“ರಾಜ್ಯಪಾಲರನ್ನು ಗುಂಡಿಕ್ಕಿ ಕೊಲ್ಲಲು ಉಗ್ರನನ್ನು ಕಳುಹಿಸುತ್ತೇವೆ” –ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ನಾಯಕ

“ರಾಜ್ಯಪಾಲರನ್ನು ಗುಂಡಿಕ್ಕಿ ಕೊಲ್ಲಲು ಉಗ್ರನನ್ನು ಕಳುಹಿಸುತ್ತೇವೆ” –ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ನಾಯಕ

ಚೆನ್ನೈ: ತಮಿಳುನಾಡು ಡಿಎಂಕೆ ಪಕ್ಷದ ನಾಯಕ ಶಿವಾಜಿ ಕೃಷ್ಣಮೂರ್ತಿ ಅವರು ತಮಿಳುನಾಡು ರಾಜ್ಯಪಾಲರನ್ನು ಗುಂಡಿಕ್ಕಿ ಕೊಲ್ಲಲು ಉಗ್ರನನ್ನು ಕಳುಹಿಸುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಸಿಎಂ ಎಂ.ಕೆ. ಸ್ಟಾಲಿನ್ ಹಾಗೂ ರಾಜ್ಯಪಾಲ ಆರ್. ಎನ್. ರವಿ ಅವರ ನಡುವೆ ನಡೆಯುತ್ತಿರುವ ವಿವಾದಕ್ಕೆ ತುಪ್ಪ ಸುರಿದಂತೆ ಆಗಿದೆ.

ತಮಿಳುನಾಡಿನ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಡಿಎಂಕೆ ಪಕ್ಷದ ನಾಯಕ ಶಿವಾಜಿ ಕೃಷ್ಣಮೂರ್ತಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಜ್ಯಪಾಲರನ್ನು ನಿಂದಿಸಬೇಡಿ ಎಂದು ಸಿಎಂ ಕೇಳುತ್ತಿದ್ದಾರೆ. ಆದರೆ ರಾಜ್ಯಪಾಲರು ಸರಿಯಾಗಿ ಓದಿದ್ದರೆ ನಾನು ಅವರ ಕಾಲಿಗೆ ಹೂಗಳನ್ನು ಇಟ್ಟು ಕೈಮುಗಿದು ಧನ್ಯವಾದ ಹೇಳುತ್ತಿದ್ದೆ. ಆದರೆ ಅವರು ಅಂಬೇಡ್ಕರರ ಹೆಸರು ಹೇಳಲು ನಿರಾಕರಿಸಿದರೆ ಚಪ್ಪಲಿಯಿಂದ ಹೊಡೆಯುವ ಹಕ್ಕು ನನಗಿಲ್ಲವೇ? ನೀವು ಅವರ ಹೆಸರನ್ನು ನಿರಾಕರಿಸಿದರೆ, ನೀವು ಕಾಶ್ಮೀರಕ್ಕೆ ಹೋಗುತ್ತೀರಿ. ಆಗ ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ನಾವು ಓರ್ವ ಉಗ್ರನನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಹೃದಯಾಘಾತದಿಂದ ಸಾವು

ಸದ್ಯ ಈ ಹೇಳಿಕೆಯು ತಮಿಳುನಾಡು ರಾಜಕೀಯ ವಲಯದಲ್ಲಿ ವಿವಾದವನ್ನು ಸೃಷ್ಟಿಸಿದ್ದು, ಬಿಜೆಪಿ ನಾಯಕರು ಸೇರಿದಂತೆ ಅನೇಕ ಪಕ್ಷದ ನಾಯಕರು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಡಿಎಂಕೆಗೆ ಯಾವ ಉಗ್ರನ ಸಂಬಂಧವಿದೆ ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು. ಏಕೆಂದರೆ ಅವರು ಭಾಷಣದಲ್ಲಿ ನಾವು ರಾಜ್ಯಪಾಲರನ್ನು ಕಾಶ್ಮೀರಕ್ಕೆ ಕಳುಹಿಸುತ್ತೇವೆ. ಕಾಶ್ಮೀರಕ್ಕೆ ಭಯೋತ್ಪಾದಕರನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ನಾವು ಎಂದರೆ ಯಾರು? ಶಿವಾಜಿ ಕೃಷ್ಣಮೂರ್ತಿ ಮಾತ್ರ ಇಂತಹ ಹೊಲಸು ಭಾಷೆಯಲ್ಲಿ ಮಾತನಾಡಿಲ್ಲ. ಸಿಎಂ ಎಂ.ಕೆ ಸ್ಟಾಲಿನ್ ಅವರ ಆಶೀರ್ವಾದದಿಂದ, ಡಿಎಂಕೆ ಮುಖ್ಯಸ್ಥರ ಪ್ರಚೋದನೆಯಿಂದ ಅವರು ಮಾತನಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿ ನಾಯಕ ನಾರಾಯಣನ್  ಕಿಡಿಕಾರಿದರು.

ಏನಿದು ವಿವಾದ?

ಜ. 10ರಂದು ಸದನದಲ್ಲಿ ಸರ್ಕಾರ ಮುದ್ರಿಸಿ ಅಂಗೀಕರಿಸಿದ ಭಾಷಣವನ್ನು ರಾಜ್ಯಪಾಲರು ಸಂಪೂರ್ಣವಾಗಿ ಓದದೇ ಬಿಟ್ಟಿದ್ದರು. ಎಂ.ಕೆ. ಸ್ಟಾಲಿನ್ ಅವರು, ಜಾತ್ಯತೀತತೆ ಸೇರಿದಂತೆ ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖವನ್ನು ರಾಜ್ಯ ಸರ್ಕಾರ ಭಾಷಣದಲ್ಲಿ ಸಿದ್ಧಪಡಿಸಿತ್ತು. ಆದರೆ ಭಾಷಣದ ಆ ಭಾಗಗಳನ್ನು ಅವರು ಓದದೆ  ಬಿಟ್ಟುಬಿಟ್ಟಿದ್ದಾರೆ. ಆಡಳಿತಾರೂಢ ಡಿಎಂಕೆ ಪ್ರಚಾರ ಮಾಡುವ ದ್ರಾವಿಡ ಮಾದರಿಯ ಉಲ್ಲೇಖವನ್ನೂ ಅವರು ಓದಿಲ್ಲ. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಗದ್ದಲವು ವಿವಾದಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಟ್ವಿಟ್ಟರ್‌ನಲ್ಲಿ #GetOutRavi ಎಂಬ ಟ್ರೆಂಡಿಂಗ್‌ ಕೂಡ ಪ್ರಾರಂಭವಾಗಿತ್ತು.

suddiyaana