ಪೊಲೀಸರಿಗೆ ಬೆದರಿಕೆ ಪ್ರಕರಣ – ಅರೆಸ್ಟ್‌ ಆಗ್ತಾರಾ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ?

ಪೊಲೀಸರಿಗೆ ಬೆದರಿಕೆ ಪ್ರಕರಣ – ಅರೆಸ್ಟ್‌ ಆಗ್ತಾರಾ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ?

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಬಂಧನ ಭೀತಿ ಎದುರಾಗಿದೆ. ಪೊಲೀಸರಿಗೆ ಅವ್ಯಾಚವಾಗಿ ಬೈದು ಬೆದರಿಕೆ ಹಾಕಿರುವುದಕ್ಕೆ ಅರೋಪ ಮೇರೆಗೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಯಾವುದೇ ಕ್ಷಣದಲ್ಲಾದರೂ ಬಂಧನವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಲಗಿದ್ದಲ್ಲೇ ಅಪ್ಪ ಅಮ್ಮ ಮಕ್ಕಳ ದುರಂತ ಅಂತ್ಯ – ಒಂದೇ ಮನೆಯಲ್ಲಿ ನಾಲ್ವರ ಸಾವಿಗೆ ಕಾರಣವೇನು?

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಎಂಬಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಆರೋಪ ಮೇರೆಗೆ ದಾಳಿ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ಶಶಿರಾಜ್‌ ಶೆಟ್ಟಿ ಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಶಶಿರಾಜ್‌ ಪರವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಕಾಲತ್ತು ವಹಿಸಿ, ಮೇ 18ರಂದು ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಕೆ ಹಾಕಿರುವುದಕ್ಕೆ ಹಾಗೂ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಾರೆ ಎಂಬ ಅರೋಪ ಮೇರೆಗೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪೊಲೀಸರು ಹರೀಶ್‌ ಪೂಂಜಾ ಮನೆ ಮುಂದೆ ಬೀಡು ಬಿಟ್ಟಿದ್ದು ಯಾವುದೇ ಕ್ಷಣದಲ್ಲಾದರೂ ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ ಹರೀಶ್‌ ಪೂಂಜಾ ಮನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದಾರೆ.

ಇನ್ನು ಹರೀಶ್ ಪೂಂಜಾ ಬಂಧನದ ಸಾಧ್ಯತೆ ಅಥವಾ ಬಂಧನ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದೀಗ ಬಿವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪೊಲೀಸರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ ಮತ್ತು ಕೊಡಗಿನಲ್ಲಿ ತಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ವಿನಾನಾರಣ ಬಿಜೆಪಿ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಇದನ್ನೆಲ್ಲ ನಾವು ಸಹಿಸಿಕೊಳ್ಳುವುದು ಸಾಧ್ಯವಿಲ್ಲ, ಗೃಹ ಸಚಿವರು ತಮ್ಮ ಅಧಿಕಾರಿಗಳೊಂದಿಗೆ ಮಾತಾಡಿ ಇದನ್ನು ನಿಲ್ಲಿಸಬೇಕು ಎಂದು ವಿಜಯೇಂದ್ರ ಹೇಳಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪೊಲೀಸರ ವಿರುದ್ಧ ಮಾತಾಡಿದ್ದು ತಪ್ಪು ಅಂತ ಹೇಳುವ ವಿಜಯೇಂದ್ರ ಪಕ್ಷದ ಕಾರ್ಯಕರ್ತನನ್ನು ಬಂಧಿಸಿದಕ್ಕೆ ಆವೇಶಗೊಂಡು ಅವರು ಹಾಗೆ ಮಾತಾಡಿರುತ್ತಾರೆ. ಅದರೆ ಇದನ್ನೇ ನೆಪವಾಗಿಸಿಕೊಂಡು ಪೊಲೀಸರು ಹರೀಶ್ ಬಂಧನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

Shwetha M