ಬೆಳಗಾವಿ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ – ಮತ್ತಿಬ್ಬರು ಶಾಸಕರು ರೆಬೆಲ್.. ಮುಂದಿನ ನಡೆ ಏನು..?

ಬೆಳಗಾವಿ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ – ಮತ್ತಿಬ್ಬರು ಶಾಸಕರು ರೆಬೆಲ್.. ಮುಂದಿನ ನಡೆ ಏನು..?

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದೇ ಮಾಡಿದ್ದು. ಬಂಡಾಯದ ಬೆಂಕಿ ಆರುವ ಲಕ್ಷಣಗಳೇ ಕಾಣುತ್ತಿಲ್ಲ. ದಿನಕ್ಕೊಬ್ಬರಂತೆ ಪಕ್ಷದ ವಿರುದ್ಧ ಸಿಡಿದೇಳುತ್ತಿದ್ದಾರೆ. ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷಾಂತರ ಪರ್ವ ಶುರು ಮಾಡಿದ್ದಾರೆ. ಅದರಲ್ಲೂ ಬೆಳಗಾವಿಯಂತೂ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿದೆ. ಟಿಕೆಟ್ ಕೈತಪ್ಪಿರುವ ಅಭ್ಯರ್ಥಿಗಳೆಲ್ಲಾ ಕೆರಳಿ ಕೆಂಡವಾಗಿದ್ದು, ರಾಜೀನಾಮೆ ಕೊಡ್ತಿದ್ದಾರೆ.

ಈಗಾಗಲೇ ಬಿಜೆಪಿ ಮನೆಯಿಂದ ಹೆಜ್ಜೆ ಹೊರಗಿಟ್ಟಿರುವ ಲಕ್ಷ್ಮಣ ಸವದಿ ಕಾಂಗ್ರೆಸ್ ಬಾಗಿಲಿನಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ನಾಯಕರು ಸವದಿ ಜೊತೆ ಮಾತುಕತೆ ನಡೆಸಿ ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ. ಇದರ ನಡುವೆ ಬೆಳಗಾವಿ ಜಿಲ್ಲೆಯಲ್ಲೇ ಟಿಕೆಟ್ ವಂಚಿತ ಮತ್ತಿಬ್ಬರು ಹಾಲಿ ಶಾಸಕರು ತಿರುಗಿ ಬಿದ್ದಿದ್ದಾರೆ. ಲಕ್ಷ್ಮಣ ಸವದಿ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು ವಿಕೆಟ್ ಪತನಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಜೆಪಿಗೆ ಗುಡ್‌ಬೈ ಹೇಳಲು ರಾಮದುರ್ಗ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ(Mahadevappa Yadawad) ಮತ್ತು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ(Anil Benake) ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರೋದು ಫಿಕ್ಸ್ – ಬೆಂಗಳೂರಿನಲ್ಲಿ ಡಿಕೆಶಿ, ಸಿದ್ದು ಭೇಟಿ ಬಳಿಕ ಘೋಷಣೆ!?

ರಾಮದುರ್ಗ ಟಿಕೆಟ್ ಕೈತಪ್ಪಿದಕ್ಕೆ ಆಕ್ರೋಶಗೊಂಡಿರುವ ಮಹಾದೇವಪ್ಪ ಯಾದವಾಡ ಅವರು ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಟಿಕೆಟ್ ಬದಲಾವಣೆ ಮಾಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ನಾನು ಶಾಸಕನಾಗಿ 3,100 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಬಿಜೆಪಿ ಶಿಸ್ತಿನ ಪಕ್ಷ, ಆದ್ರೆ ಕಾಂಗ್ರೆಸ್‌ನಿಂದ ಚಿಕ್ಕರೇವಣ್ಣ ಕರೆತಂದು ಟಿಕೆಟ್ ಘೋಷಣೆ ಮಾಡಿದ್ದಾರೆ. ನಿನ್ನೆ ಬೆಂಬಲಿಗರ ಸಭೆಯಲ್ಲಿ ನಮ್ಮ ಕಾರ್ಯಕರ್ತರು ಬಿಜೆಪಿ ಅನ್ಯಾಯ ಮಾಡಿದೆ ಎಂದಿದ್ದಾರೆ. ನಮ್ಮ ತಾಲೂಕಿನಲ್ಲಿ ನಾಲ್ಕೈದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದರು. ಸಿದ್ದರಾಮಯ್ಯ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಮೂಲದ ಚಿಕ್ಕರೇವಣ್ಣಗೆ ಟಿಕೆಟ್ ನೀಡಿದ್ದಾರೆ. ನನ್ನ ಬದಲು ಸ್ಥಳೀಯರಿಗೆ ಅವಕಾಶ ನೀಡಿದ್ರೆ ನಾನು ಸುಮ್ಮನಿರುತ್ತಿದ್ದೆ. ಹೊರಗಿನ ಚಿಕ್ಕರೇವಣ್ಣಗೆ ಮಣೆ ಹಾಕಿದಕ್ಕೆ ನನಗೆ ಬೇಸರ ಇದೆ. ರಾಜ್ಯ, ರಾಷ್ಟ್ರೀಯ ಮುಖಂಡರು ನನಗೆ ಟಿಕೆಟ್ ನೀಡುವ ಕೆಲಸ ಮಾಡಬೇಕು. ಅವರು ನೀಡಿದ ಭರವಸೆ ಈಡೇರಿಸದಿದ್ರೆ ಬಿಜೆಪಿಗೆ ರಾಜೀನಾಮೆ ಸಲ್ಲಿಸುವೆ. ನಾನು ಬಿಜೆಪಿ ತೊರೆದು ಯಾವುದೇ ಪಕ್ಷ ಸೇರುವುದಿಲ್ಲ. ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ ಎಂದ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಅಸಮಾಧಾನ ಹೊರ ಹಾಕಿದ್ದಾರೆ.

