“ಸಮಾವೇಶದಲ್ಲಿ ಹರಿದ ಕಾಂಚಾಣವೇ ಕಾಂಗ್ರೆಸ್ಸಿಗರ ಗೃಹಲಕ್ಷ್ಮಿ” – ಬಿಜೆಪಿ ವ್ಯಂಗ್ಯ

“ಸಮಾವೇಶದಲ್ಲಿ ಹರಿದ ಕಾಂಚಾಣವೇ ಕಾಂಗ್ರೆಸ್ಸಿಗರ ಗೃಹಲಕ್ಷ್ಮಿ” – ಬಿಜೆಪಿ ವ್ಯಂಗ್ಯ

ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ `ನಾ ನಾಯಕಿ’ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದರು. ಈ ವೇಳೆ ಮಹಿಳೆಯರಿಗೆ 2 ಸಾವಿರ ರೂ. ಕೊಟ್ಟು ಕರೆತರಲಾಗಿದೆ ಎಂದು ರಾಜ್ಯ ಬಿಜೆಪಿ ಗಂಭೀರವಾಗಿ ಆರೋಪಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, `ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ? `ನಾಯಕಿ’ ಕಾರ್ಯಕ್ರಮಕ್ಕೂ 2,000 ರೂ. ಕೊಟ್ಟೇ ಕರೆತರಲಾಗಿತ್ತು. ಶ್ರೀಮತಿ ಪ್ರಿಯಾಂಕಾ ಗಾಂಧಿ ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ ಬಹುಶಃ ಕಾಂಗ್ರೆಸ್ಸಿಗರ `ಗೃಹಲಕ್ಷ್ಮಿ’ ಯೋಜನೆ ಇರಬೇಕು ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಓಡಿ ಬಂದು ರಾಹುಲ್​ರನ್ನ ತಬ್ಬಿಕೊಂಡ ಯುವಕ – ಭದ್ರತಾ ವೈಫಲ್ಯ ಆಗಿದ್ದೇಗೆ..?

ಇದೇ ಟ್ವೀಟ್ ನಲ್ಲಿ ಬಿಜೆಪಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ವ್ಯಕ್ತಿಯೊಬ್ಬ ತನ್ನ ಜೇಬಿನಿಂದ ಹಣ ತೆಗೆದು, ನೋಟುಗಳನ್ನು ಎಣಿಸಿ ಮಹಿಳೆಯರಿಗೆ ನೀಡುತ್ತಿದ್ದಾನೆ.

ಮಹಿಳಾ ಕಾಂಗ್ರೆಸ್‌ನ `ನಾ ನಾಯಕಿ’ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ  ಸೋಮವಾರ ನಡೆದಿತ್ತು. ಈ ವೇಳೆ ಪ್ರಿಯಾಂಕಾ ಗಾಂಧಿ ಸಮಾವೇಶದಲ್ಲಿ ಭಾಗವಹಿಸಿ, ರಾಜ್ಯ ಕಾಂಗ್ರೆಸ್‌ನ ಮಹಿಳಾ ಪ್ರಣಾಳಿಕೆಯ ಕೆಲವು ಪ್ರಮುಖ ವಿಚಾರಗಳನ್ನು ಘೋಷಣೆ ಮಾಡಿದ್ದರು. ಇದೇ ವೇಳೆ `ಗೃಹಲಕ್ಷ್ಮಿ’ ಬಾಂಡ್ ಅನ್ನೂ ಪ್ರದರ್ಶಿಸಿದ್ದರು. ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ತಿರುಗೇಟು ನೀಡಿತ್ತು.

`ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯಗಳನ್ನೇ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ ಅವರು ಈಗ `ಗೃಹಲಕ್ಷ್ಮಿ’ ಯೋಜನೆ ಜಾರಿಗೊಳಿಸುವ ಭರವಸೆ ನೀಡಿರೋದು `ಕಾಂಗ್ರೆಸ್ ಗ್ಯಾರಂಟಿ ಸುಳ್ಳಿನ ಸರಣಿ’ಯ ಮುಂದುವರಿದ ಭಾಗ’ ಎಂದು ಬಿಜೆಪಿ ಆರೋಪಿಸಿತ್ತು.

suddiyaana