ಬಿಜೆಪಿಗೆ ಬಿಗ್ ಶಾಕ್.. ಕಾಂಗ್ರೆಸ್ ಗೆ ಚಿಂಚನಸೂರ್ – ಚುನಾವಣಾ ಲೆಕ್ಕಾಚಾರ ಏನಾಗುತ್ತೆ..?

ಬಿಜೆಪಿಗೆ ಬಿಗ್ ಶಾಕ್.. ಕಾಂಗ್ರೆಸ್ ಗೆ ಚಿಂಚನಸೂರ್ – ಚುನಾವಣಾ ಲೆಕ್ಕಾಚಾರ ಏನಾಗುತ್ತೆ..?

ಚುನಾವಣೆ ಹತ್ತಿರ ಬಂದಾಗ ರಾಜಕೀಯ ನಾಯಕರು ಪಕ್ಷದಿಂದ ಪಕ್ಷಕ್ಕೆ ಜಿಗಿಯೋದು ಹೊಸದೇನಲ್ಲ. ಇದೀಗ ಈ ಲಿಸ್ಟ್​ಗೆ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಕೂಡ ಸೇರ್ಪಡೆಯಾಗಿದ್ದಾರೆ. ಬಿಜೆಪಿ ವಿಧಾನ ಪರಿಷತ್ ಹಾಲಿ ಸದಸ್ಯ ಬಾಬೂರಾವ್ ಚಿಂಚನಸೂರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ತೆಕ್ಕೆಗೆ ಜಾರಿದ್ದಾರೆ.

ಬಿಜೆಪಿ ಎಂಎಲ್ ಸಿ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮರಳಿ ಮಾತೃ ಪಕ್ಷದ ಬಾವುಟ ಹಾರಿಸಿದ್ದಾರೆ. ಬಿಜೆಪಿಯಲ್ಲಿ ಕಡೆಗಣನೆ ಹಿನ್ನೆಲೆ ರಾಜೀನಾಮೆ ನೀಡಿದ್ದು ಯಾದಗಿರಿಯ ಗುರುಮಠಕಲ್ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗ್ತಿದೆ. ಕೋಲಿ ಸಮಾಜಕ್ಕೆ ಸೇರಿದ ಬಾಬೂರಾವ್ ಚಿಂಚನಸೂರು ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ನಾಯಕರು. ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕರಾಗಿದ್ದು ಈಗ ಮರಳಿ ಕಾಂಗ್ರೆಸ್​ಗೆ ಸೇರಿರೋದ್ರಿಂದ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದೆ. ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಇದು ಮಹತ್ವದ ಬೆಳವಣಿಗೆಯಾಗಿ ಕೂಡ ಆಗಿದೆ.

ಇದನ್ನೂ ಓದಿ : ಹೆಚ್‌ಡಿಕೆ ನಂತರ ಡಿಕೆಶಿ ಅಮಾವಾಸ್ಯೆ ಪೂಜೆ – ಕಾಲಭೈರವನ ಮೊರೆ ಹೋದರೆ ಸಿಎಂ ಆಗ್ತಾರಾ?

ಕೋಲಿ ಸಮುದಾಯವೇ ಹೆಚ್ಚಾಗಿರುವ ಕಲ್ಯಾಣ ಕರ್ನಾಟಕ ಭಾಗದ ಕೆಲ ಕ್ಷೇತ್ರಗಳನ್ನು ಸುಲಭವಾಗಿ ಗೆಲ್ಲುವ ಕನಸು ಕಂಡಿದ್ದ ಬಿಜೆಪಿಗೆ ದೊಡ್ಡ ಆಘಾತ ತಟ್ಟಿದೆ. ಕಲ್ಯಾಣ ಕರ್ನಾಟಕ ಭಾಗದ ಕೋಲಿ ಸಮಾಜದ ಏಕೈಕ ಪ್ರಭಾವಿ ಮುಖಂಡ, ಸಪ್ತ ಖಾತೆಗಳ ಸಚಿವನೆಂದೇ ಖ್ಯಾತಿ ಹೊಂದಿದ್ದ ಬಾಬುರಾವ್ ಚಿಂಚನಸೂರ್ ಸೋಮವಾರ ಸಂಜೆ  ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿಯಲ್ಲಿ ತಮ್ಮನ್ನ ಕಡೆಗಣಿಸಲಾಗುತ್ತಿದೆ. ಸರ್ಕಾರಿ ಕಾರ್ಯಾಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ ಎಂದು ಚಿಂಚನಸೂರ್ ಅಸಮಾಧಾನ ಹೊರಹಾಕಿದ್ದರು. ತಮ್ಮನ್ನು ಬಿಟ್ಟು ವಸತಿ ಶಾಲೆ ಉದ್ಘಾಟನೆಗೆ ಮುಂದಾಗಿದ್ದ ಸಚಿವ ರಾಮುಲುಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ್ದರು. ನಿಗಮ ಮಂಡಳಿ ಅಧ್ಯಕ್ಷ ಹಾಗೂ ಎಂಎಲ್​ಸಿ ಆಗಿದ್ದರೂ ಕಡೆಗಣಿಸುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದ್ದರು.

ಈ ನಡುವೆ ಮಾರ್ಚ್ 8ರಂದು ವಿಜಯಸಂಕಲ್ಪ ಯಾತ್ರೆ ವೇಳೆ ಬಾಬುರಾವ್ ಚಿಂಚನಸೂರ್ ಗುರಮಠಕಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಆದ್ರೆ ಘೋಷಣೆ ಮಾಡಿದ 12 ದಿನಕ್ಕೆ ಬಿಜೆಪಿಗೆ ರಾಜೀನಾಮೆ ನೀಡಿ ಶಾಕ್ ಕೊಟ್ಟಿದ್ದಾರೆ. ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಕೋಲಿ ಸಮಾಜದ ಮತಗಳೇ ನಿರ್ಣಾಯಕ. ಅದರಲ್ಲೂ ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆ ಸ್ಪರ್ಧೆ ಮಾಡಲಿರುವ ಚಿತ್ತಾಪುರದಲ್ಲಿ ಕೋಲಿ ಸಮುದಾಯವೇ ನಿರ್ಣಾಯಕ. ಬಹುಸಂಖ್ಯಾತ ಕೋಲಿ ಸಮುದಾಯದ ಮತದಾರರು ಇರುವ ಚಿತ್ತಾಪುರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದ ಚಿಂಚನಸೂರ ಗ್ರೌಂಡ್ ಲೆವಲ್‌ನಿಂದ ಕೆಲಸ ಮಾಡಿ, ಕಾರ್ಯಕರ್ತರ ಪಡೆ ಕಟ್ಟಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಸೋಲಿನಲ್ಲಿ ಚಿಂಚನಸೂರು ಪ್ರಮುಖ ಪಾತ್ರ ವಹಿಸಿದ್ದರೂ ಕೂಡ ಸದ್ಯದ ರಾಜಕೀಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್​ಗೆ ಅವ್ರ ಸೇರ್ಪಡೆ ಅನಿವಾರ್ಯವಾಗಿದೆ. ಇನ್ನು 2008, 2013ರ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದಿಂದ ಗೆದ್ದಿದ್ದ ಬಾಬೂರಾವ್ ಚಿಂಚನಸೂರ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು ಆಗಿದ್ದರು. ಆದರೆ, 2018ರ ಚುನಾವಣೆಯಲ್ಲಿ ಸೋಲುಂಡಿದ್ದರು.

suddiyaana