ನಟ ಶಿವರಾಜ್ ಕುಮಾರ್ ನಟಿಸಿರುವ ಸಿನಿಮಾಗಳಿಗೆ ನಿರ್ಬಂಧ ಹೇರಿ, ಬಿಜೆಪಿ ದೂರು ದಾಖಲು!

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ಕುಮಾರ್ ಸ್ಪರ್ಧಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಸದ್ಯ ಪತ್ನಿ ಗೀತಾ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಶಿವಣ್ಣನಿಗೆ ಕಾನೂನು ಸಂಕಷ್ಟ ಎದುರಾಗಿದೆ. ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ನಟ ಶಿವಣ್ಣ ನಟಿಸಿರುವ ಸಿನಿಮಾ, ಜಾಹೀರಾತುಗಳಿಗೆ ನಿರ್ಬಂಧ ಹೇರುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಹೊಸ ಅಧ್ಯಾಯದ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೆಡಿ – ಹೇಗಿದೆ ಸಿಎಸ್ಕೆ ಹವಾ?
ನಟ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿರುವ ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರ ಸಿನಿಮಾ, ಜಾಹೀರಾತು ಹಾಗೂ ಬಿಲ್ಬೋರ್ಡ್ಗಳನ್ನು ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ಭಾರತೀಯ ಜನತಾ ಪಾರ್ಟಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ದೂರು ನೀಡಲಾಗಿದೆ. ಮೋರ್ಚಾದ ಅಧ್ಯಕ್ಷ ಆರ್. ರಘು ಅವರು ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಪ್ರಭಾವಿ ವ್ಯಕ್ತಿ ಆಗಿರುವ ಶಿವರಾಜ್ಕುಮಾರ್ ಅವರು ರಾಜ್ಯದ್ಯಂತ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಅವರು ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್ಕುಮಾರ್ ಅವರ ಸಿನಿಮಾ, ಜಾಹೀರಾತು, ಬಿಲ್ಬೋರ್ಡ್ಗಳನ್ನು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್, ಸೋಶಿಯಲ್ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಚುನಾವಣಾ ಆಯೋಗವು ನ್ಯಾಯಯುತವಾದ ಚುನಾವಣೆಯನ್ನು ನಡೆಸುತ್ತದೆ ಎಂದು ನನಗೆ ಭರವಸೆ ಇದೆ. ನನ್ನ ಮನವಿಗೆ ಆಯೋಗವು ಸ್ಪಂದಿಸುತ್ತದೆ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಂಬಿದ್ದೇನೆ ಎಂದು ಪತ್ರವನ್ನು ಪೂರ್ಣಗೊಳಿಸಿದ್ದಾರೆ ಎಂದು ರಘು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, 2ನೇ ಹಂತದಲ್ಲಿ ಮೇ 7ರಂದು ಇನ್ನುಳಿದ 14 ಕ್ಷೇತ್ರಗಳಲ್ಲಿ ಮತನಾದ ನಡೆಯಲಿದೆ. ಗೀತಾ ಶಿವರಾಜ್ಕುಮಾರ್ ಸ್ಪರ್ಧಿಸುತ್ತಿರುವ ಶಿವಮೊಗ್ಗದಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಅವರ ಪರವಾಗಿ ಚಿತ್ರರಂಗದ ಅನೇಕರು ಪ್ರಚಾರ ಮಾಡಲಿದ್ದಾರೆ.