ರಾಜ್ಯ ಸರ್ಕಾರಕ್ಕೆ ರೈತರ ಹಿತಾಸಕ್ತಿಗಿಂತ, ಸ್ವಾರ್ಥ ಮೈತ್ರಿಕೂಟದ ಸ್ನೇಹಿತರ ಹಿತಾಸಕ್ತಿ ಕಾಪಾಡುವುದೇ ಮುಖ್ಯ – ಬಿಜೆಪಿ ಕಿಡಿ
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದು ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮುಂಗಾರು ಮಳೆ ಕೈಕೊಟ್ಟು ರಾಜ್ಯದ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದು ಈಗ ತಮಿಳುನಾಡಿಗೆ ನೀರು ಬಿಟ್ಟ ಬಗ್ಗೆ ವಿಪಕ್ಷಗಳು ಕಿಡಿಕಾರಿತ್ತಿವೆ. ಮತ್ತೊಂದೆಡೆ ಮಂಡ್ಯದಲ್ಲಿ ರೈತರು ನಿರಂತರವಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇನ್ನು ಕಾವೇರಿ ಕಿಚ್ಚು ಹೆಚ್ಚಾಗುತ್ತಿದ್ದಂತೆ ಪ್ರಕರಣ ಸುಪ್ರೀಂಕೋರ್ಟ್ ಅಂಗಳಕ್ಕೆ ತಲುಪಿದ್ದು ಹೊಸ ಪೀಠ ರಚಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಇದೀಗ ರಾಜ್ಯ ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದೆ.
ಇದನ್ನೂ ಓದಿ: ಪೀಣ್ಯದ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ – ಇಸ್ರೋ ಅಧ್ಯಕ್ಷರಿಗೆ ಪೇಟ ತೊಡಿಸಿ ಸನ್ಮಾನ
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್, ಕರ್ನಾಟಕದ ತಮ್ಮ ಸ್ವಾರ್ಥದ ಮೈತ್ರಿಕೂಟದ ಸಚಿವ ಮಿತ್ರರಿಗೆ ಕಾವೇರಿ ನದಿ ನೀರು ವಿಚಾರದಲ್ಲಿ ನೀಡಿರುವ ಹೊಸ ಜವಾಬ್ದಾರಿಗಳು ಎಂದು ಹೊಸ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಯಾವ ಸಚಿವರಿಗೆ ಯಾವ ಜವಾಬ್ದಾರಿ ನೀಡಲಾಗಿದೆ ಎಂಬುವುದನ್ನು ವಿವರವಾಗಿ ತಿಳಿಸಿದೆ.
ಸಿದ್ದರಾಮಯ್ಯ: ಕಾವೇರಿ ವಿವಾದ ಬಗೆಹರಿಯುವ ತನಕ ಮೌನಕ್ಕೆ ಶರಣಾಗುವುದು.
ಡಿ.ಕೆ. ಶಿವಕುಮಾರ್ : ಕೆ.ಆರ್.ಎಸ್ ನಿಂದ ಬಿಡುವ ನೀರು ತಮಿಳುನಾಡು ತಲುಪುವ ತನಕ, ಕೊಂಚವೂ ತೊಂದರೆ ಬಾರದಂತೆ ನೋಡಿಕೊಳ್ಳುವುದು.
ಚೆಲುವರಾಯಸ್ವಾಮಿ: ಕಾವೇರಿ ಕೊಳ್ಳದಲ್ಲಿ ಕರ್ನಾಟಕದ ರೈತರು ಹೊಸದಾಗಿ ಬಿತ್ತನೆ ಮಾಡದಂತೆ ತಡೆಯುವುದು.
ಪ್ರಿಯಾಂಕ್ ಖರ್ಗೆ: ತಮಿಳುನಾಡಿಗೆ ನೀರು ಹರಿಬಿಟ್ಟ ಕರ್ನಾಟಕ ಸರ್ಕಾರದ ನೀತಿಯನ್ನು ವಿರೋಧಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರ ವಿರುದ್ಧ ಎಫ್ಐಆರ್ ಹಾಕಿಸುವುದು.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರೈತರ ಹಿತಾಸಕ್ತಿಗಿಂತಲೂ, ತಮ್ಮ ಸ್ವಾರ್ಥ ಮೈತ್ರಿಕೂಟದ ಸ್ನೇಹಿತರ ಹಿತಾಸಕ್ತಿಯನ್ನು ಕಾಪಾಡುವುದೇ ಮುಖ್ಯವಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.