ಪಕ್ಷ ಸಂಘಟನೆಗಷ್ಟೇ ನೆನಪಾಗುತ್ತಾರಾ ಬಿಎಸ್ ವೈ? – ‘ಆಪರೇಷನ್ ಹಸ್ತ’ ಶಮನಕ್ಕೆ ‘ರಾಜಾಹುಲಿ’ಯನ್ನ ಅಖಾಡಕ್ಕಿಳಿಸಿದ ಬಿಜೆಪಿ 

ಪಕ್ಷ ಸಂಘಟನೆಗಷ್ಟೇ ನೆನಪಾಗುತ್ತಾರಾ ಬಿಎಸ್ ವೈ? – ‘ಆಪರೇಷನ್ ಹಸ್ತ’ ಶಮನಕ್ಕೆ ‘ರಾಜಾಹುಲಿ’ಯನ್ನ ಅಖಾಡಕ್ಕಿಳಿಸಿದ ಬಿಜೆಪಿ 

ಬಿ.ಎಸ್ ಯಡಿಯೂರಪ್ಪ. ರಾಜ್ಯ ರಾಜಕಾರಣದ ಪ್ರಬಲ ನಾಯಕ. ರಾಜಾಹುಲಿ ಎಂದೇ ಜನಪ್ರಿಯವಾಗಿರುವ ರಾಜಕಾರಣಿ. ಶಿಕಾರಿಪುರ ಎಂದಾಕ್ಷಣ ನೆನಪಾಗುವ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ಕರ್ನಾಟಕ ಕಂಡ ಒಬ್ಬ ಉತ್ತಮ ಆಡಳಿತಗಾರ. ಬಡವರು, ದಲಿತರು, ರೈತರ ಪರ ಹೋರಾಟ ನಡೆಸಿ ಅಸಾಧಾರಣ ನಾಯಕನಾಗಿ ಬೆಳೆದ ಬಿಎಸ್ ವೈ ನಾಲ್ಕು ಬಾರಿ ಸಿಎಂ ಆಗಿ ಆಡಳಿತ ನಡೆಸಿದ್ದಾರೆ. ಆದರೆ ಇತ್ತೀಚೆಗೆ ಬಿಜೆಪಿಯಲ್ಲಿ ಬಿಎಸ್ ವೈರನ್ನ ಕಡೆಗಣಿಸಲಾಗಿದೆ ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಸಂಕಟ ಬಂದಾಗ ವೆಂಕಟ ರಮಣ ಅನ್ನೋ ಹಾಗೇ ಬಿಜೆಪಿಗೆ ಬಿಎಸ್ ವೈ ಮತ್ತೆ ನೆನಪಾಗಿದ್ದಾರೆ.

ಇದನ್ನೂ ಓದಿ  : ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಅಗ್ನಿ ಅವಘಡ ಪ್ರಕರಣ -ಗಾಯಗೊಂಡಿದ್ದ ಮುಖ್ಯ ಎಂಜಿನಿಯರ್ ಶಿವಕುಮಾರ್ ಸ್ಥಿತಿ ಗಂಭೀರ

