175 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಗೆ ಕೌಂಟ್ ಡೌನ್ – ಬಿಜೆಪಿಯಲ್ಲಿ ಯಾರಿಗೆಲ್ಲಾ ಟಿಕೆಟ್ ಮಿಸ್?
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಮತದಾನಕ್ಕೆ ಇನ್ನೊಂದೇ ತಿಂಗಳು ಬಾಕಿ ಉಳಿದಿದ್ದು, ಬಾರೀ ಕುತೂಹಲ ಮೂಡಿಸಿದೆ. ಚುನಾವಣೆಗೆ(Karnataka Assembly Elections 2023) ಈಗಾಗಲೇ ಕಾಂಗ್ರೆಸ್‌ನ ಎರಡು ಪಟ್ಟಿಯಲ್ಲಿ 166 ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗಿದೆ. ಜೆಡಿಎಸ್ ತನ್ನ 93 ಅಭ್ಯರ್ಥಿಗಳ ಒಂದು ಪಟ್ಟಿಯನ್ನು ಸಹ ಪ್ರಕಟಿಸಿದೆ. ಆದ್ರೆ, ಈವರೆಗೂ ಯಾವ ಅಭ್ಯರ್ಥಿಯ ಹೆಸರನ್ನೂ ಬಿಡುಗಡೆ ಮಾಡದ ಆಡಳಿತರೂಢ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದು ಇಂದು(ಏಪ್ರಿಲ್ 10)ರಂದು ಯಾವುದೇ ಕ್ಷಣದಲ್ಲಾದರೂ ಬಿಡುಗಡೆಯಾಗಬಹುದು.
ಇದನ್ನೂ ಓದಿ : 2 ಕ್ಷೇತ್ರಗಳ ಟಿಕೆಟ್ ಗೆ ಪರಮೇಶ್ವರ್ ಪಟ್ಟು – ಸಿದ್ದುಗೆ ಕೋಲಾರ ಟಿಕೆಟ್ ನೀಡದಂತೆ ಹೈಕಮಾಂಡ್ ಗೆ ಪತ್ರ!
ಕಾಂಗ್ರೆಸ್, ಜೆಡಿಎಸ್ ನಾಯಕರು ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಿದ್ದರೂ ಕೂಡ ಬಿಜೆಪಿ ಈವರೆಗೂ ಯಾವ ಕ್ಷೇತ್ರಕ್ಕೂ ಅಧಿಕೃತವಾಗಿ ಹೆಸರನ್ನ ಘೋಷಿಸಿಲ್ಲ. ಎರಡು ವಾರಗಳಿಂದ ಸರಣಿ ಸಭೆಗಳನ್ನ ಮಾಡಿರುವ ನಾಯಕರು 175 ಅಭ್ಯರ್ಥಿಗಳ ಪಟ್ಟಿಯನ್ನ ರೆಡಿ ಮಾಡಿದ್ದಾರೆ. ಟಿಕೆಟ್ ಘೋಷಣೆಗೂ ಮುನ್ನ ಬಿಜೆಪಿ ನಾಯಕರು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ದೆಹಲಿಯಲ್ಲಿ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಟಿಕೆಟ್ ಸಿಗುತ್ತೋ ಇಲ್ವೋ ಎಂದು ಆಕಾಂಕ್ಷಿಗಳು ಆತಂಕದಲ್ಲಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಸರಣಿ ಸಭೆಗಳು, ಸುದೀರ್ಘ ಚರ್ಚೆಗಳು ನಡೆಯುತ್ತಿದ್ದರೆ ಇತ್ತ ಬಿಜೆಪಿಯ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಈ ಬಾರಿ 16 ಅಥವಾ ಅದಕ್ಕಿಂತ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗುತ್ತೆ ಎನ್ನುವ ಮಾಹಿತಿ ಬಿಜೆಪಿ ಪಾಳಯದಿಂದಲೇ ತಿಳಿದುಬಂದಿದೆ. ಹೀಗಾಗಿ ಕೇಸರಿ ಮನೆಯಲ್ಲಿ ಕಂಪನ ಎದ್ದಿದ್ದು, ಯಾರಿಗೆ ಟಿಕೆಟ್ ಮಿಸ್ಸಾಗುತ್ತೋ ಎನ್ನುವ ತಳಮಳ ಶುರುವಾಗಿದೆ. ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.