ಶಿವಾನಂದ ಪಾಟೀಲ್​ ಹೇಳಿಕೆಗೆ ಬಿಜೆಪಿ, ಜೆಡಿಎಸ್‌ ನಾಯಕರ ಆಕ್ರೋಶ – ನನಗೆ ಮದ ಏರಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದ ಸಚಿವ

ಶಿವಾನಂದ ಪಾಟೀಲ್​ ಹೇಳಿಕೆಗೆ ಬಿಜೆಪಿ, ಜೆಡಿಎಸ್‌ ನಾಯಕರ ಆಕ್ರೋಶ – ನನಗೆ ಮದ ಏರಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದ ಸಚಿವ

ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್​​ ಹೇಳಿಕೆಗೆ ಈ ವಿವಾದವೆಬ್ಬಿಸಿದೆ. ಈ ಹೇಳಿಕೆ ವಿರುದ್ಧ ರಾಜ್ಯದಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ, ಜೆಡಿಎಸ್‌ ನಾಯಕರು ಸಚಿವ ಶಿವಾನಂದ ಪಾಟೀಲ್‌ ವಿರುದ್ಧ ಕಿಡಿಕಾರುತ್ತಿದ್ದಾರೆ. ಶಿವಾನಂದ ಅವರ ಹೇಳಿಕೆಯನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಖಂಡಿಸಿದ್ದಾರೆ. ಈ ಸರ್ಕಾರ ರೈತರನ್ನು ಪದೇ ಪದೆ ಅವಮಾನ ಮಾಡುತ್ತಿದೆ. ಸಚಿವ ಶಿವಾನಂದ ಪಾಟೀಲ್ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತೆ. ಶಿವಾನಂದ ಪಾಟೀಲ್​ ರೈತರ ಬಳಿ ಕ್ಷಮೆಯಾಚಿಸಬೇಕು. ಶಿವಾನಂದ ಪಾಟೀಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಾಲಮನ್ನ ಆಸೆಗೆ ರೈತರು ಬರಗಾಲಕ್ಕೆ ಕಾಯುತ್ತಾರೆ! – ಶಿವಾನಂದ್ ಪಾಟೀಲ್ ವಿವಾದಾತ್ಮಕ ಹೇಳಿಕೆ

ಇನ್ನು ಜೆಡಿಎಸ್‌ ನಾಯಕ ಕುಮಾರಸ್ವಾಮಿ ಕೂಡ ಶಿವಾನಂದ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಸಚಿವ ಶಿವಾನಂದ್ ಪಾಟೀಲ್ ಅವರು ರೈತರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಖಂಡಿತಾ ಸರಿಯಲ್ಲ. ಸಚಿವರು ಇಂತಹ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ, ಸಂಯಮದಿಂದ ಮಾತನಾಡಬೇಕು. ನಾನು ಕೃಷಿಸಾಲ ಮನ್ನಾ ಮಾಡುವ ಮುನ್ನ ರಾಜ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯಾಕಾಂಡ ನೆನಪು ಮಾಡಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ. ರೈತ ಕೇಳುತ್ತಿರುವುದು ತನ್ನ ಹಕ್ಕನ್ನಷ್ಟೇ ಭಿಕ್ಷೆಯನ್ನಲ್ಲ. ಸಚಿವರು ಬೇಷರತ್ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಶಿವಾನಂದ ಪಾಟೀಲ್‌!

ಸಚಿವ ಶಿವಾನಂದ್ ಪಾಟೀಲ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅವರು ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ನನಗೆ ಮದ ಏರಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಹೇಳುವ ಮೂಲಕ ಸಚಿವರು ಪರೋಕ್ಷವಾಗಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

ನಾನು ರೈತರ ವಿರೋಧಿ ಅಲ್ಲ, ರೈತರ ವಿರೋಧವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮೂರು ವರ್ಷಕ್ಕೊಮೆ ರೈತರ ಬೆಳೆಗಳಿಗೆ ಬೆಲೆ ಬರುತ್ತದೆ. ಉಳಿದ ಎರಡು ಬೆಲೆ ಇಲ್ಲದೆ ಕಂಗಾಲಾಗಿರುತ್ತಾರೆ. ಹಾಗಾಗಿ ರೈತರು ಸಾಲಮನ್ನಾ ಆಗಲಿ ಎಂದು ಆಶಯ ವ್ಯಕ್ತಪಡಿಸುತ್ತಾರೆ ಎಂದಿದ್ದೇನೆ ಅಂತಾ ಹೇಳಿದರು.

ಇತ್ತೀಚೆಗೆ ಕೇಂದ್ರದ ಯೋಜನೆಗಳು ರೈತರಿಗೆ ಮುಳುವಾಗಿವೆ. ನನಗೆ ಮದ ಏರಿದೆ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ ಇದೆಲ್ಲ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು. ಅಲ್ಲದೆ ಬಿಜೆಪಿ ನಾಯಕರಿಗೆ ರೈತರ ಮೇಲೆ ಕರುಣೆ ಇದ್ದರೆ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಾಯಿಸಲಿ. ವಿರೋಧ ಪಕ್ಷದ ನಾಯಕರು ರೈತರ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಗಮನಕ್ಕೆ ತರಲಿ ಎಂದು ಇದೇ ವೇಳೆ ಶಿವಾನಂದ್ ಪಾಟೀಲ್ ಒತ್ತಾಯಿಸಿದರು.

ಸಚಿವರು ಹೇಳಿದ್ದೇನು..?

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿರುವ ಸಚಿವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಹೇಳಿದ್ದಾರೆ. ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜನೂ ಕೊಟ್ಟರು, ಗೊಬ್ಬರನೂ ಕೊಟ್ಟರು. ಇನ್ನೂ ರೈತರಿಗೆ ಏನಪ್ಪಾ ಅಂದ್ರೆ ಒಂದು ಆಸೆ ಇರುತ್ತೆ, ಮಗನ್ ಮ್ಯಾಲ ಮ್ಯಾಲ ಬರಗಾಲ ಬೀಳಲಿ ಅಂತ ಹೇಳಿ. ಯಾಕಂದ್ರೆ ಸಾಲ ಮನ್ನಾ ಆಗುತ್ತೆ ಅಂತಾ. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದರು.

ಸಚಿವರ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ರೈತರ ಬಗ್ಗೆ ಈ ರೀತಿಯಾಗಿ ಹೇಳಿಕೆ ಕೊಟ್ಟಿರುವುದನ್ನು ಖಂಡಿಸುವುದಾಗಿ ಬಿಜೆಪಿ ನಾಯಕರು ವಾಗ್ದಾಳಿಗಳನ್ನು ನಡೆಸಿದ್ದಾರೆ.

Shwetha M