ಇಸ್ರೇಲ್ ಪರ ಬಿಜೆಪಿ.. ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತ ಕಾಂಗ್ರೆಸ್ – ಚರ್ಚೆಗೆ ಗ್ರಾಸವಾಯ್ತು ಪಕ್ಷಗಳ ಭಿನ್ನ ನಿಲುವು
ಮಕ್ಕಳು ಅನ್ನೋ ಮಮಕಾರ ಇಲ್ಲ. ಮಹಿಳೆಯರು ಅನ್ನೋ ಮಾನವೀಯತೆ ಇಲ್ಲ. ಮನುಷ್ಯತ್ವವನ್ನೇ ಮರೆತಿರುವ ರಕ್ಕಸರು ಮಾರಣಹೋಮ ನಡೆಸುತ್ತಿದ್ದಾರೆ. ಗಗನಚುಂಬಿ ಕಟ್ಟಡಗಳು ಅಸ್ಥಿಪಂಜರದಂತಾಗಿವೆ. ಹೆಣಗಳ ರಾಶಿ ನಡುವೆ ನಗರಗಳೇ ಸ್ಮಶಾನವಾಗಿವೆ. ರಾಕೆಟ್, ಬಾಂಬ್, ಬಂದೂಕುಗಳ ಸದ್ದು ರಕ್ತದ ಹೊಳೆಯನ್ನೇ ಹರಿಸಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ರಣಭೀಕರ ಕದನ ತಾರಕಕ್ಕೇರಿದೆ. ರಕ್ಷಣಾ ತಂತ್ರಜ್ಞಾನದಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರೋ ಇಸ್ರೇಲ್ ದೇಶದ ಸರ್ವನಾಶಕ್ಕೆ ಸುತ್ತಮುತ್ತ ಇರೋ ಶತ್ರುರಾಷ್ಟ್ರಗಳೆಲ್ಲಾ ಒಗ್ಗೂಡಿವೆ. ಮುಸ್ಲಿಂ ಪ್ರಾಬಲ್ಯವಿರೋ ದೇಶಗಳು ಯಹೂದಿಗಳ ಅಂತ್ಯಕ್ಕೆ ಕರೆ ನೀಡಿವೆ.
ಇದನ್ನೂ ಓದಿ : ‘ಆಪರೇಷನ್ ಅಜಯ್’- ಮೊದಲ ವಿಮಾನದಲ್ಲಿ ಇಸ್ರೇಲ್‌ನಿಂದ 212 ಭಾರತೀಯರು ತಾಯ್ನಾಡಿಗೆ ವಾಪಸ್
ಅಮೆರಿಕ ಸೇರಿದಂತೆ ಕೆಲ ಮುಂದುವರಿದ ರಾಷ್ಟ್ರಗಳು ಇಸ್ರೇಲ್ ಪರ ನಿಂತಿವೆ. ಬೆಂಬಲದ ವಿಚಾರದಲ್ಲಿ ಭಾರತದ ಪ್ರಧಾನಿ ಇಸ್ರೇಲ್ ಜೊತೆಗೆ ನಿಲ್ಲೋದಾಗಿ ಹೇಳಿದ್ದಾರೆ. ಈ ಮಧ್ಯೆ, ಇಸ್ರೇಲ್-ಹಮಾಸ್ ಉಗ್ರರ ನಡುವಿನ ಕದನ ರಾಷ್ಟ್ರ ರಾಜಕೀಯದಲ್ಲೂ ಕಿತ್ತಾಟಕ್ಕೆ ಕಾರಣವಾಗಿದೆ. ಅಕ್ಟೋಬರ್ 7 ರಿಂದ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಸೇಡಿಗೆ ಸೇಡು, ಪ್ರತೀಕಾರಕ್ಕೆ ಪ್ರತೀಕಾರ ಎನ್ನುವ ನಿಲುವು ಅಮಾಯಕರ ಜೀವ ತೆಗೆಯುತ್ತಿದೆ. ಈಗಾಗಲೇ ಎರಡೂ ಕಡೆಯ ಸುಮಾರು 4 