ಮೈಸೂರಿನಲ್ಲಿ ಹೊಸ ಮುಖಕ್ಕೆ ಚಾನ್ಸ್ ಕೊಡುತ್ತಾ ಬಿಜೆಪಿ, ಜೆಡಿಎಸ್? – ಹೊಸ ಪ್ರಯೋಗಕ್ಕೆ ಮೈತ್ರಿ ಪ್ಲ್ಯಾನ್?
ಕಮಲದ ಚಿಹ್ನೆಯಡಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಮೈಸೂರಿನಲ್ಲಿ ಹೊಸ ಪ್ರಯೋಗಕ್ಕೆ ದೋಸ್ತಿ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ. ಮೈಸೂರು-ಕೊಡಗು ಕ್ಷೇತ್ರದಿಂದ ಸಾರಾ ಮಹೇಶ್ ಅವರನ್ನು ಬಿಜೆಪಿ ಚಿಹ್ನೆಯಡಿ ಕಣಕ್ಕೆ ಇಳಿಸಲು ತಯಾರಿ ನಡೆದಿದೆಯಂತೆ. ಈ ಸಂಬಂಧ ಬಿ.ಎಸ್ ಯಡಿಯೂರಪ್ಪ ಅವರ ಸಲಹೆಯೊಂದಿಗೆ ಅಮಿತ್ ಶಾ ಜೊತೆಗೆ ಹೆಚ್.ಡಿ ಕುಮಾರಸ್ವಾಮಿ ಸಮಾಲೋಚನೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..?- ಮಂಡ್ಯದಲ್ಲಿ ಸ್ಪರ್ಧೆ ಖಂಡಿತಾ ಎಂದು ಹಠ ಮಾಡಿದ್ಯಾಕೆ ಸಂಸದೆ
ಮಂಡ್ಯ ಕ್ಷೇತ್ರವನ್ನು ಸುಮಲತಾ ಅವರಿಗೆ ಬಿಟ್ಟು ಕೊಟ್ಟರೆ ಮೈಸೂರು ಕ್ಷೇತ್ರಕ್ಕೆ ಜೆಡಿಎಸ್ ಬೇಡಿಕೆ ಇಡಲಿದೆ. ಹೆಚ್.ಡಿ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಾ.ರಾ ಮಹೇಶ್ ಬಿಜೆಪಿ ಪಕ್ಷದಿಂದ ಬಂದಿರುವವರು. ಕೊಡಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಹೊಸ ಮುಖಕ್ಕೆ ಅವಕಾಶ ಕೊಟ್ಟರೆ ಸಿಎಂ ತವರು ಜಿಲ್ಲೆಯಲ್ಲಿ ಗೆಲ್ಲಲೇಬೇಕು ಎಂಬ ಉದ್ದೇಶದೊಂದಿಗೆ ಚಿಂತನೆ ನಡೆಸಿದ್ದಾರಂತೆ. ಮಂಡ್ಯ, ಮೈಸೂರು ಒಂದು ಕಡೆಯಾದರೆ ಬೆಂಗಳೂರು ಗ್ರಾಮಾಂತರದಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅಳಿಯ ಡಾ.ಮಂಜುನಾಥ್ ಅವರನ್ನು ಬಿಜೆಪಿ ಚಿಹ್ನೆಯಡಿ ಸ್ಪರ್ಧೆ ನಡೆಸುವ ಸಾಧ್ಯತೆ ಇದೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣರನ್ನ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆಗೆ ಇಳಿಸುವ ನಿರೀಕ್ಷೆ ಇದೆ. ಆದರೆ ಇದಕ್ಕೆ ಸೋಮಣ್ಣ ಸುತಾರಾಂ ಒಪ್ಪಿಗೆ ನೀಡಿಲ್ಲ.
ಬಿಜೆಪಿ ಹಾಗೂ ಜೆಡಿಎಸ್ ಇಂಥಾದ್ದೊಂದು ಚಿಂತನೆ ನಡೆಸಲು ಕಾರಣವೂ ಇದೆ. ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಲೋಕಸಭೆಗೆ ಮೈತ್ರಿ ಮಾಡಿಕೊಂಡಿದ್ರೂ 28 ಕ್ಷೇತ್ರಗಳ ಪೈಕಿ ಗೆದ್ದಿದ್ದು ತಲಾ ಒಂದೊಂದು ಕ್ಷೇತ್ರ ಮಾತ್ರ. ಎರಡೂ ಪಕ್ಷಗಳ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯ ಬಿಜೆಪಿಗೆ ಪ್ಲಸ್ ಆಗಿತ್ತು. ಆದ್ರೆ ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನ ಬಿಜೆಪಿ ಚಿಹ್ನೆಯಡಿ, ಬಿಜೆಪಿ ಅಭ್ಯರ್ಥಿಯನ್ನ ಜೆಡಿಎಸ್ ಚಿಹ್ನೆಯಡಿ ನಿಲ್ಲಿಸೋದ್ರಿಂದ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಬಹುದು. ಅಂದ್ರೆ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಅಭ್ಯರ್ಥಿ ಹಾಗೂ ಚಿಹ್ನೆ ಮುಖ್ಯವಾಗುತ್ತೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನ ಸೆಳೆಯಬಹುದು ಅನ್ನೋ ಪ್ಲ್ಯಾನ್ನಲ್ಲಿದ್ದಾರೆ. ಹೀಗಾಗಿ ದಿನಕ್ಕೊಂದು ಬೆಳವಣಿಗೆಗಳ ನಡುವೆ ಮಂಡ್ಯ ಕ್ಷೇತ್ರದ ಅಂತಿಮ ಚಿತ್ರಣ ಏನಾಗಿರಲಿದೆ, ಬಿಜೆಪಿ ಜೆಡಿಎಸ್ ಮೈತ್ರಿ ಕಥೆ ಏನು ಅನ್ನೋದು ತೀವ್ರ ಕುತೂಹಲ ಮೂಡಿಸುತ್ತಿದೆ.