ಸೌಜನ್ಯಗೆ ನ್ಯಾಯ ಮಾತಿಗಷ್ಟೇ ಸೀಮಿತನಾ? – ಕುಸುಮಾವತಿಗೆ ಬಿಜೆಪಿ ಬೆಂಬಲ ನಿಜನಾ?
ಪ್ರಶ್ನೆಗಳ ನೆಪದಲ್ಲೇ ಸರ್ಕಾರ ಸೈಲೆಂಟ್?

ದಶಕದಿಂದಲೂ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಹೋರಾಟಗಳು ನಡೆಯುತ್ತಲೇ ಇದೆ. ಆದ್ರೆ ಸರ್ಕಾರಗಳು ಬದಲಾದ್ರೂ ಪ್ರಕರಣಕ್ಕೆ ಮಾತ್ರ ಅಂತ್ಯ ಸಿಕ್ಕಿಲ್ಲ. ನಿಜವಾದ ಅಪರಾಧಿಗಳೂ ಪತ್ತೆಯಾಗಿಲ್ಲ. ಇದೆಲ್ಲದ್ರ ನಡುವೆ ಇತ್ತೀಚೆಗೆ ಧರ್ಮಸ್ಥಳದಲ್ಲಿ ಮಾಸ್ ಫ್ಯುನರಲ್ ಆರೋಪದ ಸತ್ಯಾಸತ್ಯತೆಗಾಗಿ ಸರ್ಕಾರ ಎಸ್ಐಟಿ ಟೀಂ ಫಾರ್ಮ್ ಮಾಡಿತ್ತು. ಆಗ್ಲೇ ಸೌಜನ್ಯ ಪ್ರಕರಣ ಕೂಡ ಮುನ್ನಲೆಗೆ ಬರುತ್ತಾ ಅನ್ನೋ ಬಗ್ಗೆ ಪ್ರಶ್ನೆಗಳು ಎದ್ದಿದ್ವು. ಇದ್ರ ನಡುವೆ ಸೌಜನ್ಯ ತಾಯಿ ಒಂದು ಕಂಪ್ಲೇಂಟ್ ಕೊಡ್ತಾರೆ. ಅದೇನಂದ್ರೆ ನೂರಾರು ಮೃತದೇಹಗಳನ್ನ ಹೂತಿದ್ದೇನೆ ಅಂತಾ ಸ್ಫೋಟಕ ಹೇಳಿಕೆ ನೀಡಿದ್ದ ಚಿನ್ನಯ್ಯ ಯೂಟ್ಯೂಬ್ಗಳಿಗೆ ಇಂಟರ್ವ್ಯೂ ಕೊಟ್ಟಾಗ ಒಂದು ಅಂಶವನ್ನ ಉಲ್ಲೇಖ ಮಾಡಿದ್ರು. ಸೌಜನ್ಯಳ ಡೆಡ್ಬಾಯಿಯನ್ನು ನಾನು ನೋಡಿದ್ದೇನೆ. ಬಾಡಿ ಡಿಸ್ಪೋಸ್ ಮಾಡಿರೋ ಬಗ್ಗೆ ರವಿ ಪೂಜಾರಿ ನನ್ನ ಬಳಿ ಹೇಳಿದ್ದ ಅಂತಾ ಮಾಹಿತಿ ನೀಡಿದ್ರು. ಇದನ್ನೇ ಆದರಿಸಿ ಸೌಜನ್ಯ ತಾಯಿ ಕುಸುಮಾವತಿ ಕಂಪ್ಲೇಂಟ್ ದಾಖಲು ಮಾಡಿದ್ರು. ಅದೇನಂದ್ರೆ ಚಿನ್ನಯ್ಯರನ್ನು ಬ್ರೈನ್ ಮ್ಯಾಪಿಂಗ್ ಅಂದ್ರೆ ಮಂಪರು ಪರೀಕ್ಷೆಗೆ ಒಳಪಡಿಸ್ಬೇಕು. ಹಾಗೇ ಸತ್ಯವನ್ನ ಬಯಲಿಗೆಳೆದು ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸ್ಬೇಕು ಅಂತಾ ಮನವಿ ಮಾಡಿದ್ರು. ಹೀಗಿರುವಾಗ್ಲೇ ಉದಯ್ ಜೈನ್ ಎಸ್ಐಟಿ ಕಚೇರಿಗೆ ಹಾಜರ್ ಆಗಿದ್ದಾರೆ.
ಇದನ್ನೂ ಓದಿ : ಲಂಡನ್ ನಲ್ಲೇ ಕೊಹ್ಲಿ ಫಿಟ್ ನೆಸ್ ಪರೀಕ್ಷೆ ಪಾಸ್ – ವಿರಾಟ್ ಗೆ ಮಾತ್ರವೇ ಯಾಕೆ ಬಿಸಿಸಿಐ ಸ್ಪೆಷಲ್ ಪರ್ಮಿಷನ್?
