್ ಮೈಸೂರಿನ ಮಹಾರಾಜ ವಂಶಸ್ಥರು. ಪಕ್ಷಾತೀತವಾಗಿ ಜನ ಮತ್ತು ನಾಯಕರು ಒಡೆಯರ್ ಕುಟುಂಬವನ್ನ ಗೌರವಿಸುತ್ತಾರೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಭಾಗದ ಜನರಿಗೆ ಯದುವಂಶದ ಬಗ್ಗೆ ಅಪಾರ ಗೌರವವಿದೆ. ಹೀಗಾಗಿ ಒಡೆಯರ್ ಒಂದು ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ರೆ ಅವರ ಮೇಲಿರುವ ಪ್ರೀತಿ, ವಿಶ್ವಾಸ, ಗೌರವ ಕಡಿಮೆಯಾಗಲಿದೆ. ಹೀಗಾಗಿ ಜನ ಒಡೆಯರ್ ರಾಜಕೀಯ ಪ್ರವೇಶವನ್ನ ವಿರೋಧಿಸುತ್ತಿದ್ದಾರೆ. ಅಲ್ಲದೆ ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಗದೇ ಇರುವುದು ಬಿಜೆಪಿ ಪಾಲಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯೂ ಇದೆ. ಯಾಕಂದ್ರೆ ಪ್ರತಾಪ್ ಸಿಂಹ ಹಿಂದೂ ಫೈರ್ ಬ್ರ್ಯಾಂಡ್ ಅಂತಾನೇ ಕರೆಸಿಕೊಳ್ಳುವ ನಾಯಕ. ಈಗ ಪ್ರತಾಪ್ ಗೆ ಟಿಕೆಟ್ ಸಿಗದೇ ಇದ್ರೆ ಕ್ಷೇತ್ರದಲ್ಲಿ ಬಿಜೆಪಿಗೆ ಬಲ ಕಡಿಮೆಯಾಗಬಹುದು. ಇದ್ರ ಪರಿಣಾಮ ಒಡೆಯರ್ ಮೇಲೆ ಬೀರಬಹುದು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಯದುವೀರ್ ಸ್ಪರ್ಧೆಗೆ ವಿರೋಧ ವ್ಯಕ್ತವಾಗುತ್ತಿದೆ.

ಯದುವೀರ್​​ರನ್ನು ರಾಜಕೀಯಕ್ಕೆ ಕರೆ ತರುತ್ತಿರೋ ಬಿಜೆಪಿ ಪ್ಲ್ಯಾನ್ ಬೇರೆಯದ್ದೇ ಇದೆ. ಯದುವೀರ್‌ ಅವರನ್ನು ಕಮಲದ ಗುರುತಿನೊಂದಿಗೆ ಕಣಕ್ಕಿಳಿಸಿದರೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನದಲ್ಲಿ ಬಿಜೆಪಿಗೆ ದೊಡ್ಡ ಲಾಭ ಆಗಲಿದೆ ಎಂಬುದು ಬಿಜೆಪಿ ನಾಯಕರ ನಂಬಿಕೆ. ಏಕೆಂದರೆ ಹಳೇ ಮೈಸೂರು ಭಾಗದ ಜನರು ಒಡೆಯರ್‌ ರಾಜಮನೆತನದೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಮೈಸೂರು ಪ್ರದೇಶದಲ್ಲಿ ರಾಜಮನೆತನದವರನ್ನು ಚುನಾವಣೆ ಕಣಕ್ಕೆ ಇಳಿಸಿದರೆ ಯುವಕರು ಹಾಗೂ ವಿದ್ಯಾವಂತರನ್ನು ತನ್ನತ್ತ ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

 

Sulekha