ಬಿಜೆಪಿ ಸರ್ಕಾರದಿಂದ ಕಾನೂನು ಉಲ್ಲಂಘಿಸಿ RSSಗೆ ಭೂಮಿ ಪರಭಾರೆ? -ಭೂಮಿ ವಾಪಸ್ ಪಡೆಯುತ್ತೇವೆಂದ ದಿನೇಶ್ ಗುಂಡೂರಾವ್!
ಆರೋಗ್ಯ ಇಲಾಖೆಗೂ ಮೇಜರ್ ಸರ್ಜರಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಗೆ ಶಾಕ್ ಮೇಲೆ ಶಾಕ್ ಕೊಡ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶುರುವಾದ ಟೆಂಡರ್ಗಳು, ಕಾಮಗಾರಿಗಳನ್ನ ಸ್ಥಗಿತಗೊಳಿಸಿದೆ. ಹಾಗೇ ಪಠ್ಯಪುಸ್ತಕ ಪರಿಷ್ಕರಣೆ ಸೇರಿದಂತೆ ಹಲವು ಕ್ರಮಗಳನ್ನ ಕೈಗೊಂಡಿದೆ. ಇದೀಗ ಸರ್ಕಾರಿ ಭೂಮಿ ಪರಾಭಾರೆ ವಿಚಾರವಾಗಿಯೂ ಮಹತ್ವದ ಹೆಜ್ಜೆ ಇಟ್ಟಿದೆ. ಮತ್ತೊಂದೆಡೆ ಆರೋಗ್ಯ ಇಲಾಖೆಗೂ ಭರ್ಜರಿ ಸರ್ಜರಿ ಮಾಡಿದ್ದು, ಸರ್ಕಾರಿ ಡಯಾಲಿಸಿಸ್ ಕೇಂದ್ರಗಳ ಸ್ಥಿತಿಯನ್ನು ಸುಧಾರಿಸಲು ಮುಂದಾಗಿದೆ. ಹಾಗೇ ಹೊಸದಾಗಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಬಿಜೆಪಿ(BJP)ಯವರು ತಮ್ಮ ಸಂಸ್ಥೆಗೆ ಸರ್ಕಾರಿ ಭೂಮಿ ಪರಭಾರೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Health Minister Dinesh Gundu Rao) ಗಂಭೀರ ಆರೋಪ ಮಾಡಿದ್ದಾರೆ. ‘ರಾಜ್ಯದ ನೂರಾರು ಎಕರೆ ಸರ್ಕಾರಿ ಜಾಗವನ್ನು ಆರ್ಎಸ್ಎಸ್ (RSS) ಸೇರಿದಂತೆ ತಮ್ಮ ಸಂಸ್ಥೆಗಳಿಗೆ ನೀಡಿದ್ದಾರೆ. ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಗೆ ಹೀಗೆ ಮಾಡಿದ್ದು, ಕಾನೂನು ಉಲ್ಲಂಘಿಸಿ ಭೂಮಿ ನೀಡಿರುವುದರ ಕುರಿತು ಸಿಎಂ ಹಾಗೂ ಕಂದಾಯ ಇಲಾಖೆ ಪರಿಶೀಲನೆ ನಡೆಸಲಿದೆ ಎಂದರು.
ಇದನ್ನೂ ಓದಿ : ಆಸ್ತಿ ವಿವರ ಸಲ್ಲಿಸುವಂತೆ 224 ಶಾಸಕರಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ಗಡುವು – ಮೀರಿದ್ರೆ ಶಿಸ್ತುಕ್ರಮದ ಎಚ್ಚರಿಕೆ
ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದರು. ಇದೇ ಕಾರಣಕ್ಕೆ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದರು ಎಂದು ಬಿಜೆಪಿ ವಿರುದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ರಾಜ್ಯದ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ. ಹಾಗಾಗಿ ರಾಜ್ಯದಲ್ಲಿ 108 ಡಯಾಲಿಸಿಸ್ ಟೆಂಡರ್ಗಳನ್ನು ರದ್ದುಪಡಿಸಿದ್ದೇವೆ. ಅಧಿಕಾರಿಗಳು, ವೈದ್ಯರ ಕಾರ್ಯ ನಿರ್ವಹಣೆ ಸರಿಪಡಿಸಬೇಕಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುತ್ತೇವೆ ಎಂದಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಆರೋಗ್ಯ ಆಯುಕ್ತ ಡಿ.ರಂದೀಪ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ ಮತ್ತು ಡಾ.ಮೂರ್ತಿ ಸೇರಿದಂತೆ ಇಲಾಖೆ ಅಧಿಕಾರಿಗಳೊಂದಿಗೆ ಆಂತರಿಕ ಸಭೆ ನಡೆಸಿದ್ದರು. ಪ್ರಸ್ತುಕ ಸರ್ಕಾರಿ ಡಯಾಲಿಸಿಸ್ ಕೇಂದ್ರಗಳು ಉತ್ತಮ ಸ್ಥಿತಿಯಲ್ಲಿಲ್ಲ. ಪ್ರತೀ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗೆ ವೆಚ್ಚಗಳು ಹೆಚ್ಚಾಗಿವೆ. ಟೆಂಡರ್ ಗಳ ಕುರಿತು ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದೇನೆ. ನಿರ್ವಹಣಾ ವೆಚ್ಚ ಹೆಚ್ಚಿರುವುದನ್ನು ಗಮನಿಸಲಾಗಿದೆ. ಹೀಗಾಗಿ ಹೊಸ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಇದರ ಅಡಿಯಲ್ಲಿ ಸುಧಾರಿತ ಗುಣಮಟ್ಟದೊಂದಿಗೆ ವೆಚ್ಚವನ್ನು ಕಡಿಮೆ ಮಾಡಬಹುದು. ಈ ಕೇಂದ್ರಗಳಲ್ಲಿ ಮೂತ್ರಪಿಂಡ ಶಾಸ್ತ್ರಜ್ಞರ ಕೊರತೆಯನ್ನೂ ನಿವಾರಿಸಲಾಗುವುದು ಎಂದು ಗುಂಡೂರಾವ್ ಹೇಳಿದರು.