ಅಷ್ಟಕ್ಕೂ ಇಲ್ಲಿ ಉದಯ್ ಜೈನ್ ರನ್ನು ಬುಲಾವ್ ಕೊಟ್ಟು ತನಿಖೆಗೆ ಕರೆದಿದ್ದೇ ಎಸ್ಐಟಿ. ವಿಷ್ಯ ಏನಪ್ಪ ಅಂದ್ರೆ ಸೌಜನ್ಯ ಕುಟುಂಬಸ್ಥರು ಯಾರ್ಯಾರ ಮೇಲೆ ಆರೋಪ ಮಾಡಿದ್ರೋ ಅವ್ರಿಗೆಲ್ಲಾ ಫೋನ್ ಮಾಡಿ ಕಚೇರಿಗೆ ಬರುವಂತೆ ಎಸ್ಐಟಿ ಅಧಿಕಾರಿಗಳು ಸೂಚನೆ ನೀಡಿದ್ರು. ಅದ್ರಂತೆ ಬುಧವಾರ ಉದಯ್ ಜೈನ್ ಕಚೇರಿಗೆ ಬಂದಿದ್ರು. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ವಿಚಾರಣೆ ಬಳಿಕ ಮಾತನಾಡಿರೋ ಉದಯ್ ಜೈನ್ ಸೌಜನ್ಯ ಪ್ರಕರಣವನ್ನ ಪ್ರಸ್ತಾಪ ಮಾಡಿದ್ರು. ಎಸ್ಐಟಿ ಅಧಿಕಾರಿಗಳು ಕರೆದಿದ್ರು. ಬಂದು ವಿಚಾರಣೆ ಎದುರಿಸಿದ್ದೇನೆ ಎಂದಿದ್ದಾರೆ. ಆದ್ರೆ ಆ ಬಳಿಕ ಸೌಜನ್ಯ ಕುಟುಂಬಸ್ಥರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸೌಜನ್ಯ ತಾಯಿ ಕುಸುಮಾವತಿ ಮೇಲೆ ನನಗೆ ಗೌರವ ಇದೆ. ಆದ್ರೆ ಮೊದ್ಲು ಹೇಗಿದ್ರು ಅವ್ರು. ಈಗ ಹೇಗಿದ್ದಾರೆ. ಅಷ್ಟು ದೊಡ್ಡ ಮನೆ ಹೇಗೆ ಕಟ್ಟಿಸಿಕೊಂಡ್ರು ಗೊತ್ತಿದೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಅಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಸೌಜನ್ಯ ಪ್ರಕರಣ ಮುಂದಿಟ್ಟುಕೊಂಡು ಕುಸುಮಾವತಿ ಹಣ ಮಾಡಿದ್ದಾರೆ ಅನ್ನುವಂತ ಆರೋಪವನ್ನ ಉದಯ್ ಜೈನ್ ಕೂಡ ಮುಂದುವರಿಸಿದ್ರು. ಆದ್ರೆ ಇದೆಲ್ಲಾ ಸೌಜನ್ಯ ಪ್ರಕರಣದ ತನಿಖೆಯ ಭಾಗನ ಅನ್ನೋ ಬಗ್ಗೆ ಎಸ್ಐಟಿ ಮಾತ್ರ ಈವರೆಗೂ ಯಾವುದೇ ಸ್ಪಷ್ಟತೆ ಕೊಟ್ಟಿಲ್ಲ. ಇದು ಒಂದ್ಕಡೆಯಾದ್ರೆ ಸೌಜನ್ಯ ಪ್ರಕರಣವೇ ಪಕ್ಷಗಳಿಗೂ ಟ್ರಂಪ್ ಕಾರ್ಡ್ ಆದಂತಾಗಿದೆ.