ಮತ್ತೊಂದೆಡೆ ಬಿಜೆಪಿ ಶಾಸಕ ಅನಿಲ್ ಬೆನಕೆ ಕಾಂಗ್ರೆಸ್ ಹೈಕಮಾಂಡ್ ಸಂಪರ್ಕಿಸಿರುವುದನ್ನ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಖಚಿತ ಪಡಿಸಿದ್ದಾರೆ. ನಾನು ನನ್ನ ಚುನಾವಣೆಯಲ್ಲಿ ಬ್ಯುಸಿ ಇದ್ದೇನೆ. ನಮ್ಮ ಹೈಕಮಾಂಡ್ ಜೊತೆಗೆ ಅನಿಲ್ ಬೆನಕೆ ಸಂಪರ್ಕದಲ್ಲಿರಬಹುದು. ಮುಂಬರುವ ದಿನಗಳಲ್ಲಿ ಯಾರು ಬರ್ತಾರೆ ನೋಡೋಣ. ಲಕ್ಷ್ಮಣ ಸವದಿಯವರು ಮೊದಲು ಕಾಂಗ್ರೆಸ್‌ಗೆ ಬರಲಿ ಅವರಿಗೆ ಸ್ವಾಗತ ಮಾಡುತ್ತೇವೆ ನಾವು. ನಮ್ಮ ಜಿಲ್ಲಾ ನಾಯಕರೆಲ್ಲರೂ ಕೂಡಿ ಅವರನ್ನ ಸ್ವಾಗತ ಮಾಡುತ್ತಿದ್ದಾರೆ. ಅವರು ಬರೋದ್ರಿಂದ ಜಿಲ್ಲೆಗೆ ಅಷ್ಟೇ ಅಲ್ಲದೇ ರಾಜ್ಯದಲ್ಲೂ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.  ಲಕ್ಷ್ಮಣ ಸವದಿಯನ್ನ ಎಂಎಲ್‌ಸಿ ಚನ್ನರಾಜ ಕರೆದುಕೊಂಡು ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಹೈಕಮಾಂಡ್ ಕೊಟ್ಟಿರುವ ನಿರ್ದೇಶನವನ್ನ ಸಹೋದರ ಮಾಡಿದ್ದಾರೆ. ಸವದಿಯವರು ಹಿರಿಯರಿದ್ದಾರೆ. ಅವರು ನಮಗೆ ಮಾರ್ಗದರ್ಶನ ಮಾಡಬೇಕು ಎಂದರು.

ಇನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಟಿಕೆಟ್ ಸಿಕ್ಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಪಾಪ ಸಂಜಯ್ ಪಾಟೀಲ್ ಎರಡು ಬಾರಿ ಶಾಸಕರಾಗಿದ್ದವರು. ಧನಂಜಯ್ ಜಾಧವ್ ಕೂಡ ಪಕ್ಷದಲ್ಲಿದ್ದವರು. ಆದ್ರೂ ಅವರಿಗೆ ಟಿಕೆಟ್ ಸಿಕ್ಕಿಲ್ಲ ಅಂದ್ರೆಎನೂ ಮಾಡಲು ಆಗಲ್ಲ‌. ಯಾರೇ ಅಭ್ಯರ್ಥಿಯಾದ್ರೂ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಚುನಾವಣೆ ಮಾಡುತ್ತೇನೆ ಎಂದು ರಮೇಶ್‌ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

suddiyaana