ಸಿಎಂ ಸಿದ್ದರಾಮಯ್ಯ ಈ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ – ಬಿಜೆಪಿ ಆಗ್ರಹ

ಸಿಎಂ ಸಿದ್ದರಾಮಯ್ಯ ಈ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ – ಬಿಜೆಪಿ ಆಗ್ರಹ

ಬೆಂಗಳೂರು: ಪಂಚರಾಜ್ಯ ಚುನಾವಣೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜ್ಯ ರಾಜಕೀಯ ನಾಯಕರ ವಾಕ್ಸಮರ ಜೋರಾಗಿದೆ. ಪರಸ್ಪರ ಆರೋಪ – ಪ್ರತ್ಯಾರೋಪ ಮಾಡುತ್ತಲೇ ಬಂದಿದ್ದಾರೆ. ಐದು ರಾಜ್ಯಗಳ ಚುನಾವಣೆಗಾಗಿ ಕಾಂಗ್ರೆಸ್ ರಾಜ್ಯವನ್ನು ಎಟಿಎಂ ಮಾಡಿಕೊಂಡಿದೆ ಎಂದು ನಿರಂತರ ಆರೋಪ ಮಾಡುತ್ತಾ ಬಂದಿರುವ ಬಿಜೆಪಿ ಇದೀಗ ಸರ್ಕಾರದ ಎಲ್ಲಾ ಹಗರಣಗಳ ನ್ಯಾಯಾಂಗ ತನಿಖೆ ಮಾಡಬೇಕೆಂದು ಆಗ್ರಹಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಪರ್ಸೆಂಟೇಜ್ ಸರ್ಕಾರ, ಪೇಸಿಎಂ ಎಂದು ಆರೋಪ ಮಾಡಿದ್ದ ಸಿದ್ದರಾಮಯ್ಯ ಅವರ ಹಗರಣಗಳ ಬಗ್ಗೆ ಇದೀಗ ನ್ಯಾಯಾಂಗ ತನಿಖೆಯಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ವಿರುದ್ಧವೂ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿರುವ ಕೇಸರಿ ಪಡೆ ಶ್ಯಾಡೋ ಸಿಎಂ ವರ್ಗಾವಣೆ ದಂಧೆ ವಿರುದ್ಧವೂ ತನಿಖೆಯಾಗಲಿ ಎಂದು ಮಾರ್ಮಿಕವಾಗಿ ಹೇಳಿದೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ ಗೆಲ್ಲಲು ಕಾಂಗ್ರೆಸ್ ಗ್ಯಾರಂಟಿ ಅಸ್ತ್ರ – ಭರವಸೆಗಳು ಅಭಿವೃದ್ಧಿ ಕೆಲಸಗಳಿಗೆ ಮುಳುವಾಗುತ್ತಾ?

ತನಿಖೆಗೆ ಆಗಬೇಕಾದ ಪ್ರಕರಣಗಳ ಪಟ್ಟಿ ಮಾಡಿದ ಬಿಜೆಪಿ

ವಿರೋಧ ಪಕ್ಷದಲ್ಲಿದ್ದಾಗ ಸುಳ್ಳು ಆರೋಪಗಳನ್ನು ಮಾಡಿ ನ್ಯಾಯಾಂಗ ತನಿಖೆ ಆಗಬೇಕೆಂದು ಆಗ್ರಹಿಸುತ್ತಿದ್ದ ಸಿದ್ದರಾಮಯ್ಯ ಅವರು ಇಂದು ನ್ಯಾಯಾಂಗ ತನಿಖೆಗೆ ಕೊಡಬೇಕಾದ ಪ್ರಕರಣಗಳ ಪಟ್ಟಿ ಎಂದು ಬಿಜೆಪಿ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.

ಕಲೆಕ್ಷನ್‌ ಏಜೆಂಟ್‌ ಸುರ್ಜೇವಾಲಾ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು..!

ಶ್ಯಾಡೋ ಸಿಎಂ ವರ್ಗಾವಣೆ ದಂಧೆ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು..!

ಹಣ ಸಂಗ್ರಹಿಸಿ ಸಿಕ್ಕಿಬಿದ್ದಿರುವ ಎಟಿಎಂ ಸರ್ಕಾರದ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..! ಕಾಸಿಗಾಗಿ ಪೋಸ್ಟಿಂಗ್‌ ಮಾಡಿರುವ ಕಾಂಗ್ರೆಸ್‌ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!

ಚುನಾವಣೆ ವೇಳೆ ಕುಕ್ಕರ್‌, ಇಸ್ತ್ರಿ ಪಟ್ಟಿಗೆ ಹಂಚಿರುವ ಸಿದ್ದರಾಮಯ್ಯ ಅವರ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!

ಸಿದ್ದರಾಮಯ್ಯ ಅವರು ಶುದ್ಧ ಹಸ್ತರು, ಸಾಚಾಗಳು ಎಂದು ಸಾಬೀತುಪಡಿಸಲೇ ಬೇಕಾದ ಸಮಯ ಬಂದಿದೆ. ಕೈಯಲ್ಲಿ ಅಧಿಕಾರವಿದೆ ನ್ಯಾಯಾಂಗ ತನಿಖೆ ಕೊಟ್ಟು ನಾವು ಮಜವಾದಿಯಲ್ಲ ಸಮಾಜವಾದಿ ಎಂದಾದರೂ ತೋರಿಸಿ..! ಎಂದು ಬಿಜೆಪಿ ಹೇಳಿದೆ.

Shwetha M