ಯುವ ಮತದಾರರನ್ನ ಸೆಳೆಯಲು ಬಿಜೆಪಿ ಮಾಸ್ಟರ್ ಪ್ಲಾನ್! – ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ರೀಲ್ಸ್ ಅಸ್ತ್ರ?

ಯುವ ಮತದಾರರನ್ನ ಸೆಳೆಯಲು ಬಿಜೆಪಿ ಮಾಸ್ಟರ್ ಪ್ಲಾನ್! – ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ರೀಲ್ಸ್ ಅಸ್ತ್ರ?

ಎಂಪಿ ಎಲೆಕ್ಷನ್​ಗೆ ಕೌಂಟ್​ಡೌನ್ ಶುರುವಾಗಿದೆ. ಗೆಲುವಿಗಾಗಿ ರಾಜಕೀಯ ಪಕ್ಷಗಳಲ್ಲಿ ಹತ್ತಾರು ಲೆಕ್ಕಾಚಾರ ನಡೀತಿದೆ. ಅದ್ರಲ್ಲೂ ಮತದಾರರ ಮನ ಗೆಲ್ಲೋಕೆ ನಾನಾ ಕಸರತ್ತುಗಳನ್ನ ಮಾಡ್ತಿದ್ದಾರೆ. ಇದೀಗ ಬಿಜೆಪಿ ನಾಯಕರು ಯುವ ಮತದಾರರನ್ನ ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿದ್ದು, ಯಂಗ್​ಸ್ಟರ್ಸ್​​ ವೋಟ್​​ ಮೇಲೆ ಬಿಜೆಪಿ ಕಣ್ಣಿಟ್ಟಿದ್ದಾರೆ. ಟಾಕ್​ವಾರ್ ಹೊರತಾಗಿ ರೀಲ್ಸ್ ರಾಜಕೀಯ ಶುರುವಾಗಲಿದೆ. 2024ರ ಚುನಾವಣೆಯಲ್ಲಿ ರೀಲ್ಸ್​ಗಳದ್ದೇ ಹವಾ ಇರಲಿದ್ದು, ಎಲೆಕ್ಷನ್​ ಹೊತ್ತಲ್ಲಿ ಯುವಕ ಯುವತಿಯರನ್ನ ಸೆಳೆಯೋದಕ್ಕೆ ಎರಡು ಪಕ್ಷಗಳು ಹೊಸ ತಂತ್ರ ರೂಪಿಸಿವೆ. ಮತದಾರರನ್ನು ಸೆಳೆಯಲು ವಿಭಿನ್ನವಾಗಿ ಗಿಮಿಕ್ ಮಾಡುವ ಬಿಜೆಪಿ ಇದೀಗ ರೀಲ್ಸ್ ಮಾಡುವವರ ಮೊರೆ ಹೋಗಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರಚಾರ ಕಾರ್ಯ ತಂತ್ರ ರೂಪಿಸಿದೆ. ಕರ್ನಾಟಕ ಬಿಜೆಪಿ ಯುವ ಮೋರ್ಚಾ ರಾಜ್ಯದ ಯುವ ಜನತೆಗೆ ರೀಲ್ಸ್ ಸ್ಪರ್ಧೆ ಹಮ್ಮಿಕೊಂಡಿದ್ದು, ಪ್ರಧಾನಿ ಮೋದಿ ಭೇಟಿಗೂ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದೆ.

ಇದನ್ನೂ ಓದಿ: ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..? – ಸಂಸದೆಯ ಪಾಡು ಈಗ ಅತ್ತಲೂ ಇಲ್ಲ ಇತ್ತಲೂ ಇಲ್ಲ

ಬಿಜೆಪಿ ರೀಲ್ಸ್ ಅಸ್ತ್ರ! 

