ನಾಟು ನಾಟು ಅಲ್ಲ ಮೋದಿ – ಮೋದಿ ಸಾಂಗ್‌ – ಬಿಜೆಪಿಯಲ್ಲಿ ಮೋದಿ ಸಾಧನೆಯ ಹಾಡು..!

ನಾಟು ನಾಟು ಅಲ್ಲ ಮೋದಿ – ಮೋದಿ  ಸಾಂಗ್‌ – ಬಿಜೆಪಿಯಲ್ಲಿ ಮೋದಿ ಸಾಧನೆಯ ಹಾಡು..!

ರಾಜ್ಯದಲ್ಲಿ ಚುನಾವಣೆಯ ಅಬ್ಬರ ಜೋರಾಗಿದೆ. ಇದರ ಜೊತೆಗೆ ರಾಜಕೀಯ ಪಕ್ಷಗಳು ತಮ್ಮ ಸಾಧನೆಯನ್ನು ಹೇಳಿಕೊಳ್ಳಲು ಹಾಡುಗಳನ್ನು ರೆಡಿ ಮಾಡುವುದು ಕೂಡಾ ಸಾಮಾನ್ಯ. ಈ ಬಾರಿ ಬಿಜೆಪಿ ಆಯ್ಕೆ ಮಾಡಿಕೊಂಡಿರುವುದು ಆಸ್ಕರ್ ಪ್ರಶಸ್ತಿ ವಿಜೇತ ಸಾಂಗ್ ನಾಟು ನಾಟುವನ್ನು. ನಾಟು-ನಾಟು ಹಾಡನ್ನು ಮೋದಿ-ಮೋದಿ ಎಂದು ಬದಲಾಯಿಸಿ ಬಿಜೆಪಿಯು ಹಾಡೊಂದನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ‘ಕಡೂರಲ್ಲಿ ನೀನು ಹೇಳಿದವ್ರಿಗೇ ಬಿ ಫಾರಂ.. ಹಾಸನ ಕ್ಷೇತ್ರ ಬಿಟ್ಟುಬಿಡು’ – ರೇವಣ್ಣಗೆ ಹೆಚ್​ ಡಿಕೆ ಆಫರ್..!

ಸಚಿವ ಸುಧಾಕರ್ ಸೇರಿದಂತೆ ಇನ್ನೂ ಕೆಲವರು ಹಾಡನ್ನು ಹಂಚಿಕೊಂಡಿದ್ದಾರೆ. ಹಾಡಿನ ಸಾಹಿತ್ಯವನ್ನು ನಾಟು-ನಾಟು ಬದಲಿಗೆ ಮೋದಿ-ಮೋದಿ ಎಂದು ಬದಲಾಯಿಸಿ ಮೋದಿಯ ಗುಣಗಾನ ಮಾಡುವ ಸಾಲುಗಳನ್ನು ಸೇರಿಸಲಾಗಿದೆ. ಹಾಡಿನ ವಿಡಿಯೋವನ್ನು ಸಚಿವ ಸುಧಾಕರ್ ಸೇರಿದಂತೆ ಇನ್ನೂ ಕೆಲವರು ಹಂಚಿಕೊಂಡಿದ್ದಾರೆ. ಹಾಡಿನಲ್ಲಿ ಕರ್ನಾಟಕ್ಕೆ ಪ್ರಧಾನಿ ಮೋದಿ ನೀಡಿದ ಯೋಜನೆಗಳನ್ನು, ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಲಾಗಿದೆ. ಹಾಡಿನಲ್ಲಿ ಮೋದಿಯ ಹೊರತಾಗಿ ಇನ್ಯಾವುದೇ ಬಿಜೆಪಿ ನಾಯಕರ ಹೆಸರುಗಳು, ಸಾಧನೆಗಳ ವಿವರಗಳು ಇಲ್ಲ. ರಾಜ್ಯ ಸರ್ಕಾರದ ಸಾಧನೆಗಳ ಉಲ್ಲೇಖವೂ ಇಲ್ಲ. ಈ ಹಾಡನ್ನು ಭಾರತೀಯ ಜನತಾ ಯುವಮೋರ್ಚಾ ವತಿಯಿಂದ ಮಾಡಲಾಗಿದೆ. ಇಬ್ಬರು ಯುವಕರು, ಇಬ್ಬರು ಯುವತಿಯರು ಮೋದಿ-ಮೋದಿ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ.

ನಾಟು-ನಾಟು ಹಾಡಿನಲ್ಲಿ ಜೂ ಎನ್‌ಟಿಆರ್-ರಾಮ್ ಚರಣ್ ಹಾಕಿದ್ದ ಸ್ಟೆಪ್‌ಗಳನ್ನೇ ಮೋದಿ-ಮಾದಿ ಹಾಡಿಗೆ ಯುವಕ-ಯುವತಿಯರು ಹಾಕಿದ್ದಾರೆ. ಈ ಹಾಡನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸುಧಾಕರ್, ‘ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರ ನೇತೃತ್ವದಲ್ಲಿ ನಮ್ಮ ಡಬಲ್ ಎಂಜಿನ್ ಬಿಜೆಪಿ ಸರ್ಕಾರವು ಕರ್ನಾಟಕದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಪರ್ವವನ್ನು ಅದ್ಭುತವಾದ ಹಾಡಿನ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಯುವಮೋರ್ಚಾ ಪ್ರಯತ್ನ ಶ್ಲಾಘನೀಯ’ ಎಂದು ಬರೆದುಕೊಂಡಿದ್ದಾರೆ. ಕರ್ನಾಟಕ ಬಿಜೆಪಿಯು ಕಳೆದ ತಿಂಗಳು ಅಧಿಕೃತವಾಗಿ ಹಾಡೊಂದನ್ನು ಬಿಡುಗಡೆ ಮಾಡಿತ್ತು. ಹಾಡಿನಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯ ಬಿಜೆಪಿಯ ಸಾಧನೆಗಳನ್ನು ಉಲ್ಲೇಖಿಸಲಾಗಿತ್ತು. ‘ಕನ್ನಡಿಗರ ಕಣ ಕಣದಲ್ಲೂ ಮೊಳಗಲಿದೆ ಬಿಜೆಪಿ’ ಎಂಬ ಆ ಹಾಡು ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಬಿಜೆಪಿಯ ಅಧಿಕೃತ ಹಾಡಾಗಿದೆ.

ಇನ್ನು ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷವು ಕೆಜಿಎಫ್ ಸಿನಿಮಾದ ಹಿನ್ನೆಲೆ ಸಂಗೀತವನ್ನು ಬಳಸಿಕೊಂಡಿದ್ದಕ್ಕೆ ಆ ಸಂಗೀತದ ಹಕ್ಕು ಹೊಂದಿದ ಸಂಸ್ಥೆಯೊಂದು ಕಾಂಗ್ರೆಸ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದೀಗ ಬಿಜೆಪಿ ನಾಟು-ನಾಟು ಹಾಡನ್ನು ಬಳಸಿಕೊಂಡಿದೆ.

suddiyaana