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹಮಾಸ್ ಉಗ್ರರು ಬೀಡುಬಿಟ್ಟಿರುವ ಗಾಜಾಪಟ್ಟಿಯನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇಸ್ರೇಲ್ ನ ದೊಡ್ಡ ಸೈನ್ಯವೇ ಸಜ್ಜಾಗಿ ನಿಂತಿದೆ.. ಈ ಯುದ್ಧದ ನಡುವೆ ಭಾರತದ ನಿಲುವಿನ ಬಗ್ಗೆಯೂ ಭಾರೀ ಚರ್ಚೆಯಾಗ್ತಿದೆ.. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ಇಸ್ರೇಲ್ ಪರ ನಿಲ್ಲೋದಾಗಿ ಘೋಷಣೆ ಮಾಡಿದ್ದಾರೆ. ಅಸಲಿಗೆ ಇಸ್ರೇಲ್ ದೇಶ ಸ್ಥಾಪನೆಯಾದಾಗಿನಿಂದ ಭಾರತ ಸ್ವತಂತ್ರ್ಯ ಪ್ಯಾಲೆಸ್ತೇನ್ ಪರ ನಿರಂತರ ಬೆಂಬಲ ವ್ಯಕ್ತಪಡಿಸುತ್ತಿತ್ತು.. ಆದ್ರೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತದ ನಿಲುವು ಬದಲಾಯ್ತಾ ಅನ್ನೋ ಚರ್ಚೆ ಶುರುವಾಗಿದೆ.. ಮತ್ತೊಂದೆಡೆ ಕಾಂಗ್ರೆಸ್ ಪ್ಯಾಲೆಸ್ತೀನ್ ಪರವಾಗಿ ನಿಂತಿದ್ದು. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಸಲಿಗೆ ಇಸ್ರೇಲ್-ಹಮಾಸ್ ನಡುವಿನ ಯುದ್ಧ ಜಗತ್ತನ್ನೇ ವಿಭಜಿಸುತ್ತಿದೆ. ಅಮೆರಿಕಾ, ಬ್ರಿಟನ್, ಮುಂತಾದ ಪಾಶ್ಚಾತ್ಯ ರಾಷ್ಟ್ರಗಳ ಜೊತೆಗೆ ಈ ಬಾರಿ ಭಾರತವೂ ಇಸ್ರೇಲ್ ಅನ್ನು ಬೆಂಬಲಿಸುತ್ತಿದೆ. ಆದರೆ ಪಾಕಿಸ್ತಾನ, ಇರಾನ್, ಟರ್ಕಿ, ಈಜಿಪ್ಟ್ ಮುಂತಾದ ರಾಷ್ಟ್ರಗಳು ಹಮಾಸ್ ಉಗ್ರರನ್ನು ಬೆಂಬಲಿಸುತ್ತಿದ್ದಾರೆ. ಖುದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಸ್ರೇಲ್ ಜೊತೆ ಇರುವುದಾಗಿ ಅಭಯ ನೀಡಿದ್ದಾರೆ. ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ. ಇಡೀ ಭಾರತವು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ ಮತ್ತು ಸಂಪೂರ್ಣವಬಾಗಿ ಇಸ್ರೇಲ್ ಜೊತೆಗೆ ನಿಂತಿದೆ ಎಂದು ಅಭಯ ನೀಡಿದ್ದಾರೆ.
