ಬಜೆಟ್‌ನಲ್ಲಿ ಅಭಿವೃದ್ಧಿಗೆ ಬ್ರೇಕ್ ಹಾಕಿ, ರಾಜ್ಯದ ಭವಿಷ್ಯವನ್ನು ಅಡವಿಟ್ಟಿದ್ದಾರೆ – ಬಿ.ವೈ. ವಿಜಯೇಂದ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ದಿನಗಳವರೆಗೆ ಮುಖ್ಯಮಂತ್ರಿಯಾಗಿ ತಾವು ಪಡೆದ ಅನುಭವವನ್ನು ಸಂಪೂರ್ಣ ನೀರಿನಲ್ಲಿ ಹೋಮ ಮಾಡಿದ್ದಾರೆ. ಅವರು ಮಂಡಿಸಿರುವ 17ನೇ ಬಜೆಟ್ ಕರ್ನಾಟಕವನ್ನು ಅಭಿವೃದ್ಧಿಯ ಹಾದಿಯಿಂದ ಮತ್ತಷ್ಟು ದೂರಕ್ಕೆ ತಳ್ಳಿ, ‘ಸಾಲದ ಸುಳಿ’ ಗೆ ಸಿಲುಕಿಸುತ್ತಿರುವ ಕರಾಳ ಅಧ್ಯಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ.
ರಾಜ್ಯ ಬಜೆಟ್ 2026ರ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಜೆಟ್‌ನಲ್ಲಿ ಪಂಚ ಗ್ಯಾರಂಟಿಗಳಿಗೆ ಪ್ರತ್ಯೇಕ ಅನುದಾನ ನಿಗದಿ ಮಾಡದೆ ಆಯಾ ಇಲಾಖೆಗಳ ಅನುದಾನವನ್ನೇ ಕಡಿತ ಮಾಡಿ ಪಂಚ ಗ್ಯಾರಂಟಿಗೆ ಜೋಡಿಸಲಾಗಿದೆ. ಪರಿಣಾಮವಾಗಿ ಒಂದೆಡೆ ಆಯಾ ಇಲಾಖೆಗಳ ಅಭಿವೃದ್ಧಿ ಯೋಜನೆಗಳಿಗೆ ಪೆಟ್ಟು ಬೀಳುತ್ತದೆ. ಮತ್ತೊಂದೆಡೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅಭಿವೃದ್ಧಿಗಾಗಿ ಮೀಸಲಿರುವ ವಿಶೇಷ ಕಾಯ್ದೆಯ ಅನುದಾನವನ್ನು ಯಥೇಚ್ಛವಾಗಿ ಗ್ಯಾರಂಟಿಗೆ ಡೈವರ್ಟ್ ಮಾಡಲು ಸರ್ಕಾರ ತನ್ನ ಹುನ್ನಾರವನ್ನು ಮುಂದುವರಿಸಿದೆ. ಬಂಡವಾಳ ವೆಚ್ಚದಲ್ಲಿ ಅಲ್ಪ ಏರಿಕೆ ಮಾಡಿ, ಅಭಿವೃದ್ಧಿಗೆ ಬ್ರೇಕ್ ಹಾಕಿರುವ ಈ ಕಾಂಗ್ರೆಸ್ ಸರ್ಕಾರ, ರಾಜ್ಯದ ಭವಿಷ್ಯವನ್ನು ಅಡವಿಟ್ಟಿದೆ. ಸಾರ್ವಜನಿಕ ಸಾಲ ಒಟ್ಟು 8.24 ಲಕ್ಷ ಕೋಟಿ ರೂ.ಗೆ ಏರಿಸಿರುವುದು ಪ್ರತಿ ಕನ್ನಡಿಗನಿಗೆ ಈ ಕಾಂಗ್ರೆಸ್ ಸರ್ಕಾರ ನೀಡಿರುವ ‘ಉಡುಗೊರೆ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು! – ಈ ಸಲ ಡಾಗ್ ಸತೀಶ್ ಎಡವಟ್ಟೇನು?
ಸತತ ಮೂರನೇ ವರ್ಷವೂ ಈ ರಾಜ್ಯ ಕಾಂಗ್ರೆಸ್ ಸರ್ಕಾರವು ‘ರಾಜಸ್ವ ಕೊರತೆಯ’ ಬಜೆಟ್ ಮಂಡಿಸಿರುವುದು ಆರ್ಥಿಕ ದಿವಾಳಿತನದ ಸಂಕೇತ. 22,957 ಕೋಟಿ ರೂ. ಕೊರತೆಯನ್ನು ನೀಗಿಸಲು ಮತ್ತು ದೈನಂದಿನ ತುಪ್ಪ ತಿನ್ನಲು ಸಾಲ ಮಾಡುತ್ತಿರುವ ಈ ನಡೆ ಅಪಾಯಕಾರಿ. ಸಂಪತ್ತು ಸೃಜಿಸದ, ಕೇವಲ ಅನುಭೋಗಿ ವೆಚ್ಚಕ್ಕೆ 1.32 ಲಕ್ಷ ಕೋಟಿ ರೂ. ಹೊಸ ಸಾಲ ಮಾಡುವುದು ಮುಂದಿನ ಪೀಳಿಗೆಗೆ ಮಾಡುವ ದ್ರೋಹವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ 44,632 ಕೋಟಿ ರೂ ಮೀಸಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಈ ಸರ್ಕಾರ, ದಲಿತರ ಕಾಲೋನಿಗಳ ಅಭಿವೃದ್ಧಿಗೆ ಮತ್ತು ಮೂಲಸೌಕರ್ಯಕ್ಕೆ ನೀಡಿರುವುದು ಕೇವಲ 1,332 ಕೋಟಿ ರೂ. ಮಾತ್ರ. ಅಂದರೆ ಒಟ್ಟು ನಿಧಿಯ ಶೇ. 97ರಷ್ಟು ಹಣ ಬಡಾವಣೆಗಳ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ. ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಬಜೆಟ್ ಗಾತ್ರ ಹೆಚ್ಚಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಾಸ್ತವದಲ್ಲಿ ಆ ಹಣವನ್ನು ತಮ್ಮ ಗ್ಯಾರಂಟಿ ಸಾಲ ತೀರಿಸಲು ಬಳಸುತ್ತಿದ್ದಾರೆ. ಇದು ದಲಿತರಿಗೆ ನೀಡಿದ ‘ಭಾಗ್ಯ’ವಲ್ಲ, ಇದು ಅವರ ಭವಿಷ್ಯಕ್ಕೆ ಮಾಡಿರುವ ‘ದ್ರೋಹ’ ವಲ್ಲವೇ ಮುಖ್ಯಮಂತ್ರಿಗಳೇ? ಎಂದು ಕಿಡಿಕಾರಿದ್ದಾರೆ.

ನೋಡಿರಿ

