ಲಿಂಗಾಯುತ ಮತ ರಕ್ಷಣೆಗೆ ಬಿಜೆಪಿ ಸರ್ಕಸ್ – ಶೆಟ್ಟರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ 2 ದಿನ ನಡ್ಡಾ ವಾಸ್ತವ್ಯ!

ಲಿಂಗಾಯುತ ಮತ ರಕ್ಷಣೆಗೆ ಬಿಜೆಪಿ ಸರ್ಕಸ್ – ಶೆಟ್ಟರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ 2 ದಿನ ನಡ್ಡಾ ವಾಸ್ತವ್ಯ!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಅಭ್ಯರ್ಥಿಗಳ ಟಿಕೆಟ್ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಪಕ್ಷಗಳಲ್ಲಿ ಅಸಮಾಧಾನ ಸ್ಟೋಟಗೊಂಡು ಹಲವು ನಾಯಕರು ಬಂಡಾಯವೆದ್ದಿದ್ದಾರೆ. ಅಷ್ಟೇ ಅಲ್ಲದೇ ಪಕ್ಷಾಂತರ ಪರ್ವ ಕೂಡ ಆರಂಭಿಸಿದ್ದಾರೆ. ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಅತ್ಯಂತ ಹೆಚ್ಚು ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್‌ ಕಾಂಗ್ರೆಸ್ ಸೇರ್ಪಡೆ ಆಗುತ್ತಲೇ ಬಿಜೆಪಿ ಹೈ ಅಲರ್ಟ್ ಆಗಿದೆ. ಬಿಜೆಪಿ ಪಾಲಿಗೆ ಭದ್ರ ಮತಬುಟ್ಟಿ ಎಂದೆನಿಸಿರುವ ಲಿಂಗಾಯತ ಸಮುದಾಯದ ಮತಗಳು ಹಂಚಿಹೋಗದಂತೆ ತಡೆಯಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾದ ಜೆ.ಪಿ. ನಡ್ಡಾ ಅವರು ಹುಬ್ಬಳ್ಳಿ- ಧಾರವಾಡಕ್ಕೆ ಮಂಗಳವಾರ ಸಂಜೆ ಆಗಮಿಸಲಿದ್ದು, ಎರಡು ದಿನ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ಓದಿ: ಮತದಾನಕ್ಕೂ ಮುನ್ನ ರಾಜ್ಯಕ್ಕೆ ಮೋದಿ, ಅಮಿತ್ ಶಾ – ಮೇ 4 ರಂದು ಉಡುಪಿಗೆ ಭೇಟಿ?

ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮಂಗಳವಾರ ಸಂಜೆ ಹುಬ್ಬಳ್ಳಿಗೆ ಆಗಮಿಸಲಿದ್ದು, ಎರಡು ದಿನಗಳ ಕಾಲ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುವ ಎರಡು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಲಿದ್ದಾರೆ. ಈ ಮೂಲಕ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದ  ಬಿಜೆಪಿ ಮುಖಂಡರು ಹಾಗೂ ನಾಯಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಬುಧವಾರ (ಏ.19) ಹುಬ್ಬಳ್ಳಿಯ ಮೂರು ಸಾವಿರ ಮಠ, ಸಿದ್ದಾರೂಢ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ನಡ್ಡಾ ಹುಬ್ಬಳ್ಳಿಯಿಂದ ಶಿಗ್ಗಾಂವಿಗೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.

suddiyaana