ಮತಗಟ್ಟೆಯೊಳಗೆ ಬಿಜೆಪಿಯಿಂದ ಕರಪತ್ರ ಹಂಚಿಕೆ! – ಗಂಭೀರ ಆರೋಪ ಮಾಡಿದ ಆಪ್ ನಾಯಕ
ಲೋಕಸಭಾ ಚುನಾವಣೆಗೆ ದೇಶದ 8 ರಾಜ್ಯಗಳಲ್ಲಿ ಶನಿವಾರ 6ನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು, ಜನರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುತ್ತಿದ್ದಾರೆ. ಇದೀಗ ಆಮ್ ಆದ್ಮಿ ಪಕ್ಷವು ಬಿಜೆಪಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದೆ. ಬಿಜೆಪಿಯವರು ಮತಗಟ್ಟೆಯೊಳಗೆ ಅಭ್ಯರ್ಥಿಗಳ ಕರಪತ್ರಗಳನ್ನು ಹೊತ್ತೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಪಾಂಡ್ಯ ದಾಂಪತ್ಯದಲ್ಲಿ ಬಿರುಕು – ಹಾರ್ದಿಕ್ನ ಶೇ.70 ರಷ್ಟು ಆಸ್ತಿ ನತಾಶಾ ಪಾಲು..?
ಎಎಪಿ ಅಭ್ಯರ್ಥಿ ಸೋಮನಾಥ್ ಭಾರ್ತಿಯವರು ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿ, ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಬಿಜೆಪಿಯವರು ಮತಗಟ್ಟೆಯೊಳಗೆ ಅಭ್ಯರ್ಥಿಗಳ ಕರಪತ್ರಗಳನ್ನು ಹೊತ್ತೊಯ್ಯುತ್ತಿದ್ದಾರೆ. ಮತಗಟ್ಟೆ ಏಜೆಂಟ್ ಗಳು ಬಿಜೆಪಿ ಕರಪತ್ರ ತರುತ್ತಿದ್ದಾರೆ. ಯಾರಿಗೂ ಹೆದರದೆ, ನಾಚಿಕೆಯಿಲ್ಲದೆ ಪ್ರದರ್ಶಿಸುತ್ತಿದ್ದಾರೆ. ಇದು ಮತಗಟ್ಟೆ ಸಂಖ್ಯೆ 134, 135, 137, 138ರಲ್ಲಿ ನಡೆಯುತ್ತಿದೆ. ಇದು ಆಘಾತಕಾರಿ ಬೆಳವಣಿಗೆ ಯಾಗಿದೆ. ಚುನಾವಣಾ ಆಯೋಗದ ಮೂಗಿನ ನೇರಕ್ಕೆ ಆಗುತ್ತಿದೆ ಎಂದು ಪೋಸ್ಟ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ದೆಹಲಿಯ ಎಲ್ಲಾ 7 ಸ್ಥಾನಗಳಲ್ಲಿ ಶನಿವಾರ ಮತದಾನ ನಡೆಯುತ್ತಿದೆ. ಆಮ್ ಆದ್ಮಿ ಪಕ್ಷದಿಂದ ಮೂರು ಬಾರಿ ಶಾಸಕರಾಗಿರುವ ಮತ್ತು ವೃತ್ತಿಯಲ್ಲಿ ವಕೀಲರಾಗಿರುವ ಸೋಮನಾಥ್ ಭಾರ್ತಿ ಅವರು ತಮ್ಮ ಚೊಚ್ಚಲ ಲೋಕಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ವಕೀಲರೂ ಆಗಿರುವ ಬಿಜೆಪಿ ನಾಯಕ ಬಾನ್ಸುರಿ ಸ್ವರಾಜ್ ವಿರುದ್ಧ ಮಾಳವೀಯ ನಗರ ಶಾಸಕ ಕಣಕ್ಕಿಳಿದಿದ್ದಾರೆ.