ಬುರುಡೆ ಮ್ಯಾನ್ ಚಿನ್ನಯ್ಯ ಸಾಮೂಹಿಕ ಸಮಾಧಿ ಬಗ್ಗೆ ಹೇಳಿದ್ದೆಲ್ಲಾ ಸುಳ್ಳು ಅನ್ನೋದು ಬಯಲಾಗ್ತಿದ್ದಂತೆ ಬಿಜೆಪಿ ಅಲರ್ಟ್ ಆಗಿತ್ತು. ಅಲ್ದೇ ಧರ್ಮಸ್ಥಳದ ಪರವಾಗಿ ಬಿಜೆಪಿ ನಾಯಕರು ಕೂಡ ಧ್ವನಿಯೆತ್ತಿದ್ರು. ನಾವು ಧರ್ಮಸ್ಥಳದ ಪರ ಇದ್ದೇವೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸೋರ ವಿರುದ್ಧ ನಮ್ಮ ಹೋರಾಟ ಅಂದಿದ್ರು. ಎಸ್ಐಟಿ ತನಿಖೆಯಲ್ಲಿ ಬೇರೆಯವರ ಕೈವಾಡಗಳಿವೆ, ಹಾಗೇ ಷಡ್ಯಂತ್ರಗಳು ನಡೆದಿವೆ. ಹಿಂದೂ ಧಾರ್ಮಿಕ ಕೇಂದ್ರವನ್ನ ಟಾರ್ಗೆಟ್ ಮಾಡೋ ಕೆಲಸ ಆಗ್ತಿದೆ ಅಂತಾ ಆರೋಪಿಸಿದ್ರು. ಆದ್ರೆ ಧರ್ಮಸ್ಥಳ ಚಲೋ ವೇದಿಕೆಯಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸೌಜನ್ಯ ಪ್ರಕರಣ ಮರುತನಿಖೆ ಆಗ್ಬೇಕು. ಹಾಗೇ ಸಿಬಿಐ ಕೋರ್ಟ್ ಹೇಳಿದಂತೆ ಅಕ್ವಿಟಲ್ ಕಮಿಟಿ ನೇಮಕ ಆಗ್ಬೇಕು ಅಂತಾ ಆಗ್ರಹಿಸಿದ್ರು. ಹಾಗೇ ದಕ್ಷಿಣ ಕನ್ನಡದ ಬಿಜೆಪಿ ಸಂಸದ ಬ್ರಿಜೇಶ್ ಚೌಟ ಕೂಡ ಸೌಜನ್ಯಗೆ ನ್ಯಾಯ ಸಿಗ್ಬೇಕು, ಪ್ರಕರಣದ ಮರು ತನಿಖೆ ಆಗ್ಬೇಕು ಅಂತಾ ಒತ್ತಾಯ ಮಾಡಿದ್ರು. ಇಷ್ಟಕ್ಕೆ ಸುಮ್ಮನಾಗದೆ ವಿಜಯೇಂದ್ರ ಮತ್ತು ಚೌಟ ತಮ್ಮ ಪಕ್ಷದ ನಾಯಕರ ಜೊತೆ ಸೌಜನ್ಯ ತಾಯಿ ಕುಸುಮಾವತಿಯನ್ನ ಭೇಟಿಯಾಗಿದ್ರು. ಸುಪ್ರೀಂ ಕೋರ್ಚ್ ನಲ್ಲಿ ನೀವು ಕಾನೂನು ಹೋರಾಟ ಮಾಡೋದಾದ್ರೆ ನಾವು ಬೆಂಬಲ ಕೊಡ್ತೇವೆ ಅಂತಾ ಭರವಸೆಯನ್ನ ಕೊಟ್ಟಿದ್ರು. ಬಟ್ ಸೌಜನ್ಯ ತಾಯಿ ಕುಸುಮಾವತಿ ಬೇರೆ ರೀತಿಯಲ್ಲೇ ಹೇಳಿಕೆ ನೀಡಿದ್ರು. ಬಿಜೆಪಿ ಸರ್ಕಾರ ಇದ್ದಾಗಲೇ ಅಂದ್ರೆ 2012ರಲ್ಲಿ ಸೌಜನ್ಯಳ ಮೇಲೆ ಹೇಯ ಕೃತ್ಯ ನಡೆಸಿ ಹತ್ಯೆ ಮಾಡಿದ್ದು. ನಮಗೆ ಇಲ್ಲಿ ರಾಜಕೀಯ ಬೇಡ. ದೇವರ ಮೇಲೆ ನಂಬಿಕೆ ಇದೆ. ನ್ಯಾಯ ಸಿಗುತ್ತೆ ಅನ್ನೋ ವಿಶ್ವಾಸವೂ ಇದೆ. ಸರ್ಕಾರ ಅಕ್ವಿಟಲ್ ಕಮಿಟಿ ಮಾಡ್ಬೇಕು ಅಂತಾ ಅವ್ರೂ ಕೂಡ ಒತ್ತಾಯ ಮಾಡಿದ್ದಾರೆ. ಇಲ್ಲಿ ಒಂದು ಗಮನಿಸಲೇಬೇಕಾದ ವಿಚಾರ ಏನಂದ್ರೆ 