ಗುಜರಾತ್ನಲ್ಲಿ ಸೋಮವಾರ ಭೂಪೇಂದ್ರ ಪಟ್ಟಾಭಿಷೇಕ-ಹಿಮಾಚಲದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ
ಅಹಮದಾಬಾದ್: ಎರಡನೇ ಬಾರಿಗೆ ಗುಜರಾತ್ನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ 156 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ದಾಖಲಿಸಿರುವ ಬಿಜೆಪಿ, ಸತತ 7ನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯುತ್ತಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಆಡಳಿತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ. ಇಂದು ಗುಜರಾತ್ ಬಿಜೆಪಿ ಶಾಸಕರ ಸಭೆ ನಡೆದಿದ್ದು, ಭೂಪೇಂದ್ರ ಪಟೇಲ್ರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಹಿಮಾಚಲದಲ್ಲಿ ಸಿಎಂ ಆಯ್ಕೆ ಸರ್ಕಸ್!
ಅತ್ತ ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಭಾರಿ ಸರ್ಕಸ್ ನಡೆಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ 40 ಸ್ಥಾನಗಳನ್ನ ಗೆದ್ದು ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿದೆ. ಆದರೆ ಈಗ ಮುಖ್ಯಮಂತ್ರಿ ರೇಸ್ಗೆ ಹಿಮಾಚಲ ಕಾಂಗ್ರೆಸ್ನಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಹಿಮಾಚಲ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್, ಹಿಮಾಚಲ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಮತ್ತು ಹಿರಿಯ ನಾಯಕ ಮುಕೇಶ್ ಅಗ್ನಿಹೋತ್ರಿ ಸೇರಿ ಒಟ್ಟು ಮೂವರು ಸಿಎಂ ಗದ್ದುಗೆ ಮೇಲೆ ಕಣ್ಣಿಟ್ಟಿದ್ದಾರೆ. ಇಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕರು ಸಭೆ ನಡೆಸಿದ್ದು, ಸಿಎಂ ಆಯ್ಕೆಯ ನಿರ್ಧಾರವನ್ನ ಹೈಕಮಾಂಡ್ಗೆ ಒಪ್ಪಿಸಲು ಇಂದು ಒಟ್ಟಾಗಿ ನಿರ್ಣಯ ಕೂಡ ಕೈಗೊಂಡಿದ್ದಾರೆ. ಹೀಗಾಗಿ ಹಿಮಾಚಲ ಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ.