ಮಾಜಿ ಸಚಿವ, ಬಿಜೆಪಿ ನಾಯಕ ಡಿಬಿ ಚಂದ್ರೇಗೌಡ ನಿಧನ – ಬೊಮ್ಮಾಯಿ, ಬಿಎಸ್ ವೈ ಸಂತಾಪ

ಮಾಜಿ ಸಚಿವ, ಬಿಜೆಪಿ ನಾಯಕ ಡಿಬಿ ಚಂದ್ರೇಗೌಡ ನಿಧನ – ಬೊಮ್ಮಾಯಿ, ಬಿಎಸ್ ವೈ ಸಂತಾಪ

ಬೆಂಗಳೂರು: ಕರ್ನಾಟಕ ಹಿರಿಯ ರಾಜಕೀಯ ಮುತ್ಸದಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ (87)  ಅವರು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಚಂದ್ರೇಗೌಡ  ಬಳಲುತ್ತಿದ್ದರು. ಸೋಮವಾರ ಮಧ್ಯರಾತ್ರಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದಾರದಹಳ್ಳ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ಅಂತಿಮ‌ ಸಂಸ್ಕಾರ ನೆರವೇರಿಸಲಾಗುವುದು ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ಚಿರತೆ ಕಾಟ! – ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ ರಚಿಸಲು ರಾಜ್ಯ ಸರ್ಕಾರ ಸೂಚನೆ

ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದ ಚಂದ್ರೇಗೌಡ ಅವರು ಬಿಜೆಪಿಯಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು. ಕಾಂಗ್ರೆಸ್ ಕಟ್ಟಾಳಾಗಿದ್ದ ಚಂದ್ರೇಗೌಡ ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದರು. ಮೂರು ಬಾರಿ ಶಾಸಕರು, ಮೂರು ಸಲ ಸಂಸದರು, ಒಮ್ಮೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ  ರಾಜಕೀಯ ಮರು ಹುಟ್ಟು ನೀಡಲು ರಾಜೀನಾಮೆ ನೀಡಿದ್ದರು. ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾ ಗಾಂಧಿ ಸ್ಪರ್ಧೆಗೆ ಚಂದ್ರೇಗೌಡರು ಅವಕಾಶ ಮಾಡಿಕೊಟ್ಟಿದ್ದರು.

ಡಿ.ಬಿ.ಚಂದ್ರೇಗೌಡರು ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆ ಈ ನಾಲ್ಕೂ ಸದನಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಪಟೇಲ್ ಬೈರೇಗೌಡ, ಪುಟ್ಟಮ್ಮನವರ ಪುತ್ರರಾಗಿ 1936 ರ ಆಗಸ್ಟ್ 26 ರಂದು ಜನಿಸಿದ್ದ ಡಿ.ಬಿ.ಚಂದ್ರೇಗೌಡರು ವಕೀಲರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಡಿ.ಬಿ.ಚಂದ್ರೇಗೌಡ ನಿಧನಕ್ಕೆ ವಿವಿಧ ಪಕ್ಷಗಳ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಬೊಮ್ಮಾಯಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದು, ಹಿರಿಯ ರಾಜಕಾರಿಣಿ, ಮಾಜಿ ಸಚಿವರು, ಮಾಜಿ ಸಂಸದರಾದ ಆತ್ಮೀಯ ಶ್ರೀ ಡಿ. ಬಿ. ಚಂದ್ರೇಗೌಡರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ. ಅವರ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಉತ್ತಮ ಸಂಸದೀಯ ಪಟುವಾಗಿ ಅವರು ಹಾಕಿಕೊಟ್ಟ ಮಾರ್ಗ ಯುವ ಪೀಳಿಗೆ ಮಾದರಿಯಾಗಿರುವಂತಹದ್ದು. ಅವರ ಕುಟುಂಬಕ್ಕೆ ಅವರ ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಹಿರಿಯ ನಾಯಕ, ಮಾಜಿ ಸಚಿವ, ರಾಜಕೀಯ ಮುತ್ಸದ್ಧಿ ಶ್ರೀ ಡಿ.ಬಿ.ಚಂದ್ರೇಗೌಡ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಅವರು ಶಾಸಕರಾಗಿ, ಸಂಸದರಾಗಿ, ರಾಜ್ಯಸಭಾ ಸದಸ್ಯರಾಗಿ, ಕಾನೂನು ಸಚಿವರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬದವರಲ್ಲಿ, ಅಭಿಮಾನಿಗಳಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Shwetha M