ಮತದಾರರನ್ನು ಸೆಳೆಯಲು ಮತ್ತು ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನ ಜನರಿಗೆ ತಲುಪಿಸೋದಕ್ಕಾಗಿ ರೀಲ್ಸ್ ಅಸ್ತ್ರ ಪ್ರಯೋಗ ಮಾಡುತ್ತಿದೆ. ರೀಲ್ಸ್ ಮೂಲಕ ತಾವು ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ತಿಳಿಸೋದು ಇದರ ಉದ್ದೇಶ. ಇದಕ್ಕಾಗಿ ಅಂತ ಬಿಜೆಪಿ ನಮೋ ಭಾರತ್ ಪೆಲೋಶಿಪ್ ಕಾರ್ಯಕ್ರಮದಡಿ ರೀಲ್ಸ್ ಸ್ಪರ್ಧೆಯೊಂದನ್ನ ಆಯೋಜನೆ ಮಾಡುತ್ತಿದೆ. ಈ ಸ್ಪರ್ಧೆ ಒಂದು ತಿಂಗಳ ಕಾಲ ನಡೆಯಲಿದೆ. ಈ ಸ್ಪರ್ಧೆ ಉದ್ದೇಶ ಏನಂದ್ರೆ ಇನ್​ಸ್ಟಾದಲ್ಲಿ ಕಂಟೆಂಟ್ ಕ್ರಿಯೇಟ್​ ಮಾಡುವ ಕ್ರಿಯೇಟರ್ಸ್ ಮೋದಿ ಸರ್ಕಾರದ ಸಾಧನೆ ಬಗ್ಗೆ ರೀಲ್ಸ್ ಮಾಡಬೇಕು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಬಿಜೆಪಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮುಟ್ಟುವಂತ ರೀಲ್ಸ್ ಮಾಡಬೇಕು. ಒಂದು ತಿಂಗಳ ಕಾಲ ನಡೆಯೋ ಈ ಸ್ಫರ್ಧೆಯಲ್ಲಿ ಮೋದಿ ಸರ್ಕಾರದ ಸಾಧನೆ ಬಗ್ಗೆ ಯಾರು ಅಟ್ರಾಕ್ಟೀವ್ ಆಗಿ ರೀಲ್ಸ್ ಮಾಡ್ತಾರೋ ಅವರಿಗೆ ಮೋದಿ ಭೇಟಿಗೆ ಅವಕಾಶ ಸಿಗಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಯಾರು ಕ್ರಿಯೇಟಿವ್ ಆಗಿ ಬಿಜೆಪಿ ಸಾಧನೆಯನ್ನ ಜನರಿಗೆ ತಲುಪಿಸ್ತಾರೋ, ಯಾರ ರೀಲ್ಸ್​ಗೆ ಅತಿ ಹೆಚ್ಚು ವೀವ್ಸ್​ ಮತ್ತು ಲೈಕ್ಸ್ ಬಂದಿರತ್ತೋ, ಆ ಪೈಕಿ ಹತ್ತು ಜನರನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದವರ ಪೈಕಿ ಗರಿಷ್ಠ ಲೈಕ್ಸ್ ಪಡೆದ ಅತ್ಯುತ್ತಮ 10 ರೀಲ್ಸ್​ಗಳನ್ನು ಗುರುತಿಸಿ ಆ ಕ್ರಿಯೇಟರ್​ಗಳಿಗೆ ಮೋದಿ ಭೇಟಿ ಮಾಡುವ ಅವಕಾಶ ಸಿಗಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರ ಎಲ್ಲಾ ರೀಲ್ಸ್​​​ಗಳನ್ನು ಸೋಷಿಯಲ್ ಮೀಡಿಯಾ ಪೇಜ್​​ಗಳಲ್ಲಿ ಬಿಜೆಪಿ ಯುವ ಮೋರ್ಚಾ ಹಂಚಿಕೊಳ್ಳಲಿದೆ.

ಯುವ ಮತದಾರರು, ಯುವಕ-ಯುವತಿಯರನ್ನು ಸೆಳೆಯಲು ಬಿಜೆಪಿ ರೀಲ್ಸ್ ಮೊರೆ ಹೋಗಿದೆ. ಸೋಶಿಯಲ್ ಮೀಡಿಯಾಗಳ ತುಂಬಾ ರೀಲ್ಸ್​ಗಳದ್ದೇ ಹವಾ ಇರೋದ್ರಿಂದ ಒಂದೇ ಒಂದು ಗಂಟೆಯಲ್ಲಿ ರೀಲ್ಸ್ ವಿಡಿಯೋ ಲಕ್ಷಾಂತರ ಜನಕ್ಕೆ ರೀಚ್ ಆಗ್ಬಿಡುತ್ತೆ. ಮಿಲಿಯನ್​​ಗಟ್ಟಲೇ ವೀವ್ಸ್, ಲೈಕ್ಸ್,​ ಕಮೆಂಟ್ಸ್ ಸಿಗುತ್ತೆ. ಒಂದೊಂದು ವಾರ ಕಳೆದ್ರೂ ಆ ರೀಲ್ಸ್ ಗುಂಗು ಕಮ್ಮಿಯಾಗಿರಲ್ಲ. ಹೀಗಾಗಿ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳೋದಕ್ಕೆ ಕರ್ನಾಟಕ ಬಿಜೆಪಿ ಮುಂದಾಗಿದೆ. ವಿಶೇಷ ಏನಂದ್ರೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ರೀಲ್ಸ್​ಗಳ ಪೈಕಿ ಅತ್ಯುತ್ತಮವಾದ 3 ರೀಲ್ಸ್​​​ಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇತರ ರಾಜ್ಯ ನಾಯಕರು ತಮ್ಮ ಪೇಜ್​​ನಲ್ಲಿ ಹಂಚಿಕೊಳ್ಳಲಿದ್ದಾರೆ. ಆ ಪೈಕಿ ಹತ್ತು ಜನರಿಗೆ ಮೋದಿ ಭೇಟಿ ಮಾಡುವ ಚಾನ್ಸ್ ಸಿಗಲಿದೆ. ರೀಲ್ಸ್ ಕಂಟೆಂಟ್ ಏನು ಅನ್ನೋದನ್ನ ನೋಡೋದಾದ್ರೆ..