ಈ ನಡುವೆ ಭಾರತದಲ್ಲಿ ನಿಯೋಜಿತರಾಗಿರುವ ಪ್ಯಾಲೆಸ್ತಿನ್ ರಾಯಭಾರಿ ಅಬು ಆಲ್ಹೈಜಾ ಭಾರತ ಮಧ್ಯೆ ಪ್ರವೇಶಿಸಿ ಬಿಕ್ಕಟ್ಟು ಬಗೆಹರಿಸುವಂತೆ ಕೋರಿದ್ದಾರೆ. ಭಾರತವು ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ಎರಡೂ ದೇಶಕ್ಕೆ ಮಿತ್ರ ರಾಷ್ಟ್ರವಾಗಿದ್ದು ಬಿಕ್ಕಟ್ಟು ಬಗೆಹರಿಸಬೇಕು ಎಂದು ಕರೆ ನೀಡಿದ್ದಾರೆ. ಆದ್ರಿಲ್ಲಿ ಬಿಜೆಪಿ ಮತ್ತು ಮೋದಿ ಸರ್ಕಾರ ಸಂಪೂರ್ಣ ಇಸ್ರೇಲ್ ಗೆ ಬೆಂಬಲ ವ್ಯಕ್ತಪಡಿಸ್ತಿದೆ. ವಿಪಕ್ಷ ಕಾಂಗ್ರೆಸ್ ಪ್ಯಾಲೆಸ್ತೀನ್ ಪರ ನಿಂತಿದೆ.. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪ್ಯಾಲೆಸ್ತೀನ್ಗೆ ತನ್ನ ಬೆಂಬಲ ವ್ಯಕ್ತಪಡಿಸಿ ನಿರ್ಣಯ ತೆಗೆದುಕೊಂಡಿದೆ. ಪ್ಯಾಲೆಸ್ತೀನ್ ಜನರ ಭೂಮಿ, ಸರ್ಕಾರದ ಘನತೆ ಕಾಪಾಡಬೇಕು. ಅಲ್ಲಿನ ಜನರಿಗೆ ಗೌರವದಿಂದ ಬದುಕುವ ಹಕ್ಕಿದೆ ಅಂತಾ ಹೇಳಿದೆ.. ಇಸ್ರೇಲಿಗಳ ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಖಾತ್ರಿಪಡಿಸುವ ಮೂಲಕ ಪ್ಯಾಲೆಸ್ತೀನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಮಾತುಕತೆಯ ಮೂಲಕ ಈಡೇರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಆದ್ರೆ ಎಲ್ಲೂ ಕೂಡ ಕಾಂಗ್ರೆಸ್ ಹಮಾಸ್ ವಿರೋಧಿ ನಿಲುವನ್ನ ತೆಗೆದುಕೊಂಡಿಲ್ಲ. ಇಸ್ರೇಲ್ ಮೇಲಿನ ದಾಳಿಯನ್ನ ಖಂಡಿಸಿದೆಯಾದ್ರೂ ಹಮಾಸ್ ಉಗ್ರರನ್ನ ಮಾತ್ರ ವಿರೋಧಿಸಿಲ್ಲ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಬೆಂಬಲದ ವಿಚಾರದಲ್ಲಿ ಪರಸ್ಪರ ಭಿನ್ನ ನಿಲುವು ಹೊಂದಿರುವ ಹೊತ್ತಲ್ಲೇ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಮಾಡಿದ್ದ ಭಾಷಣದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ವಾಜಪೇಯಿ ಇಸ್ರೇಲ್ ಮತ್ತು ಪಾಲೆಸ್ತೀನ್ ನಡುವಿನ ಸಂಘರ್ಷದ ವಿಚಾರದಲ್ಲಿ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದ್ದಾರೆ. 1977 ರಲ್ಲಿ ಮಾಡಿದ ಭಾಷಣದ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ. 46 ವರ್ಷಗಳ ಹಿಂದಿನ ಸಭೆಯೊಂದರಲ್ಲಿ ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತ ಭಾರತದ ಮಾಜಿ ಪ್ರಧಾನಿ ಮತ್ತು ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಇಸ್ರೇಲ್ ಭೂಮಿಯನ್ನು ಖಾಲಿ ಮಾಡುವಂತೆ ಒತ್ತಾಯಿಸಿದ್ದರು. ಇಸ್ರೇಲ್ ಬೆಂಬಲಿಸಿರುವ ಪ್ರಧಾನಿ ಮೋದಿಯವರ ಸಿದ್ಧಾಂತಗಳ ನಡುವೆ ಅವರದ್ದೇ ಪಕ್ಷದ ವಾಜಪೇಯಿಯವರ ಮಾತುಗಳು ಇದೀಗ ವಿಭಜಿತ ಸಿದ್ಧಾಂತಗಳ ಚರ್ಚೆ ಹುಟ್ಟುಹಾಕಿದೆ.