ರೀಲ್ಸ್ ಮಾಡಲು ಹೋಗಿ ಯಮುನಾ ನದಿಗೆ ಬಿದ್ದ ಬಿಜೆಪಿ ಶಾಸಕ! – ಆಮೇಲೆ ಏನಾಯ್ತು?

ಈಗೀಗ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ರೀಲ್ಸ್ ಮಾಡ್ತಿದ್ದಾರೆ. ಇದೀಗ ಬಿಜೆಪಿ ಶಾಸಕರೊಬ್ಬರು ರೀಲ್ಸ್ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ. ರೀಲ್ಸ್ ಮಾಡ್ತಾ ಮಾಡ್ತಾ ಯಮುನಾ ನದಿಗೆ ಬಿದ್ದಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಗಂಡ ಬಿಟ್ಟು ಬಂದ ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಯುವಕ! – ಆಮೇಲೆ ಆಗಿದ್ದೇನು ಗೊತ್ತಾ?
ಯಮುನಾ ನದಿ ವಿಚಾರವಾಗಿ ದೆಹಲಿಯ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಎಎಪಿ ನಡುವಿನ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಛತ್ ಪೂಜೆಗೆ ಸಿದ್ಧತೆಗಳ ಮಧ್ಯೆ, ಯಮುನಾ ನದಿಯ ಸ್ಥಿತಿಯ ಬಗ್ಗೆ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಎರಡೂ ಪಕ್ಷಗಳು ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ. ಕಳೆದ ವಾರಾಂತ್ಯದಲ್ಲಿ ಎಎಪಿಯ ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ನದಿಯನ್ನು ಸ್ವಚ್ಛಗೊಳಿಸಲಾಗಿದೆ ಎಂಬ ತಮ್ಮ ಹೇಳಿಕೆಯನ್ನು ಸಾಬೀತುಪಡಿಸಲು ನದಿಯ ನೀರು ಕುಡಿಯುವಂತೆ ಸವಾಲು ಹಾಕಿದ್ದರು. ಇವೆಲ್ಲದ್ರ ನಡುವೆ ಈಗ ಬಿಜೆಪಿ ಶಾಸಕರೊಬ್ಬರು ಯಡವಟ್ಟನ್ನು ಮಾಡಿಕೊಂಡಿದ್ದಾರೆ. ನದಿ ಸ್ವಚ್ಛತಾ ಜಾಗೃತಿ ಅಭಿಯಾನದ ರೀಲ್ ಚಿತ್ರೀಕರಣ ಮಾಡುವಾಗ ದೆಹಲಿ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಯಮುನಾ ನದಿಯಲ್ಲಿ ಬಿದ್ದಿದ್ದಾರೆ. ಪತ್ಪರ್ಗಂಜ್ನ ಶಾಸಕರು ಜಾರಿ ನೀರಿಗೆ ಬೀಳುತ್ತಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಪಕ್ಷಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟೀಕಿಸಿವೆ.
ಆಮ್ ಆದ್ಮಿ ಪಕ್ಷದ ಶಾಸಕ ಸಂಜೀವ್ ಝಾ ಅವರು X ನಲ್ಲಿ ವೀಡಿಯೊವನ್ನು ಹಂಚಿಕೊಂಡು, ನೇಗಿ ಅವರನ್ನು ಟೀಕಿಸಿದ್ದಾರೆ. ಬಿಜೆಪಿ ನಾಯಕರು ದೇಶದ ಜನರಿಗೆ ಸುಳ್ಳು ಭರವಸೆ ನೀಡುವಲ್ಲಿ ನಿಸ್ಸೀಮರು. ಇದೇ ಅವರ ಯಮುನಾ ನದಿ ಸ್ವಚ್ಛತೆ. ಅವರು ಕ್ಯಾಮರಾಗಷ್ಟೇ ಸೀಮಿತ ಎಂದು ಅವರು ಟೀಕಿಸಿದರು. ಬಹುಶಃ ಸುಳ್ಳು ಮತ್ತು ವೈಭವೀಕರಣದ ರಾಜಕೀಯದಿಂದ ಬೇಸತ್ತು, ಯಮುನಾ ಮಯ್ಯ ಸ್ವತಃ ಅವರನ್ನು ತನ್ನ ಕಡೆಗೆ ಕರೆದಿರಬಹುದು ಎಂದು ಝಾ ಬರೆದುಕೊಂಡಿದ್ದಾರೆ.
19 ಸೆಕೆಂಡುಗಳ ವೀಡಿಯೊದಲ್ಲಿ, ಪತ್ಪರ್ಗಂಜ್ ಶಾಸಕರು ಎರಡು ಬಾಟಲಿಗಳನ್ನು ಹಿಡಿದುಕೊಂಡು ನದಿಯ ದಡದಲ್ಲಿ ನಿಂತಿರುವುದು ಕಂಡುಬರುತ್ತದೆ. ಮಂಡಿಯೂರಿ ಕುಳಿತಿದ್ದ ಸ್ಥಾನದಿಂದ ಮೇಲೇಳಲು ಪ್ರಯತ್ನಿಸುತ್ತಿರುವಾಗ, ನೇಗಿ ಸಮತೋಲನ ಕಳೆದುಕೊಂಡು ನೀರಿಗೆ ಜಾರಿ ಬೀಳುತ್ತಾರೆ. ಹತ್ತಿರದ ವ್ಯಕ್ತಿಯೊಬ್ಬರು ಸಹಾಯ ಮಾಡಲು ಧಾವಿಸುತ್ತಾರೆ, ಆದರೆ ಅಷ್ಟರಲ್ಲಾಗಲೇ ಅವರು ನದಿಯ ಒಳಗೆ ಬಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೋಡಿರಿ

