400 ಕಾರಿನ ಬೆಂಗಾವಲು ಪಡೆ ಜೊತೆ 300 ಕಿ.ಮೀ. ಪ್ರಯಾಣ – ಸಿನಿಮಾ ಸ್ಟೈಲ್‌ ನಲ್ಲಿ ಕಾಂಗ್ರೆಸ್‌ ಸೇರಿದ ಬಿಜೆಪಿ ನಾಯಕ

400 ಕಾರಿನ ಬೆಂಗಾವಲು ಪಡೆ ಜೊತೆ 300 ಕಿ.ಮೀ. ಪ್ರಯಾಣ – ಸಿನಿಮಾ ಸ್ಟೈಲ್‌ ನಲ್ಲಿ ಕಾಂಗ್ರೆಸ್‌ ಸೇರಿದ ಬಿಜೆಪಿ ನಾಯಕ

ಭೋಪಾಲ್:‌ ಕರ್ನಾಟಕ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಇದೀಗ ಮಧ್ಯಪ್ರದೇಶದತ್ತ ತನ್ನ ಚಿತ್ತ ಹರಿಸಿದೆ. ಚುನಾವಣೆಗೆ ಕೆಲ ತಿಂಗಳು ಬಾಕಿಯಿರುವಂತೆಯೇ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿದೆ. ಮಧ್ಯಪ್ರದೇಶ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೇಂದ್ರ ಸಚಿವ ಜ್ಯೋತಿಯಾಧಿತ್ಯ ಸಿಂಧಿಯಾ ಅವರ ಆಪ್ತ ಬೈಜನಾಥ್ ಸಿಂಗ್ ಯಾದವ್ ಕೇಸರಿ ಪಕ್ಷ ತೊರೆದು, ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಇದ್ರಲ್ಲೇನು ವಿಶೇಷ ಅಂತೀರಾ..? ಅವರು ಸೇರ್ಪಡೆಯಾಗಿರುವ ರೀತಿಯೇ ವಿಶಿಷ್ಟ. ಮಧ್ಯಪ್ರದೇಶದ ಶಿವಪುರಿಯಿಂದ ಭೋಪಾಲ್‌ಗೆ ಸುಮಾರು 300 ಕಿ.ಮೀ ಪ್ರಯಾಣ ಮಾಡಿದ್ದಾರೆ. ಅವರಷ್ಟೇ ಅಲ್ಲ, ಜತೆಗೆ  400 ಕಾರುಗಳ ಬೆಂಗಾವಲು ಪಡೆ ಸೈರೆನ್‌ ಹೊಡೆದುಕೊಂಡು ಹೋಗಿ ಪಕ್ಷಕ್ಕೆ ಸೇರಿದ್ದಾರೆ!

ಇದನ್ನೂ ಓದಿ: 21 ಕಿ.ಮೀ ಓಡಿಕೊಂಡು ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ! – ಕಾರಣವೇನು ಗೊತ್ತಾ?

ಶಿವಪುರಿಯಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿರುವ ಬೈಜನಾಥ್ ಸಿಂಗ್ ಅವರು 2020 ರ ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯದ ಸಮಯದಲ್ಲಿ ಕಮಲ್ ನಾಥ್ ಸರ್ಕಾರವನ್ನು ಉರುಳಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದ ಸಂದರ್ಭದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಜತೆ ಬಿಜೆಪಿಗೆ ಸೇರಿದ್ದರು. ಈ ದಂಗೆಯ ನೇತೃತ್ವ ವಹಿಸಿದ್ದ ಸಿಂಧಿಯಾ ಈಗ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದಾರೆ. ವಿಧಾನಸಭಾ ಚುನಾವಣೆಗೆ ಬೈಜನಾಥ್ ಸಿಂಗ್ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಟಿಕೆಟ್‌ ಸಿಗುವ ಭರವಸೆ ಇಲ್ಲದ ಕಾರಣ ಅವರು ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಬೈಜನಾಥ್ ಸಿಂಗ್ ತಮ್ಮ ಪಕ್ಷ ಬದಲಾವಣೆಯನ್ನು ಗುರುತಿಸಲು, ಶಿವಪುರಿಯಿಂದ ಭೋಪಾಲ್‌ನಲ್ಲಿರುವ ಕಾಂಗ್ರೆಸ್ ಕಚೇರಿಗೆ ಹೋಗಲು 400  ಕಾರುಗಳ ಬೆಂಗಾವಲು ಪಡೆಯನ್ನು ಕರೆದೊಯ್ದಿದ್ದಾರೆ. ಹಲವಾರು ಕಾರುಗಳು ಸೈರನ್ ಹಾಕಿಕೊಂಡು ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಜನರು ವೀಡಿಯೊಗಳನ್ನು ಚಿತ್ರೀಕರಿಸುವುದು ಮತ್ತು ಕಾರುಗಳಿಗೆ ಕೈ ಬೀಸುವುದು ಕಂಡುಬಂದಿದೆ.

ಇನ್ನೊಂದೆಡೆ, ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಅವರು ಬೈಜನಾಥ್ ಸಿಂಗ್ ಅವರನ್ನು ಪಕ್ಷಕ್ಕೆ ಮರಳಿ ಸ್ವಾಗತಿಸಿದರು. ಶಿವಪುರಿ ಮೂಲದ ಯಾದವ್ ಮತ್ತು 15 ಜನಪದ ಸದಸ್ಯರು ಸೇರಿದಂತೆ ಅವರ ಬೆಂಬಲಿಗರನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಸಾಲು ಸಾಲು ಬೆಂಗಾವಲು ಕಾರುಗಳು ಸೈರನ್ ಹಾಕಿಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಬಿಜೆಪಿ ಕಿಡಿಕಾರಿದೆ. ಕಾನೂನಿನ ಪ್ರಕಾರ, ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಮಾತ್ರ ರಸ್ತೆಯಲ್ಲಿ ಸೈರನ್ ಬಳಸಲು ಅನುಮತಿ ಇದೆ. ಇವುಗಳಲ್ಲಿ ಆಂಬ್ಯುಲೆನ್ಸ್‌, ಅಗ್ನಿಶಾಮಕ ದಳ ಮತ್ತು ಕೆಲವು ಸಂದರ್ಭಗಳಲ್ಲಿ ಪೊಲೀಸರು ಸೇರಿದ್ದಾರೆ. ಸೈರನ್‌ಗಳ ಬಳಕೆ ಕಾಂಗ್ರೆಸ್‌ನ ಊಳಿಗಮಾನ್ಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಕಿಡಿಕಾರಿದೆ.

suddiyaana