‘ಬಜರಂಗಿ’ ಸಂಘರ್ಷ – ಕಾಂಗ್ರೆಸ್ ಪ್ರಣಾಳಿಕೆಯನ್ನು ವೇದಿಕೆಯಲ್ಲೇ ಸುಟ್ಟು ಹಾಕಿದ ಈಶ್ವರಪ್ಪ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಭರವಸೆ ನೀಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಕಿಡಿ ಕಾರಿದ್ದು, ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆ ಮೊಹ್ಮದ್ ಅಲಿ ಜಿನ್ನಾ ಪ್ರಣಾಳಿಕೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ವೇದಿಕೆಯಲ್ಲೇ ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟು ಹಾಕಿದ್ದಾರೆ.
ಚುನಾವಣಾ ಪ್ರಚಾರದ ನಿಮಿತ್ತ ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಈಶ್ವರಪ್ಪ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಬಜರಂಗದಳ ಯುವಜನರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ. ಗೋಹತ್ಯೆ ತಡೆಯಲು ಮುಂದಾಗಿರುವ ಬಜರಂಗದಳ ಬ್ಯಾನ್ ಮಾಡ್ತಿರಾ? ಕಾಂಗ್ರೆಸ್ನದ್ದು ರಾಷ್ಟ್ರ ದ್ರೋಹಿ ಪ್ರಣಾಳಿಕೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ನಿಮ್ಮ ಎದುರೇ ಸುಟ್ಟು ಹಾಕುತ್ತಿದ್ದೇನೆ. ಕಾಂಗ್ರೆಸ್ ಬರೀ ಸುಳ್ಳಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಈ ಪ್ರಣಾಳಿಕೆಯಿಂದ ಯಾವ ಪ್ರಯೋಜನ ಇಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ಕಾಂಗ್ರೆಸ್ ಗೆ ಬಜರಂಗದಳ ಠಕ್ಕರ್ – ನಾಳೆ ಏಕಕಾಲಕ್ಕೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ
ಕಾಂಗ್ರೆಸ್ನ ಮನಸ್ಥಿತಿ ರಾಜ್ಯದ ಜನರಿಗೆ ಗೊತ್ತಾಗಿದೆ. ಎಲ್ಲಾ ಮುಸ್ಲಿಮರು ಒಂದೇ ಥರ ಅಲ್ಲ. ಕೆಲ ಮುಸ್ಲಿಮರು ಕಾಂಗ್ರೆಸ್ನ ವಿರುದ್ಧವಾಗಿದ್ದಾರೆ. ಇದು ಮುಸ್ಲಿಂ ಲೀಗ್ನ ಪ್ರಣಾಳಿಕೆ, ಮಹ್ಮದ್ ಅಲಿ ಜಿನ್ನಾನ ಪ್ರಣಾಳಿಕೆಯಾಗಿದೆ. ಬಜರಂಗದಳ ಬ್ಯಾನ್ ಮಾಡಿ ಮುಸ್ಲಿಮರ ತುಷ್ಟೀಕರಣ ಮಾಡಲು ಕಾಂಗ್ರೆಸ್ ಹೊರಟಿದೆ. ಬಜರಂಗದಳ ದಳ ಬ್ಯಾನ್ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ಹಿಂದೂಗಳಿಗೆ ನೋವಾಗಿದೆ ಎಂದ ಅವರು, ಎಲ್ಲಾ ರಾಷ್ಟ್ರಭಕ್ತ ನಾಗರಿಕರು ರಾಷ್ಟ್ರದ್ರೋಹಿ ಪ್ರಣಾಳಿಕೆ ಬಹಿಷ್ಕರಿಸಲು ಮನವಿ ಮಾಡಿದರು.
ಬಜರಂಗದಳ ಅಂದರೆ ಆಂಜನೇಯ. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದು ರಾವಣ. ಹೀಗಾಗಿ ಆಂಜನೇಯ ಬಾಲಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಕಾಂಗ್ರೆಸ್ ದೇಶದೆಲ್ಲೆಡೆ ಸರ್ವನಾಶವಾಗಲಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನ ಕೂಡ ಕಳೆದುಕೊಳ್ಳಲಿದೆ ಎಂದು ಗುಡುಗಿದರು.
ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾಕೆ ಎನ್ನುವುದೇ ಕಾಂಗ್ರೆಸ್ಗೆ ಗೊತ್ತಿಲ್ಲ. ಧರ್ಮ, ಜಾತಿ ವಿಚಾರದಲ್ಲಿ ವಿಷಬೀಜ ಬಿತ್ತುವ ಸಂಘಟನೆಗಳ ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಒಕ್ಕಲಿಗರು ನನ್ನ ಹಿಂದೆ ಇದ್ದಾರೆ ಹಾಗಾಗಿ ನಾನು ಸಿಎಂ ಆಗ್ತಿನಿ ಅಂತಾ ಡಿಕೆಶಿ ಹೇಳ್ತಾರೆ. ಹಿಂದುಳಿದ ಸಮಾಜ ನನ್ನ ಹಿಂದೆ ಇದೆ ಇದರಿಂದ ನಾನು ಸಿಎಂ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಸಮಾಜಗಳನ್ನು ಒಟ್ಟಿಗೆ ತಗೊಂಡು ಹೋಗುವ ಕೆಲಸ ಮಾಡಬೇಕು. ಆದರೆ ಜಾತಿ ಹೆಸರಲ್ಲಿ ಕಾಂಗ್ರೆಸ್ ಪಕ್ಷ ವಿಷಬೀಜ ಬಿತ್ತಿದೆ ಎಂದು ಟೀಕಿಸಿದರು.