ಕಾಂಗ್ರೆಸ್‌ಗೆ ಅಧಿಕಾರ ನೀಡಿದ ತಪ್ಪಿಗೆ ರಾಜ್ಯದ ಜನರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ – ಬಿಜೆಪಿ ಕಿಡಿ

ಕಾಂಗ್ರೆಸ್‌ಗೆ ಅಧಿಕಾರ ನೀಡಿದ ತಪ್ಪಿಗೆ ರಾಜ್ಯದ ಜನರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ – ಬಿಜೆಪಿ ಕಿಡಿ

ಬೆಂಗಳೂರು: ಕಾಂಗ್ರೆಸ್‌ – ಬಿಜೆಪಿ ನಡುವಿನ ಟ್ವೀಟ್‌ ಸಮರ ಮುಂದುವರಿದಿದೆ. ಇದೀಗ ರಾಜ್ಯ ಬಿಜೆಪಿ, ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಆಂತರಿಕ ಭಿನ್ನಮತದ ಬಗ್ಗೆ ಟ್ವೀಟ್‌ ಮಾಡಿ ಕಿಡಿಕಾರಿದೆ. ಹೊರಗಡೆ ಕೈ – ಕೈ ಹಿಡಿದು ಫೋಟೋಗಳಿಗೆ ಫೋಸು ಕೊಡುವ ಕಾಂಗ್ರೆಸ್‌ ನಾಯಕರು ಒಳಗಡೆ ಪರಸ್ಪರ ಮುಖವನ್ನೂ ನೋಡಿಕೊಳ್ಳದ ಹಂತಕ್ಕೆ ತಲುಪಿದ್ದಾರೆ. ಇವರ ಕೈಗೆ ಅಧಿಕಾರ ನೀಡಿದ ತಪ್ಪಿಗೆ, ಕರ್ನಾಟಕದ ಮತದಾರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ರಾಜ್ಯದ ಅಭಿವೃದ್ಧಿ ಹಳ್ಳ ಹಿಡಿಯುತ್ತಿದೆ ಎಂದು ಕರ್ನಾಟಕ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಅವಾಸ್ತವಿಕ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಡಬಲ್ ಸ್ಟೇರಿಂಗ್ ಸರ್ಕಾರ, ಅಧಿಕಾರ ಹಿಡಿದ ದಿನದಿಂದಲೂ, ಒಳಜಗಳದಲ್ಲಿ ನಿರತವಾಗಿ, ರಾಜ್ಯದ ಆಡಳಿತ ಚಕ್ರವನ್ನು ಗೊಂದಲದ ಗೂಡನ್ನಾಗಿಸಿದೆ ಎಂದು ಕಿಡಿಕಾರಿದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಯಮ ಉಲ್ಲಂಘಿಸಿದರೆ ಫಾಸ್ಟ್‌ಟ್ಯಾಗ್‌ ಮೂಲಕವೇ ದಂಡ