2024ರ ಡಿಸೆಂಬರ್ 30 ಹಾಗೇ 2025ರ ಜನವರಿ 2ರಂದು ಸರ್ಕಾರ ನೇಮಿಸಿದ ಅಕ್ವಿಟಲ್ ಕಮಿಟಿ ಎಡಿಜಿಪಿ ಪಿ ಹರಿಶೇಖರನ್ ನೇತೃತ್ವದಲ್ಲಿ ಸಭೆ ಮಾಡಿತ್ತು. ಎರಡು ಸಭೆಗಳ ನಂತ್ರ ಆ ಸಮಿತಿ ತೆಗೆದುಕೊಂಡ ತೀರ್ಮಾನ ನಿಜಕ್ಕೂ ಒಂಥರಾ ತಮಾಷೆಯಾಗಿತ್ತು. ಮತ್ತು ವಿಚಿತ್ರ ಅನ್ನಿಸಿತ್ತು. ಅಕ್ವಿಟಲ್ ಸಮಿತಿಯ ಅಂತಿಮ ತೀರ್ಮಾನ ಏನಾಗಿತ್ತಂದ್ರೆ ಸೌಜನ್ಯ ಪ್ರಕರಣವನ್ನ ಕೊನೇದಾಗಿ ತನಿಖೆ ನಡೆಸಿರೋದು ಸಿಬಿಐ. ಹಾಗೇ ಸಿಬಿಐಯೇ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರೋದ್ರಿಂದ ತನಿಖೆ ವೇಳೆ ಯಾವುದೇ ಲೋಪ ಆಗಿದ್ರೆ ಅದನ್ನ ಸಿಬಿಐ ತೀರ್ಮಾನ ಕೈಗೊಳ್ಬೇಕು ಅಂತಾ ಒಂದು ನಿರ್ಣಯವನ್ನ ಕೈಗೊಳ್ತಾರೆ. ಅಂದ್ರೆ ಇಲ್ಲಿ ಏನೇ ಲೋಪಗಳು ಆಗಿದ್ರೂ ಅದು ಸಿಬಿಐಗೆ ಬಿಟ್ಟದ್ದು. ರಾಜ್ಯ ಸರ್ಕಾರ ಅಥವಾ ಅಕ್ವಿಟಲ್ ಕಮಿಟಿಗೆ ಸಂಬಂಧ ಪಟ್ಟಿದ್ದಲ್ಲ ಅನ್ನೋ ತೀರ್ಮಾನಕ್ಕೆ ಬಂದು ಅಲ್ಲಿಗೆ ಅದನ್ನ ಮುಗಿಸಿ ಬಿಡ್ತಾರೆ. ಆದರೆ ಇಲ್ಲಿ ಪ್ರಶ್ನೆ ಇರುವಂಥದ್ದು ಸಿಬಿಐ ಕೋರ್ಟ್ ತನ್ನ ತೀರ್ಪಿನ ಸಂದರ್ಭದಲ್ಲಿ ಪ್ರಕರಣ ನಡೆದ ಗೋಲ್ಡನ್ ಅವರ್ ಅಂದ್ರೆ ಸೌಜನ್ಯ ಮೃತದೇಹ ಪತ್ತೆಯಾದ ಸಮಯದಿಂದ ಹಿಡಿದು ಸ್ಥಳದ ಮಹಜರು, ಆ ಬಳಿಕ ನಡೆದ ಪೋಸ್ಟ್ ಮಾರ್ಟಂ ವಿಚಾರಗಳಲ್ಲಿ ಎದುರಾಗಿರೋ ಲೋಪಗಳ ಬಗ್ಗೆ ತನ್ನ ತೀರ್ಪಿನಲ್ಲಿ ಪ್ರಸ್ತಾಪ ಮಾಡಿತ್ತು. ಇದ್ರ ಪ್ರಕಾರ ನೋಡಿದ್ರೆ ಪ್ರಕರಣದ ಗೋಲ್ಡನ್ ಅವರ್ನಲ್ಲಿ ಕೆಲಸ ಮಾಡಿದ್ದು ಬೆಳ್ತಂಗಡಿಯ ಪೊಲೀಸರು ಮತ್ತು ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆಯನ್ನ ನಡೆಸಿದ್ರು. ಈಗ ತಾಂತ್ರಿಕ ಕಾರಣಗಳನ್ನ ಮುಂದಿಟ್ಟುಕೊಂಡು ಸರ್ಕಾರದ ಅಕ್ವಿಟಲ್ ಕಮಿಟಿ ಈ ಪ್ರಕರಣದಿಂದ ಕೈತೊಳೆದುಕೊಳ್ಳೋ ಪ್ರಯತ್ನ ಮಾಡಿದ್ರು. ಇದೆಲ್ಲಾ ಒಂದು ಭಾಗವಾದ್ರೆ ಸಿದ್ದರಾಮಯ್ಯನವರ ಹೇಳಿಕೆಗಳೂ ಕೂಡ ಸರ್ಕಾರದ ನಡೆಯನ್ನ ಪ್ರಶ್ನಿಸುವಂತಿವೆ.

ನೋಡಿರಿ

