ಸಿದ್ದು, ಡಿಕೆಶಿಯನ್ನ ಕಟ್ಟಿ ಹಾಕಲು ಸೋಮಣ್ಣ, ಅಶೋಕ್ ಅಖಾಡಕ್ಕೆ? – ಬಿಜೆಪಿ ಮಾಸ್ಟರ್ ಪ್ಲ್ಯಾನ್ ಏನು?
ಕರ್ನಾಟಕ ವಿಧಾನಸಭಾ ಚುನಾವಣೆ ಗೆಲುವಿಗಾಗಿ ಮೂರೂ ಪಕ್ಷಗಳು ಕಸರತ್ತು ನಡೆಸಿವೆ. ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ರೇಸ್ ನಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರನ್ನ ಸ್ವಕ್ಷೇತ್ರದಲ್ಲೇ ಕಟ್ಟಿ ಹಾಕಲು ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಹೀಗಾಗಿ ಪ್ರಬಲ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಸಕಲ ತಯಾರಿಯನ್ನೂ ಮಾಡಿಕೊಂಡಿದೆ.
ಇದನ್ನೂ ಓದಿ : 175 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಗೆ ಕೌಂಟ್ ಡೌನ್ – ಬಿಜೆಪಿಯಲ್ಲಿ ಯಾರಿಗೆಲ್ಲಾ ಟಿಕೆಟ್ ಮಿಸ್?
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಸಿದ್ದರಾಮಯ್ಯ(Siddaramaiah) ಮತ್ತು ಡಿ.ಕೆ ಶಿವಕುಮಾರ್(DK Shivakumar)ರನ್ನ ಕಟ್ಟಿ ಹಾಕಲು ಬಿಜೆಪಿ ಹೈಕಮಾಂಡ್ ಭಾರೀ ಚಿಂತನೆ ನಡೆಸಿದೆ. ಇಬ್ಬರ ವಿರುದ್ಧ ಪ್ರಬಲ ನಾಯಕರನ್ನ ಕಣಕ್ಕಿಳಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಸ್ಪರ್ಧಿಸುವ ವರುಣಾ ಕ್ಷೇತ್ರದಿಂದ ವಸತಿ ಸಚಿವ ವಿ.ಸೋಮಣ್ಣ ಹಾಗೂ ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಕ್ಷೇತ್ರದಿಂದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸುವ ಸಂಬಂಧ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಗಂಭೀರ ಚರ್ಚೆಯಾಗಿದೆ ಎನ್ನಲಾಗಿದೆ. ಅಶೋಕ್ ಹಾಗೂ ಸೋಮಣ್ಣ ಅವರಿಗೆ ತಮ್ಮ ಮೂಲ ಕ್ಷೇತ್ರದ ಜೊತೆ ಈ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಒತ್ತಡ ಹೇರುತ್ತಿದ್ಯಂತೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಹಾಕಿದರೆ ಅವರು ಸ್ವಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಬೇರೆ ಕ್ಷೇತ್ರದಲ್ಲಿ ಮತದಾರರನ್ನ ಸೆಳೆಯಬಹುದು ಎನ್ನುವುದು ಬಿಜೆಪಿ ಹೈಕಮಾಂಡ್ನ ತಂತ್ರವಾಗಿದೆ. ಆದ್ರೆ, ಇದಕ್ಕೆ ಅಶೋಕ್ ಹಾಗೂ ಸೋಮಣ್ಣ ಒಪ್ಪುತ್ತಿಲ್ಲ ಎನ್ನಲಾಗಿದೆ.
ಈ ತಂತ್ರಗಾರಿಕೆಯ ಬಗ್ಗೆ ಶೃಂಗೇರಿಯಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ರಾಜಕಾರಣದಲ್ಲಿ ಯಾರೇ ಬಂದರೂ ಎದುರಿಸಬೇಕು, ಹೋರಾಡಬೇಕು. ರಾಜಕಾರಣದಲ್ಲಿ ಯಾರು ಯಾರ ವಿರುದ್ಧವಾದರೂ ನಿಲ್ಲಬಹುದು. ಅಶೋಕ್ ಸ್ಪರ್ಧೆ ಮಾಡುವುದಾದರೆ ಅವರಿಗೆ ನನ್ನ ಸ್ವಾಗತವಿದೆ. ಬಿಜೆಪಿಯವರ ಈ ದೊಡ್ಡ ನಿರ್ಧಾರವನ್ನು ನಾನು ಸ್ವಾಗತಿಸುವೆ ಎಂದಿದ್ದಾರೆ.