ಸಂಪೂರ್ಣ ಬಹುಮತ ಬಂದರೂ ಮುಖ್ಯಮಂತ್ರಿಯ ಆಯ್ಕೆಗೆ ಹೈಡ್ರಾಮಾ ನಡೆಸುವ ಮೂಲಕ ಆರಂಭಗೊಂಡ ಕಾಂಗ್ರೆಸ್‌ನ ಈ ಗೋಳಿನ ಧಾರಾವಾಹಿ ಇನ್ನೂ ನಿಂತಿಲ್ಲ. ಸಿಎಂ ಮತ್ತು ಡಿಸಿಎಂ ಜೊತೆಗೆ ಪ್ರಮಾಣವಚನ ಸ್ವೀಕರಿಸುವ ಸಚಿವರುಗಳು ಯಾರು ಎಂಬುದಕ್ಕೆ ಸಹ ಪುನಃ ತೂ ತೂ ಮೈ ಮೈ ನಡೆಸಿಕೊಂಡು, ನೀ ಕೊಡೆ, ನಾ ಬಿಡೆ ಎಂಬಂತೆ ಪ್ರಮಾಣವಚನ ಸಂದರ್ಭ ‌ಸಹ ಗೊಂದಲದಲ್ಲಿಯೇ ನಡೆದು ಹೋಯಿತು ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಮಂತ್ರಿಮಂಡಲ ರಚನೆ ಸಂದರ್ಭದಲ್ಲಿಯೂ ಸಹ ಡಿಕೆ ಶಿವಕುಮಾರ್ ಬಣದ ಹಿಂದುಳಿದ ವರ್ಗದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಶಾಸಕರಲ್ಲದ ಎನ್‌ಎಸ್ ಬೋಸರಾಜುಗೆ ಮಂತ್ರಿ ಪಟ್ಟ ಕಟ್ಟಿ, ಡಿಕೆ ಶಿವಕುಮಾರ್ ಅವರ ಆಪ್ತರು ಸಚಿವ ಸಂಪುಟದಲ್ಲಿ ಇರದಂತೆ ಮಾಡಿದರು ಎಂದು ಬಿಜೆಪಿ ಕಿಡಿಕಾರಿದರು.

ಸ್ಪೀಕರ್ ಆಯ್ಕೆಯಲ್ಲಿಯೂ ಗೊಂದಲಮಯ ವಾತಾವರಣವನ್ನು ನಿರ್ಮಿಸಿ, ಅಲ್ಲಿಯೂ ಸಹ ಬಣಗಳ ಮೇಲಾಟ ನಿರ್ಮಾಣವಾಯಿತು. ಅದರ ಬಳಿಕ ಸಚಿವ ಎಂಬಿ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷದ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳಿಕೆ ನೀಡಿದರು ಎಂಬ ಕಾರಣಕ್ಕೆ, ವಿಧಾನಸೌಧ ಎಂಬುದನ್ನು ಸಹ ನೋಡದೇ, ಡಿಕೆ ಶಿವಕುಮಾರ್‌ ಬಣ ಹಾಗೂ ಸಿದ್ದರಾಮಯ್ಯ ಬಣ ಪರಸ್ಪರ ನಿಂದಿಸಿಕೊಂಡು, ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ ಎಂಬುದನ್ನು ರಾಜ್ಯಕ್ಕೆ ತೋರಿತ್ತು ಎಂದು ಕಿಡಿಕಾರಿದೆ.

ಆ ನಂತರ ಸರ್ಕಾರ ಆರಂಭಿಸಿದ ವರ್ಗಾವಣೆ ದಂಧೆಯಲ್ಲಿ ಶ್ಯಾಡೋ ಸಿಎಂ ಯತೀಂದ್ರ ಸಿದ್ದರಾಮಯ್ಯ ಅವರ ಹಸ್ತಕ್ಷೇಪದಿಂದ, ಡಿಸಿಎಂ ಸೇರಿದಂತೆ ಸಚಿವರು ಸಿಎಂ ವಿರುದ್ಧ ತಿರುಗಿಬಿದ್ದು ಅಸಮಾಧಾನ ತೋರಿದ್ದರು. ಸರ್ಕಾರಕ್ಕೆ ಎರಡು ತಿಂಗಳು ತುಂಬುವ ಒಳಗೆ ಸಚಿವರ ದುರ್ವರ್ತನೆ ವಿರುದ್ಧ ಶಾಸಕರೇ ಸಿಎಂಗೆ ಪತ್ರ ಬರೆದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗದ ಬಿಕೆ ಹರಿಪ್ರಸಾದ್, ನನಗೆ ಸಿಎಂ ಮಾಡುವುದು ಗೊತ್ತು, ಇಳಿಸುವುದೂ ಗೊತ್ತು ಎಂದು ಹರಿಹಾಯ್ದಿದ್ದಾರೆ ಎಂದಿರುವ ಬಿಜೆಪಿ ಕಾಂಗ್ರೆಸ್‌ಗೆ ಟಾಂಗ್‌ ನೀಡಿದೆ.

suddiyaana