ಕರ್ನಾಟಕದ ಬಿಜೆಪಿ ಪಾಲಿಗೆ ಬಿ.ಎಸ್​​​​ ಯಡಿಯೂರಪ್ಪ ಮತ್ತೆ ಅನಿವಾರ್ಯವಾದರೇ ಎಂಬ ಪ್ರಶ್ನೆ ಉಂಟಾಗಿದೆ.  ಪ್ರತಿಪಕ್ಷ ನಾಯಕನ ಆಯ್ಕೆಯೂ ಆಗದ, ರಾಜ್ಯ ಘಟಕದ ಅಧ್ಯಕ್ಷರ ಸ್ಥಾನವೂ ಅನಿಶ್ಚಿತತೆಯಲ್ಲಿರುವ ಈ ಹೊತ್ತಿನಲ್ಲಿ ಯಡಿಯೂರಪ್ಪ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಪ್ರಮುಖ ವಲಸೆ ನಾಯಕರು ಪಕ್ಷ ತ್ಯಜಿಸದಂತೆ ನೋಡಿಕೊಳ್ಳುವ ಹೊಣೆಯನ್ನು ಅವರೇ ಹೊತ್ತುಕೊಂಡಂತೆ ಕಾಣುತ್ತಿದೆ. ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಈ ಹಿಂದೆ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ಪ್ರಭಾವಿ ನಾಯಕರನ್ನು ಸೆಳೆಯುವ ಸುಳಿವು ನೀಡಿದೆ. ಉಪ ಮುಖ್ಯಮಂತ್ರಿ, ಕಾಂಗ್ರೆಸ್​​ನ ಟ್ರಬಲ್ ಶೂಟರ್ ಎಂದೇ ಪ್ರಸಿದ್ಧರಾದ ಡಿ.ಕೆ ಶಿವಕುಮಾರ್ ಅದಕ್ಕೆ ಈಗಾಗಲೇ ವೇದಿಕೆ ಸಿದ್ಧಪಡಿಸಿಟ್ಟಿದ್ದಾರೆ. ಎಸ್​​​ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್, ಭೈರತಿ ಬಸವರಾಜ್, ಮನಿರತ್ನ ಅವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹ ದಟ್ಟವಾಗಿದೆ. ಈ ಮಧ್ಯೆ, ಕೆಲವರ ಪುನರ್ ಸೇರ್ಪಡೆ ಬಗ್ಗೆ ಕಾಂಗ್ರೆಸ್​​​ನಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಈ ಬೆಳವಣಿಗೆ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಯನ್ನು ತುಸು ಇಕ್ಕಟ್ಟಿಗೆ ಸಿಲುಕಿಸಿದೆ. ಅತ್ತ ಕಾಂಗ್ರೆಸ್ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು, ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾದ ಸಂದರ್ಭದಲ್ಲಿ ಬಿಜೆಪಿಗೆ ‘ಆಪರೇಷನ್​ ಹಸ್ತ’ದ ಬಿಸಿ ತಟ್ಟಿದೆ. ಇಂಥದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಮುತ್ಸದ್ದಿತನ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಶುಕ್ರವಾರ ರಾತ್ರಿ ಪಕ್ಷದ ನಾಯಕರ ಸಭೆ ನಡೆಸಿದ ಯಡಿಯೂರಪ್ಪ, ಅತೃಪ್ತ ನಾಯಕರ ಮುನಿಸು ಶಮನ ಮಾಡುವ ಹೊಣೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ಗೆ ವಹಿಸಿದ್ದಾರೆ. ಎಸ್​ಟಿ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಜತೆ ಮಾತನಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಇಷ್ಟೇ ಅಲ್ಲದೆ, ಲೋಕಸಭೆ ಚುನಾವಣೆ ದೃಷ್ಟಿಯಿಂದ ನಾವು ಹೆಚ್ಚು ಸಂಘಟಿತರಾಗಿರಬೇಕಿದೆ. ಸ್ಥಳೀಯ ಮುಖಂಡರ ಜೊತೆ ಮಾತುಕತೆ ಮಾಡಿ ಸಮನ್ವಯ ಸಾಧಿಸಿ. ಎಲ್ಲರೂ ಒಟ್ಟಾಗಿ ಹೋಗುವಂತೆ ನೋಡಿಕೊಳ್ಳಿ ಎಂದು ಸಭೆಯಲ್ಲಿ ಬೊಮ್ಮಾಯಿ ಸೇರಿದಂತೆ ಪಕ್ಷದ ನಾಯಕರಿಗೆ ಸಂದೇಶ ನೀಡಿದ್ದಾರೆ.

ಯಡಿಯೂರಪ್ಪ ಅವರು ದಿಢೀರ್ ಆಗಿ ಪಕ್ಷದ ನಾಯಕರ ಸಭೆ ನಡೆಸಿ ಡ್ಯಾಮೇಜ್ ಕಂಟ್ರೋಲ್​ಗೆ ಇಳಿದಿರುವುದು ಕುತೂಹಲ ಮೂಡಿಸಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬಗ್ಗೆ ಈಗಾಗಲೇ ಪಕ್ಷದ ಆಂತರಿಕ ವಲಯದಲ್ಲಿ ಹಲವೆಡೆ ಆಕ್ಷೇಪಗಳಿರುವುದು, ಬದಲಾವಣೆಯ ಕೂಗೂ ಕೇಳಿಬಂದಿದ್ದು ಗುಟ್ಟಾಗಿ ಉಳಿದಿಲ್ಲ. ಪ್ರತಿಪಕ್ಷದ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ಇಂಥ ಸಂದರ್ಭದಲ್ಲಿ ಪ್ರಮುಖ ವಿಷಯದ ಬಗ್ಗೆ ಚರ್ಚಿಸಲು ಸಭೆ ನಡೆಸಿ, ಪಕ್ಷದ ಸಂಘಟನೆ ದೃಷ್ಟಿಯಿಂದ ಮಹತ್ವದ ಸಲಹೆ ಸೂಚನೆಗಳನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಅವರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹೌದಾದರೂ ರಾಜ್ಯ ವಿದ್ಯಮಾನಗಳ ವಿಚಾರಕ್ಕೆ ಬಂದಾಗ ರಾಜ್ಯ ಘಟಕದ ಅಧ್ಯಕ್ಷರೋ, ಶಾಸಕಾಂಗ ಪಕ್ಷದ ನಾಯಕರೋ ಮಾಡಬೇಕಿದ್ದ ಕೆಲಸವನ್ನು ಅವರು ಮಾಡಿರುವುದು ಸ್ಪಷ್ಟ. ಇದರೊಂದಿಗೆ, ರಾಜ್ಯ ಬಿಜೆಪಿಯಲ್ಲಿ ಅವರಿನ್ನೂ ನಿರ್ಣಾಯಕರೇ ಎಂಬುದನ್ನು ಬಿಜೆಪಿ ಪ್ರಮುಖರು ಮತ್ತೊಮ್ಮೆ ಒಪ್ಪಿಕೊಂಡಂತಾಗಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

suddiyaana