ಬಜೆಟ್ ಅಲ್ಲ..  ಇದು ಕರ್ನಾಟಕ ಜನತೆಯ ಕಿವಿ ಮೇಲೆ ಹೂವಿನ ತೋಟ – ಸಿದ್ಧರಾಮಯ್ಯ ಬಜೆಟ್ ಬಗ್ಗೆ ಬಿಜೆಪಿ ವ್ಯಂಗ್ಯ

ಬಜೆಟ್ ಅಲ್ಲ..  ಇದು ಕರ್ನಾಟಕ ಜನತೆಯ ಕಿವಿ ಮೇಲೆ ಹೂವಿನ ತೋಟ – ಸಿದ್ಧರಾಮಯ್ಯ ಬಜೆಟ್ ಬಗ್ಗೆ ಬಿಜೆಪಿ ವ್ಯಂಗ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ್ದಾರೆ. 15ನೇ ಬಾರಿಗೆ ದಾಖಲೆಯ ಬಜೆಟ್ ಅನ್ನು ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಿದ್ದಾರೆ. ಈ ಬಜೆಟ್‌ ಮಂಡನೆ ಬಗ್ಗೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ. ಮುಖ್ಯಮಂತ್ರಿಗಳು ರಾಜ್ಯದ ಜನರನ್ನು ಸಾಲದ ಹೊರೆಗೆ ದೂಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ರಾಜ್ಯದ 10 ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್, ರೋಪ್​ ವೇ ಸೌಲಭ್ಯ –  ಬೆಂಗಳೂರು To ತುಮಕೂರು ನಮ್ಮ ಮೆಟ್ರೋ ರೈಲು

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಇದು ಬಜೆಟ್ ಅಲ್ಲ – ಇದು ಕರ್ನಾಟಕ ಜನತೆಯ ಕಿವಿ ಮೇಲೆ ಹೂವಿನ ತೋಟ ಎಂದು ವ್ಯಂಗ್ಯಚಿತ್ರವೊಂದರ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ʼಸಾಲ- ಶೂಲದ ಹರಿಕಾರ ಸಾಲರಾಮಯ್ಯ. ಸಾಲವೇ ಎಲ್ಲದಕ್ಕೂ ವಾಮಮಾರ್ಗ ಎಂದುಕೊಂಡಿರುವ ಈ ಶತಮಾನದ ನಕಲಿ ಅರ್ಥ ಶಾಸ್ತ್ರಜ್ಞ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಸಾಲ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ. ಅಧಿಕಾರಕ್ಕೆ ಬಂದು ಕೇವಲ 9 ತಿಂಗಳಲ್ಲಿ 1,93,246 ಕೋಟಿ ರೂಪಾಯಿ ಸಾಲ‌ ಮಾಡಿದ್ದಾರೆ. ಅಂದರೆ ಪ್ರತಿಯೊಬ್ಬ ಕನ್ನಡಿಗನ ತಲೆ ಮೇಲೆ 28 ಸಾವಿರ ರೂಪಾಯಿ ಸಾಲ ಹೇರಿದ್ದಾರೆ ಎಂದು ಬಿಜೆಪಿ ಉಲ್ಲೇಖಿಸಿದೆ.

‘ಸಾಲರಾಮಯ್ಯನವರು ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ಲಕ್ಷಾಂತರ ಕೋಟಿ ಸಾಲ ಮಾಡಿ ಕನ್ನಡಿಗರನ್ನು ಸಂಪೂರ್ಣವಾಗಿ ಮುಳುಗಿಸಿದ್ದಾರೆ. ಸಾಲದ ಸುಳಿಗೆ ಕರುನಾಡು ಸಿಲುಕಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಬಿದ್ದಿದೆ. ಆರ್ಥಿಕತೆ ಹಳ್ಳ ಹಿಡಿದಿದೆ’ ಎಂದು ಬಿಜೆಪಿ ಕಿಡಿಕಾರಿದೆ.

ಇನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಬಜೆಟ್ ಬಗ್ಗೆ ಟೀಕೆ ಮಾಡಿದ್ದು, ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಒಂದು ರೈತ ವಿರೋಧಿ ಬಜೆಟ್ ಆಗಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ಶೂನ್ಯ ಬಜೆಟ್. ಕರ್ನಾಟಕ ರಾಜ್ಯವನ್ನು ಈ ಬಜೆಟ್ 20 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದೆ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಸಿದ್ದರಾಮಯ್ಯ ಬಜೆಟ್​​ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shwetha M