ಕಾಂಗ್ರೆಸ್‌ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ಪ್ರಾಚೀನ ಗೋಡೆ ನೆಲಸಮ? – ಪೊಲೀಸರಿಗೆ ದೂರು ನೀಡಿದ ಬಿಜೆಪಿ

ಕಾಂಗ್ರೆಸ್‌ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ಪ್ರಾಚೀನ ಗೋಡೆ ನೆಲಸಮ? – ಪೊಲೀಸರಿಗೆ ದೂರು ನೀಡಿದ ಬಿಜೆಪಿ

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನಡೆದಿರುವ ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ಸಕಲ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ. ಇದೀಗ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ. ಪ್ರತಿಭಟನಾ ಸಮಾವೇಶದ ಹೆಸರಿನಲ್ಲಿ ಫ್ರೀಡಂ ಪಾರ್ಕ್​ನ ಪ್ರಾಚೀನ ಗೋಡೆಯೊಂದನ್ನು ನೆಲಸಮ ಮಾಡಲಾಗಿದೆ. ಅಷ್ಟೇ ಅಲ್ಲದೆ, ಮರಗಳನ್ನು ಕಡಿಯಲಾಗಿದೆ ಎಂದು ಬಿಜೆಪಿ ಪೊಲೀಸರಿಗೆ ದೂರು ನೀಡಿದೆ.

ಇದನ್ನೂ ಓದಿ: 7,000 ಕೋಟಿ ರೂಪಾಯಿ ದುರ್ಬಳಕೆ ಆರೋಪ – E.D ಕಚೇರಿಗೆ ಉದ್ಯಮಿ ಅನಿಲ್ ಅಂಬಾನಿ ಹಾಜರ್

ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಮತಕಳ್ಳತನ ಆರೋಪ ಸಂಬಂಧ ಆಗಸ್ಟ್ 5 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಬೇಕಿತ್ತು. ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡ ಬಳಿಕ, ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೇನ್ ನಿಧನದ ಕಾರಣ ಸಮಾವೇಶ ಮುಂದೂಡಲಾಗಿತ್ತು. ಕಾಂಗ್ರೆಸ್ ಪ್ರತಿಭಟನಾ ಸಮಾವೇಶ ಆಗಸ್ಟ್ 8 ಕ್ಕೆ ಮುಂದೂಡಿಕೆಯಾಗಿದೆ. ಆದರೆ, ಪ್ರತಿಭಟನಾ ಸಮಾವೇಶದ ಹೆಸರಿನಲ್ಲಿ ಫ್ರೀಡಂ ಪಾರ್ಕ್​ನ ಪ್ರಾಚೀನ ಗೋಡೆಯೊಂದನ್ನು ನೆಲಸಮ ಮಾಡಲಾಗಿದೆ. ಅಷ್ಟೇ ಅಲ್ಲದೆ, ಮರಗಳನ್ನು ಕಡಿಯಲಾಗಿದೆ ಎಂದು ಬಿಜೆಪಿ ಪೊಲೀಸರಿಗೆ ದೂರು ನೀಡಿದೆ.

2024 ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಆಗಸ್ಟ್ 8 ರಂದು ನಗರದ ಪೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಸಲುವಾಗಿ ಆನೇಕ ವರ್ಷಗಳಿಂದ ಇರುವ ಫ್ರೀಡಂ ಪಾರ್ಕ್‌ ತಡೆಗೋಡೆಯನ್ನು ನೆಲಸಮ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದಲ್ಲದೇ ಸಾರ್ವಜನಿಕರ ಆಸ್ತಿಯನ್ನು ನಷ್ಟಪಡಿಸಿ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ. ಈ ರೀತಿಯ ದುಷ್ಕೃತ್ವವನ್ನು ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆಯದೆ ಹಾಗೂ ಸಂಬಂಧಪಟ್ಟವರಿಗೆ ತಿಳಿಸದೇ ನಗರದ ಮಧ್ಯ ಭಾಗದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಆದ ತಡೆಗೋಡೆ (ಕಾಂಪೌಂಡ್) ಅನ್ನು ಕಾಂಗ್ರೆಸ್ ಪಕ್ಷದ ರಾಜಕೀಯ ಕಾರ್ಯಕ್ರಮ ನಡೆಸಲು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ಪ್ರಾಚೀನ ಕಾಲದ ಸಾರ್ವಜನಿಕರ ಆಸ್ತಿಯನ್ನು ನಾಶಪಡಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ಯಾವುದೇ ರೀತಿಯ ಆಧೀಕೃತವಾದ ಪರವಾನಗಿ ಇಲ್ಲದೇ ಆಡಳಿತ ಪಕ್ಷದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಡೆಗೋಡೆಯನ್ನು (ಕಾಂಪೌಂಡ್) ನೆಲಸಮ ಮಾಡಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿರುವುದು ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಈ ದುಷ್ಕೃತ್ಯಕ್ಕೆ ಕಾರಣೀಭೂತರಾದ ಸದರಿ ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಂದು ಉಪ್ಪಾರಪೇಟೆ ಪೊಲೀಸರಿಗೆ ಬಿಜೆಪಿ ಮನವಿ ಮಾಡಿದೆ.

ಆಡಳಿತ ಪಕ್ಷದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮರಗಳನ್ನು ಕತ್ತರಿಸಿರುವುದು ಕಾನೂನು ಬಾಹಿರ. ಇದಕ್ಕೆ ಕಾರಣೀಭೂತರಾದ ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಿಜೆಪಿ ಆಗ್ರಹಿಸಿದೆ.

Shwetha M