ಮೋದಿ ಮುಂದೆ ರಾಜ್ಯದ ಸಮಸ್ಯೆ ಹೇಳಲಾಗದ ಮುಖ್ಯಮಂತ್ರಿಯನ್ನು ಹುಲಿಗೆ ಹೋಲಿಸಬೇಕಾ?– ಸಿದ್ದು ಪ್ರಶ್ನೆ

ಮೋದಿ ಮುಂದೆ ರಾಜ್ಯದ ಸಮಸ್ಯೆ ಹೇಳಲಾಗದ ಮುಖ್ಯಮಂತ್ರಿಯನ್ನು ಹುಲಿಗೆ ಹೋಲಿಸಬೇಕಾ?– ಸಿದ್ದು ಪ್ರಶ್ನೆ

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರನ್ನು ನಾಯಿಮರಿ ಎಂದು ಕರೆದಿದ್ದನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.  ಮೋದಿಯವರ ಎದುರು ನಾಯಿಮರಿಗಲ್ಲದೆ ಹುಲಿಗೆ ಹೋಲಿಸಬೇಕಾ ಎಂದೂ ಮರುಪ್ರಶ್ನೆ ಎಸೆದಿದ್ದಾರೆ. ಪ್ರಧಾನಿ ಮೋದಿಯವರ ಎದುರು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನಾಯಿಮರಿಯಂತೆ ಆಡ್ತಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರ ಟೀಕಾ ಪ್ರಹಾರಕ್ಕೆ ಟ್ವಿಟರ್‌ ಮೂಲಕ ತಿರುಗೇಟು ಕೊಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇಂದು ಸರಣಿ ಟ್ವೀಟ್‌ ಮೂಲಕ ಬೊಮ್ಮಾಯಿ ನಡೆಯನ್ನು ಪ್ರಶ್ನಿಸುತ್ತಲೇ, ಬೊಮ್ಮಾಯಿ ಜೊತೆಗಿನ ಗೆಳೆತನವನ್ನು ಮುಂದಿಟ್ಟು, ಅವರೇನೂ ಬೇಸರಪಟ್ಟುಕೊಂಡಿರೋದಿಲ್ಲ ಎಂದಿದ್ದಾರೆ.

ಬೊಮ್ಮಾಯಿ ರಾಜ್ಯದ ವಿಷಯವನ್ನು ಮೋದಿಯವರ ಎದುರು ಮಾತಾಡಲು ಗಡ ಗಡ ನಡುಗ್ತಾರೆ.. ನಾಯಿ ಮರಿಯಂತೆ ಆಡ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಸಿಎಂ ಬೊಮ್ಮಾಯಿ, ತಾವು ನಾಯಿಯಲ್ಲಿರುವ ನಿಯತ್ತಿನ ಗುಣ ಹೊಂದಿದ್ದು ರಾಜ್ಯದ ಜನರಿಗೆ ನಿಯತ್ತಿನಿಂದ ಕೆಲಸ ಮಾಡುತ್ತಿದ್ದೇನೆ ಎಂದಿದ್ದರು. ಆದ್ರೆ ಟ್ವೀಟ್‌ನಲ್ಲಿ ಸಿದ್ದರಾಮಯ್ಯ, ‘ನಾಯಿ ಸ್ವಾಮಿ ನಿಷ್ಠೆಗೆ ಹೆಸರಾದರೆ, ನಾಯಿ‌ಮರಿ ಪುಕ್ಕಲು ಸ್ವಭಾವಕ್ಕೆ ಕುಖ್ಯಾತಿ‌ ಪಡೆದಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ @narendramodi ಅವರ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿ @BSBommai ಅವರನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ? ನಾಯಿ ಮರಿ, ಬೆಕ್ಕಿನ ಮರಿಗಳಿಗೆ ಹೋಲಿಸಬೇಕಲ್ಲಾ? ಎಂದು ಪ್ರಶ್ನಿಸಿದ್ದಾರೆ.  ಅಲ್ಲದೆ, ‘ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು @CMofKarnataka ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತಾ ಇರಲಿಲ್ಲ’. ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ :  ವಿಧಾನಸೌಧದಲ್ಲಿ ಲಕ್ಷ ಲಕ್ಷ ಹಣ ಪತ್ತೆ – ಸರ್ಕಾರದ ವಿರುದ್ಧ ಸಿದ್ದು, ಡಿಕೆಶಿ ಗರಂ

ಇನ್ನು ತನ್ನನ್ನು ಟಗರು ಎಂದು ಕರೆಯುತ್ತಿರುವುದರ ಬಗ್ಗೆಯೂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ. ‘ಟಿವಿ ಚಾನೆಲ್‌ನವರು ಪ್ರತಿದಿನ ನನ್ನನ್ನು ‘ಟಗರು’ ‘ಟಗರು’ ಎಂದು ಹಾಡು ಕಟ್ಟಿ ತೋರಿಸುತ್ತಾರೆ. ಟಗರು ಗುಮ್ಮುತ್ತೆ, ನಾನು ಯಾರಿಗೆ ಗುಮ್ಮಿದ್ದೇನೆ? ನಾನೂ ಅವಮಾನ ಮಾಡಿದ್ದಾರೆ ಎಂದು ಕೋಪಮಾಡಿಕೊಳ್ಳಬಹುದಲ್ಲಾ?’ ಎಂದಿದ್ದಾರೆ.

ಸರಣಿ ಟ್ವೀಟ್‌ ಮೂಲಕ ಸಿದ್ದರಾಮಯ್ಯ, ಬಿಜೆಿಗೆ ತಿರುಗೇಟು ಕೊಡುವ ಕೆಲಸ ಮಾಡಿದ್ದಾರೆ. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಾಯಿ ಪದದ ಸಮರ ಜೋರಾಗಿಯೇ ಸಾಗುತ್ತಿದೆ. ಬಿಜೆಪಿ ನಾಯಕರೆಲ್ಲಾ ಒಟ್ಟಾಗಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದು, ಸಿಎಂ ವಿರುದ್ಧ ಇಂತಹ ಪದ ಬಳಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರುತ್ತಿದ್ದಾರೆ.

 

suddiyaana