ನಾಲ್ಕು ಕಂಟೆಂಟ್ ಕೊಟ್ಟ ಬಿಜೆಪಿ! 

ಬಿಜೆಪಿ ಸರ್ಕಾರದ ಬಗ್ಗೆ ರೀಲ್ಸ್ ಮಾಡೋರಿಗೆ ಬಿಜೆಪಿಯೇ ನಾಲ್ಕು ಕಂಟೆಟ್​​ಗಳನ್ನ ಕೊಟ್ಟಿದೆ. ಮಹಿಳೆ, ಯುವಜನತೆ, ಅನ್ನದಾತ ಮತ್ತು ಬಡವ. ಈ ನಾಲ್ಕು ಸಬ್ಜೆಕ್ಟ್​ ಮೇಲೆ ಕ್ರಿಯೇಟರ್​​ಗಳು ರೀಲ್ಸ್ ಮಾಡ್ಬೇಕು. 90 ಸೆಕೆಂಡ್​ನಲ್ಲಿ ರೀಲ್ಸ್ ಮಾಡಬೇಕು. ಮತ್ತು ಆ ರೀಲ್ಸ್ ಹೆಚ್ಚು ವೀವ್ಸ್ ಲೈಕ್ ಪಡೆದಿರಬೇಕು. ಅಂತಹ ಕ್ರೀಯೇಟರ್​ಗಳನ್ನ ಆಯ್ಕೆ ಮಾಡಿ ಮೋದಿ ಭೇಟಿಗೆ ಅವಕಾಶ ಮಾಡಿ ಕೊಡಲಾಗುತ್ತೆ. ಈ ಮೂಲಕ ಡಿಜಿಟಲ್ ಪ್ಲಾಟ್​ಫಾರ್ಮ್ ಮೂಲಕ ಬಿಜೆಪಿ ಕೇಂದ್ರ ಸರ್ಕಾರದ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಲು ಪ್ಲ್ಯಾನ್ ಮಾಡಿದೆ.

ಈಗಾಗ್ಲೇ ಡಿಜಿಟಲ್ ಪ್ಲಾಟ್​ಫಾರ್ಮ್ ಬಳಸಿ ಸಮಾಜದಲ್ಲಿ ಸಕರಾತ್ಮಕ ಬದಲಾವಣೆಗೆ ಕಾರಣರಾದವರಿಗಾಗಿ ಮೋದಿ ಈ ಕ್ರಿಯೇಟರ್ಸ್ ಅವಾರ್ಡ್ ನೀಡಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಇಂತಾದೊಂದು ಅವಾರ್ಡ್ ನೀಡಲಾಗಿದ್ದು, ಈ ಮೂಲಕ ದೇಶ ಯೂತ್ಸ್​ಗೆ ಮೋದಿ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಫಿಟ್‌ನೆಸ್‌, ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆ ಪಸರಿಸುವುದು, ಪರಿಸರ ರಕ್ಷಣೆ, ಆರೋಗ್ಯಯುತ ಜೀವನ ಶೈಲಿ ಸೇರಿ ಹಲವು ರೀತಿಯಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದವರಿಗೆ ಪ್ರಶಸ್ತಿ ನೀಡಲಾಗಿದೆ. ಸದಾ ಒಂದಿಲ್ಲೊಂದು ಹೊಸ ತಂತ್ರಗಾರಿಕೆಯ ಮೂಲಕ ಯುವ ಮತದಾರರನ್ನು ಸೆಳೆಯಲು ರಣತಂತ್ರ ಮಾಡುವ ಬಿಜೆಪಿ ಹೊಸ ಮತದಾರರು, ಯುವಕ-ಯುವತಿಯರನ್ನು ಸೆಳೆಯಲು ರೀಲ್ಸ್ ಮೊರೆ ಹೋಗಿದೆ. ಸದ್ಯ ಕರ್ನಾಟಕ ಸೋಶಿಯಲ್ ಮೀಡಿಯಾದಲ್ಲಿ ಉಪ್ಪಿಯ ಯುಐ ಟ್ರೋಲ್ ಸಾಂಗ್, ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್, ರಾಹುಲ್ಲಾ ಟ್ರೆಂಡಿಂಗ್​ನಲ್ಲಿದ್ದು ಇನ್ಮುಂದೆ ಬಿಜೆಪಿ ಮತ್ತು ಮೋದಿ ಟ್ರೆಂಡಿಂಗ್ ಶುರುವಾದ್ರೂ ಅಚ್ಚರಿ ಪಡಬೇಕಿಲ್ಲ.

Shwetha M