ಸುರ್ಜೇವಾಲ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು – ಕಾಫಿ ಕುಡಿದು ಹೋದೆವು ಅಷ್ಟೇ ಎಂದ ರಾಮಲಿಂಗಾರೆಡ್ಡಿ!
ಕರ್ನಾಟಕದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನಾಯಕರು ಈಗ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಬಿಬಿಎಂಪಿ ಚುನಾವಣೆ ತಯಾರಿ ಸಂಬಂಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಜೂ.13 ರಂದು ಸಭೆ ನಡೆಸಲಾಗಿದೆ. ಇದೇ ಸಭೆ ಬಗ್ಗೆ ಬಿಜೆಪಿ ಟೀಕಿಸಿದ್ದಾರೆ.
ಇದನ್ನೂ ಓದಿ : ಜನಾರ್ದನ ರೆಡ್ಡಿ ದಂಪತಿಗೆ ಶಾಕ್! – ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ
ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ಮಾಡಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ (Randeep Singh Surjewala) ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಕ್ರಮ ಆಗಬೇಕು ಅಂತ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan) ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ಬಿಜೆಪಿ (BJP Office) ಕಚೇರಿಯಲ್ಲಿ ಮಾತನಾಡಿದ ಅವರು, ಸುರ್ಜೇವಾಲ ಅಧಿಕಾರಿಗಳ ಸಭೆ ಮಾಡಿರೋದು ಖಂಡನೀಯ. ಕಾಂಗ್ರೆಸ್ (Congress) ಪಕ್ಷದಿಂದ ಅಧಿಕಾರ ದುರ್ಬಳಕೆ ಆಗಿದೆ. ಇದಕ್ಕೆ ಅವಕಾಶ ಕೊಡಬಾರದು. ನಾವು ಈ ಸಂಬಂಧ ರಾಜ್ಯಪಾಲ ಪಾಲರಿಗೆ ದೂರು ಕೊಡ್ತೀವಿ. ರಾಜ್ಯಪಾಲರು (Governor) ಕಾಂಗ್ರೆಸ್ ಕಿವಿ ಹಿಂಡೋ ಕೆಲಸ ಮಾಡಬೇಕು ಅಂತ ಮನವಿ ಮಾಡ್ತೀವಿ ಎಂದರು.
ಖಾಸಗಿ ಹೊಟೇಲ್ ನಲ್ಲಿ ಬಿಬಿಎಂಪಿ (BBMP) ಅಧಿಕಾರಿಗಳ ಜೊತೆ ಸುರ್ಜೇವಾಲ ಅವರ ಸಭೆ ಉದ್ದೇಶ ಏನು ಗೊತ್ತಿಲ್ಲ. ಸರ್ಕಾರದ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಬಾರದು. ಇದರಲ್ಲಿ ಕಾನೂನು ಉಲ್ಲಂಘನೆ ಆಗಿದೆ. ಕಾಂಗ್ರೆಸ್ ಕಾನೂನು ಉಲ್ಲಂಘನೆ ಮಾಡೋದೆ ಕೆಲಸ. ಈ ಬಗ್ಗೆ ಕ್ರಮ ಆಗಬೇಕು ಅಂತ ಒತ್ತಾಯ ಮಾಡಿದರು.
ಬಿಜೆಪಿ ನಾಯಕರ ಟೀಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ಕಾಫಿ ಕುಡಿದು ಹೋದೆವು ಅಷ್ಟೇ, ಯಾವುದೇ ಚರ್ಚೆ ಆಗಿಲ್ಲ. ಸಭೆ ಬಗ್ಗೆ ಯಾವುದೇ ಪೂರ್ವ ನಿಯೋಜನೆ ಆಗಿಲ್ಲ ಎಂದಿದ್ದಾರೆ. ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ರಾಜ್ಯ ಬಿಜೆಪಿ ಘಟಕ ದೂರು ನೀಡಲು ಮುಂದಾಗಿರುವ ವಿಚಾರವಾಗಿ ಮಾತನಾಡಿದ ಅವರು ದೂರು ಕೊಡಲಿ ಬಿಡಿ, ಈಗ ಅವರು ವಿರೋಧ ಪಕ್ಷದಲ್ಲಿದ್ದಾರೆ. ಬಿಜೆಪಿ ನಾಯಕರು ಹಿಂದೆ ಮಾಡಿದ್ದನ್ನು ಮರೆತು ಹೋಗಿದ್ದಾರೆ. ನಾವು ಅಧಿಕಾರಕ್ಕೆ ಬಂದು ಇನ್ನೂ 20 ದಿನ ಆಗಿಲ್ಲ. ಬಿಜೆಪಿಯವರನ್ನು ಜನ ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಸರ್ಕಾರದ ತಪ್ಪುಗಳಿದ್ದರೆ ಬಿಜೆಪಿಯವರು ತಿದ್ದುವ ಕೆಲಸ ಮಾಡಲಿ ಎಂದರು.